ಅಮೃತಸರ( ಪಂಜಾಬ್): ಇಲ್ಲಿನ ದಾವೋಕೆ ಗ್ರಾಮ ಸಮೀಪದ ಪಾಕಿಸ್ತಾನ - ಭಾರತದ ಗಡಿ ಬಳಿ ಬಿಎಸ್ಎಫ್ ಯೋಧರು ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ, ಒಂದು ಡ್ರೋನ್ ಸಹಿತ 500 ಗ್ರಾಂ ಹೆರಾಯಿನ್, ಒಂದು ಖಾಲಿ ಪಿಸ್ತೂಲ್ ಮ್ಯಾಗಜೀನ್ ಮತ್ತು ಒಂದು ಹಸಿರು ಬಣ್ಣದ ಮಿನಿ ಟಾರ್ಚ್ ವಶಪಡಿಸಿಕೊಂಡಿದ್ದಾರೆ. ಹೆರಾಯಿನ್ಗೆ ಹಳದಿ ಬಣ್ಣದ ಟೇಪ್ನಿಂದ ಸುತ್ತಲಾಗಿತ್ತು. ವಶಪಡಿಸಿಕೊಳ್ಳಲಾದ ಡ್ರೋನ್ ಕ್ವಾಡ್ಕಾಪ್ಟರ್ ಅನ್ನು ಚೀನಾದಲ್ಲಿ ತಯಾರಿಸಿದ ಡಿಜೆಐ ಮಾವಿಕ್ 3 ಕ್ಲಾಸಿಕ್ ಎಂದು ಗುರುತಿಸಲಾಗಿದೆ. ಡ್ರೋನ್ ಮೂಲಕ ಮಾದಕ ವಸ್ತುಗಳನ್ನು ಸಾಗಿಸುವ ಪಾಕಿಸ್ತಾನಿ ಕಳ್ಳಸಾಗಣೆದಾರರ ಪ್ರಯತ್ನವನ್ನು ಬಿಎಸ್ಎಫ್ ಪಡೆಗಳು ವಿಫಲಗೊಳಿಸಿವೆ.
ಕಳೆದ ವರ್ಷ 69 ಪಾಕ್ ಡ್ರೋನ್ ಬಿಎಸ್ಎಫ್ ವಶ (ನವದೆಹಲಿ): ಮಾದಕವಸ್ತು, ಬಂದೂಕುಗಳನ್ನು ಹೊತ್ತು ಅಕ್ರಮವಾಗಿ ಭಾರತದ ಗಡಿ ದಾಟಿ ಬಂದ 69 ಪಾಕಿಸ್ತಾನಿ ಡ್ರೋನ್‌ಗಳನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಕಳೆದ ವರ್ಷ ವಶಪಡಿಸಿಕೊಂಡಿತ್ತು. ಇವುಗಳಲ್ಲಿ ಹೆಚ್ಚಿನವು ಚೀನಾ ನಿರ್ಮಿತವಾಗಿವೆ ಎಂದು ಗಡಿ ಭದ್ರತಾ ಪಡೆ ತಿಳಿಸಿತ್ತು. ಅಂಕಿ ಅಂಶಗಳ ಪ್ರಕಾರ, ಪಂಜಾಬ್, ರಾಜಸ್ಥಾನ ಮತ್ತು ಜಮ್ಮು ಗಡಿಗಳಲ್ಲಿ ಈ ಡ್ರೋನ್‌ಗಳು ಹಾರಿ ಬಂದಿದ್ದವು. 2023 ಜನವರಿ 1 ರಿಂದ ಅಕ್ಟೋಬರ್ 31 ರ ನಡುವೆ ಒಟ್ಟು 69 ಡ್ರೋನ್‌ಗಳು ಬಿಎಸ್‌ಎಫ್ ವಶಕ್ಕೆ ಸಿಕ್ಕಿದ್ದವು. ಇದರಲ್ಲಿ 60 ಪಂಜಾಬ್ ಗಡಿಯಲ್ಲಿ ಮತ್ತು 9 ಅನ್ನು ರಾಜಸ್ಥಾನ ಗಡಿಯಿಂದ ಜಪ್ತಿ ಮಾಡಲಾಗಿತ್ತು.
ಪಂಜಾಬ್‌ನಿಂದ 19 ಮತ್ತು ರಾಜಸ್ಥಾನ ಗಡಿಯಲ್ಲಿ ಎರಡು ಸೇರಿದಂತೆ ಅಕ್ಟೋಬರ್‌ನಲ್ಲಿ ತಿಂಗಳೊಂದರಲ್ಲಿ ಗರಿಷ್ಠ ಅಂದರೆ 21 ಡ್ರೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜೂನ್‌ನಲ್ಲಿ 11, ಮೇ ತಿಂಗಳಲ್ಲಿ ಏಳು, ಫೆಬ್ರವರಿ, ಜುಲೈ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ ಆರು, ಆಗಸ್ಟ್ನಲ್ಲಿ ಐದು, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ತಲಾ ಮೂರು, ಜನವರಿಯಲ್ಲಿ ಒಂದು ಡ್ರೋನ್ ಸಿಕ್ಕಿದ್ದವು. ವಿಶೇಷವಾಗಿ ಜನವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಜಸ್ಥಾನ ಗಡಿಯಲ್ಲಿ ಯಾವುದೇ ಡ್ರೋನ್ ಕಂಡು ಬಂದಿರಲಿಲ್ಲ. ಇದರ ಜೊತೆಗೆ 2020ರ ಜನವರಿ 1 ರಿಂದ ಈ ವರ್ಷದ ಅಕ್ಟೋಬರ್ 31 ರವರೆಗೆ ಲೆಕ್ಕ ಹಾಕಿದಲ್ಲಿ ಒಟ್ಟು 93 ಡ್ರೋನ್‌ಗಳು ಸಿಕ್ಕಿದ್ದವು. ಇದರಲ್ಲಿ ಒಂದು ಡ್ರೋನ್ ಅನ್ನು 2020 ರ ಜೂನ್ ತಿಂಗಳಲ್ಲಿ ಮತ್ತು 2021 ರ ಡಿಸೆಂಬರ್ನಲ್ಲಿ ಜಮ್ಮು ಗಡಿಯಿಂದ ವಶಪಡಿಸಿಕೊಳ್ಳಲಾಗಿತ್ತು.
ಇದನ್ನೂ ಓದಿ: ಭಾರತ - ಪಾಕಿಸ್ತಾನ ಗಡಿಯಲ್ಲಿ ಬಿಎಸ್ಎಫ್ ಪಡೆಯಿಂದ 'ಆಪರೇಷನ್ ಸರ್ದ್ ಹವಾ'