ನವದೆಹಲಿ: ವಿಮಾನಗಳಿಗೆ ಬರುತ್ತಿರುವ ಹುಸಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ. ಈ ರೀತಿ ಕರೆ ಮಾಡುವವರಿಗೆ ವಿಮಾನ ಪ್ರಯಾಣಕ್ಕೆ ಅನುಮತಿ ನೀಡದಂತೆ ಅವರನ್ನು 'ನೋ ಫ್ಲೈ ಲಿಸ್ಟ್ ಪಟ್ಟಿ'ಗೆ ಸೇರಿಸುವ ಚಿಂತನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಸಿ ಕರೆಗಳನ್ನು ತಡೆಗಟ್ಟುವ ಉದ್ದೇಶದಿಂದ ಸಚಿವಾಲಯವು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ (ಬಿಸಿಎಎಸ್) ಸೇರಿದಂತೆ ಅಸ್ತಿತ್ವದಲ್ಲಿರುವ ನಿಯಮಗಳಿಗೆ ತಿದ್ದುಪಡಿ ತರಲು ಚಿಂತಿಸುತ್ತಿದೆ. ಇದರಡಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಖಾತ್ರಿಗೊಳಿಸುವ ಆದೇಶ ಜಾರಿಗೂ ಸಿದ್ಧತೆ ನಡೆದಿದೆ ಎಂದು ತಿಳಿದು ಬಂದಿದೆ.
ವಿಮಾನಗಳಲ್ಲಿ ಬಾಂಬ್ ಇದೆ ಎಂದು ಸುಳ್ಳು ಕರೆ ಮಾಡುವವರನ್ನು ನೋ ಫ್ಲೈ ಲಿಸ್ಟ್ಗೆ ಸೇರಿಸುವ ಕುರಿತ ಪ್ರಸ್ತಾಪದ ಪರಿಶೀಲನೆ ನಡೆಯುತ್ತಿದೆ. ನಿಯಮಗಳ ಬದಲಾವಣೆಗೆ ಸಂಬಂಧಿಸಿದಂತೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ವಿಮಾನ ಹಾರಾಟದ ವೇಳೆ ದುರ್ವರ್ತನೆ ತೋರುವ ಪ್ರಯಾಣಿಕರ ವಿರುದ್ಧ ಮಾತ್ರ ಕಠಿಣ ಕ್ರಮ ಕೈಗೊಳ್ಳಲು ನಿಯಮವಿದೆ. ಇದರ ಹೊರತು ಸಾಮಾಜಿಕ ಜಾಲತಾಣದ ಮೂಲಕ ಹುಸಿ ಬಾಂಬ್ ಕರೆ ಮಾಡಿದವರ ವಿರುದ್ಧ ಕ್ರಮಕ್ಕೆ ಯಾವುದೇ ದಾರಿ ಇಲ್ಲದಂತಾಗಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈ ಎಂದ ಆರೋಪಿಗೆ ಕೋರ್ಟ್ನಿಂದ ವಿಶಿಷ್ಟ ಶಿಕ್ಷೆ: ಇನ್ನು ಆತನಿಗೆ ಭಾರತಾಂಬೆಯದ್ದೇ ಜಪ!