ಧರ್ಮಶಾಲಾ(ಹಿಮಾಚಲ ಪ್ರದೇಶ ): ಹಿಮಾಚಲ ಪ್ರದೇಶದ ಬಿಲ್ಲಿಂಗ್ ಕಣಿವೆಯ ಹಿಮದಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ ಇಬ್ಬರ ಶವಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸುಮಾರು ಎರಡು ದಿನಗಳ ಕಾಲ ಸಾಕು ನಾಯಿ ಮೃತದೇಹದ ರಕ್ಷಣೆಗೆ ನಿಂತಿತ್ತು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಮಹಿಳೆ ಸೇರಿದಂತೆ ಇಬ್ಬರು ಪ್ರವಾಸಿಗರು ಭಾನುವಾರ ಕಣಿವೆಯಲ್ಲಿ ನಾಪತ್ತೆಯಾಗಿದ್ದರು. ಮಂಗಳವಾರ ಇಬ್ಬರನ್ನು ಹುಡುಕುತ್ತಿದ್ದ ರಕ್ಷಣಾ ತಂಡಗಳಿಗೆ ಜರ್ಮನ್ ಶೆಫರ್ಡ್ ನಾಯಿಯೊಂದು ಬೊಗಳುತ್ತಿರುವ ಶಬ್ದ ಕೇಳಿಸಿದೆ. ಆ ಶಬ್ದವನ್ನೇ ಅನುಸರಿಸಿ ಹೊರಟ ಅವರಿಗೆ ಪ್ಯಾರಾಗ್ಲೈಡರ್ ಟೇಕ್-ಆಫ್ ಪಾಯಿಂಟ್‌ನಿಂದ ಮೂರು ಕಿಲೋಮೀಟರ್ ಕೆಳಗೆ ವಾಕಿಂಗ್ ಟ್ರೇಲ್‌ನ ಬದಿಯಲ್ಲಿ ಮೃತದೇಹಗಳು ಕಂಡವು ಎಂದು ಹೇಳಿದ್ದಾರೆ.
ಆಲ್ಫಾ ಎಂಬ ಸಾಕು ನಾಯಿಯು ಸುಮಾರು ಎರಡು ದಿನಗಳವರೆಗೆ ಮೃತ ದೇಹಗಳ ಕಾವಲಿಗೆ ನಿಂತಿತ್ತು. ಇದರ ಮೈಮೇಲೆ ಕಾಡು ಪ್ರಾಣಿಗಳ ದಾಳಿಯ ಗುರುತುಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ರಕ್ಷಣಾ ತಂಡಗಳು ಶವಗಳನ್ನು ಹೊರತೆಗೆದ ನಂತರ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಅವುಗಳನ್ನು ಸಾಗಿಸಿದ ಸ್ಥಳದಿಂದ ಪ್ಯಾರಾಗ್ಲೈಡಿಂಗ್ ತಾಣವಾದ ಬಿರ್ ಬಿಲ್ಲಿಂಗ್ ತನಕ ನಾಯಿಯು ಕಾಲ್ನಡಿಗೆಯಲ್ಲಿಯೇ ಅವರೊಂದಿಗೆ ಬಂದಿದೆ.
ಮೃತರನ್ನು ಪಠಾಣ್‌ಕೋಟ್ ನಿವಾಸಿ ಅಭಿನಂದನ್ ಗುಪ್ತಾ (30) ಮತ್ತು ಪುಣೆ ಮೂಲದ ಪ್ರಣಿತಾ ವಾಲಾ (26) ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ವಿಶ್ವಪ್ರಸಿದ್ಧ ಪ್ಯಾರಾಗ್ಲೈಡಿಂಗ್ ತಾಣವಾದ ಬಿರ್ ಬಿಲ್ಲಿಂಗ್‌ಗೆ ಅವರು ಆಗಮಿಸಿದ್ದರು ಎಂಬುದು ತಿಳಿದುಬಂದಿದೆ.
ತೀವ್ರ ಚಳಿಯಿಂದಾಗಿ ಮೃತಪಟ್ಟಿರುವ ಶಂಕೆ: ಗುಪ್ತಾ ಹಾಗೂ ವಾಲಾ ಅವರಿಬ್ಬರು ನಾಯಿಯೊಂದಿಗೆ ಖಾಸಗಿ ಕಾರಿನಲ್ಲಿ ಇಲ್ಲಿಗೆ ಬಂದಿದ್ದರು. ಕಾರನ್ನು ನಿಲ್ಲಿಸಿದ ನಂತರ ಅವರು ಪ್ಯಾರಾಗ್ಲೈಡರ್‌ಗಳಿಗಾಗಿ ಟೇಕ್-ಆಫ್ ಪಾಯಿಂಟ್‌ಗೆ ಕಾಲ್ನಡಿಗೆಯಲ್ಲಿಯೇ ಹೊರಟಿದ್ದರು. ಇಬ್ಬರೂ ಬಿರ್ ಬಿಲ್ಲಿಂಗ್ ಬಳಿಯ ಚೋಗನ್‌ಗೆ ಹಿಂತಿರುಗದಿದ್ದಾಗ, ಅವರ ಸ್ನೇಹಿತರು ಸೋಮವಾರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ರಕ್ಷಣಾ ತಂಡವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಮಂಗಳವಾರ ಮೃತದೇಹಗಳನ್ನು ಪತ್ತೆ ಮಾಡಿತು. ಪ್ರಾಥಮಿಕ ತನಿಖೆಯ ಪ್ರಕಾರ, ತೀವ್ರ ಚಳಿಯಿಂದಾಗಿ ಪುರುಷ ಮತ್ತು ಮಹಿಳೆ ಹಿಮದಲ್ಲಿ ಜಾರಿಬಿದ್ದು, ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಕಂಗ್ರಾ ಎಎಸ್ಪಿ ವೀರ್ ಬಹದ್ದೂರ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಮೃತ ಯುವಕನ ಮನೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶ್ವಾನ!