ನವದೆಹಲಿ: ಲೋಕಸಭೆ ಚುನಾವಣೆ ಕಾವಿನ ಮಧ್ಯೆ ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಮತ್ತು ಕಾಂಗ್ರೆಸ್ ನಾಯಕ ವಿಜೇಂದರ್ ಸಿಂಗ್ ಇಂದು ಬಿಜೆಪಿ ಸೇರಿದ್ದಾರೆ. ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸಮ್ಮುಖದಲ್ಲಿ ಕಮಲ ಪಾಳಯ ಸೇರ್ಪಡೆಯಾದರು.
ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸರ್. ಒಲಿಂಪಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಪರ ಮೊದಲು ಪದಕ ಗೆದ್ದ ಬಾಕ್ಸರ್ ಎಂಬ ಖ್ಯಾತಿ ಹೊಂದಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಎರಡು ಬೆಳ್ಳಿ ಮತ್ತು ಒಂದು ಕಂಚು ವಿಜೇತರಾಗಿದ್ದಾರೆ.
ಹರಿಯಾಣದ ಭಿವಾನಿ ಮೂಲದ ಇವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ದೆಹಲಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಸತತ ಮೂರನೇ ಬಾರಿಗೆ ಕಣದಲ್ಲಿರುವ ಬಿಜೆಪಿಯ ಹೇಮಾಮಾಲಿನಿ ವಿರುದ್ಧ ಮಥುರಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ವಿಜೇಂದರ್ ಸಿಂಗ್ ಅವರನ್ನು ಕಣಕ್ಕಿಳಿಸಬಹುದು ಎಂಬ ಸುದ್ದಿ ಹರಡಿತ್ತು. ಇದರ ನಡುವೆಯೇ ಅವರು ಬಿಜೆಪಿ ಸೇರಿದ್ದಾರೆ.
"ಐದು ವರ್ಷಗಳ ನಂತರ ಇಂದು ನನ್ನ ಮನೆಗೆ ಮರಳಿದಂತಾಗಿದೆ. ಬಿಜೆಪಿ ಸರ್ಕಾರ ಆಟಗಾರರಿಗೆ ನೀಡಿದ ಗೌರವ ನನಗೆ ಸ್ಫೂರ್ತಿ'' ಎಂದು ವಿಜೇಂದರ್ ಸಿಂಗ್ ತಿಳಿಸಿದರು. ಕಳೆದ ವಾರವಷ್ಟೇ, ''ಜನರು ಬಯಸಿದ ಕಡೆ ಇರಲು ನಾನು ಸಿದ್ಧ" ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಸಿಂಗ್ ಮಾರ್ಮಿಕ ಪೋಸ್ಟ್ ಮಾಡಿದ್ದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ವಿಜಯೇಂದರ್ ಸಿಂಗ್ ಪಾಲ್ಗೊಂಡಿದ್ದರು. ಮೊದಲಿಗೆ ಮಧ್ಯಪ್ರದೇಶದ ಖಾರ್ಗೋನ್ ನಂತರ ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲೂ ರಾಹುಲ್ ಅವರೊಂದಿಗೆ ಹೆಜ್ಜೆ ಹಾಕಿದ್ದರು. ರಾಹುಲ್ ಗಾಂಧಿ ಮತ್ತು ವಿಜೇಂದರ್ ಸಿಂಗ್ ಇಬ್ಬರೂ ಕ್ಯಾಮೆರಾಗೆ ಮುಷ್ಠಿ ಹಿಡಿದು ಪೋಸ್ ನೀಡಿದ್ದೂ ಸೇರಿದಂತೆ ಹಲವು ಫೋಟೋಗಳು ವೈರಲ್ ಆಗಿದ್ದವು.
ರಾಹುಲ್, ವಿಜೇಂದರ್ ಮುಷ್ಠಿಕಟ್ಟಿದ ಫೋಟೋ ಹಂಚಿಕೊಂಡಿದ್ದ ಕಾಂಗ್ರೆಸ್ 'ಏಕ್ ಪಂಚ್ ನಫ್ರತ್ ಕೆ ಖಿಲಾಫ್' (ದ್ವೇಷದ ವಿರುದ್ಧ ಒಂದು ಪಂಚ್)" ಎಂದು ಬರೆದಿತ್ತು. ಈ ಪೋಸ್ಟ್ ಅನ್ನು ವಿಜೇಂದರ್ ಸಿಂಗ್ ಮರು ಟ್ವೀಟ್ ಸಹ ಮಾಡಿದ್ದರು. ಹರಿಯಾಣದಲ್ಲಿ ಪ್ರಾಬಲ್ಯ ಹೊಂದಿರುವ ಜಾಟ್ ಸಮುದಾಯಕ್ಕೆ ವಿಜೇಂದರ್ ಸಿಂಗ್ ಸೇರಿದ್ದಾರೆ. ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲೂ ಜಾಟ್ ಸಮುದಾಯ ರಾಜಕೀಯ ಪ್ರಾಬಲ್ಯ ಹೊಂದಿದೆ.
ಇದನ್ನೂ ಓದಿ: ವಯನಾಡಿನಲ್ಲಿ ಭರ್ಜರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ