ಛಿಂದ್ವಾರಾ (ಮಧ್ಯಪ್ರದೇಶ) : ಚಂದನ್ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ರಾಜೇಂದ್ರ ಕೈತ್ವಾಸ್ ಬಾಲ್ಯದಿಂದಲೇ ದೃಷ್ಟಿ ಕಳೆದುಕೊಂಡವರು. ಕಷ್ಟಪಟ್ಟು ಓದಿದ ನಂತರ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ತನ್ನ ಕಣ್ಣುಗಳಿಂದ ಜಗತ್ತನ್ನು ನೋಡಲಾಗುತ್ತಿಲ್ಲವಲ್ಲ ಎಂಬ ಕೊರಗು ಅವರನ್ನು ಬೆಂಬಿಡದೆ ಕಾಡುತ್ತಿತ್ತು. ಆದರೆ ಇಂತಹ ಪರಿಸ್ಥಿತಿಯಲ್ಲೂ ಅವರು ನಿರಂತರವಾಗಿ ಶಿಕ್ಷಣದ ಬೆಳಕನ್ನು ಹರಡುತ್ತಿದ್ದಾರೆ. ತನ್ನ ಸ್ನೇಹಿತರೊಬ್ಬರಿಂದ ದುರ್ಗಾ ಯಾದವ್ ಅವರ ಪರಿಚಯವಾಗಿದೆ. ಅಲ್ಲಿಂದ ಇವರಿಬ್ಬರು ಪರಸ್ಪರ ಪ್ರೀತಿಸಲು ಪ್ರಾರಂಭಿಸಿದ್ದಾರೆ. 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಇವರ ಪ್ರೀತಿ ಬೆಳೆಯತ್ತಲೇ ಬಂದಿದೆ.
ಛಿಂದ್ವಾರಾ ಅಂಧ ದಂಪತಿಗೆ ವಿಶೇಷ ವ್ಯಾಲೆಂಟೈನ್ಸ್ ಡೇ : ಪ್ರಪಂಚದಾದ್ಯಂತ ಜನರು ಪ್ರೇಮಿಗಳ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಶಿಕ್ಷಕ ರಾಜೇಂದ್ರ ಕೈತವಾಸ್ ಕೂಡ ತಮ್ಮ ಹೆಂಡತಿಯನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಪ್ರೇಮಿಗಳ ದಿನವನ್ನು ಆಚರಿಸಲು ಬಯಸಿದ್ದರು. ಆದರೆ ತನಗೆ ದೃಷ್ಟಿದೋಷ ಇರುವುದರಿಂದಾಗಿ ತಾನು ವಿದೇಶಕ್ಕೆ ಪ್ರಯಾಣ ಕೈಗೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲವೆಂದು ಮನಗಂಡಿದ್ದಾರೆ. ಹೀಗಾಗಿ ವಿದೇಶಕ್ಕೆ ಹೋಗಲು ಸಾಧ್ಯವಾಗದೇ ಇರುವುದರಿಂದ ಅಲ್ಲಿಂದಲೇ ಗುಲಾಬಿಯನ್ನು ತರಿಸಿ, ತನ್ನ ಹೆಂಡತಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ.
ಭಾವನೆಗಳ ವ್ಯಕ್ತಪಡಿಸುವಿಕೆಗಾಗಿ ಉಡುಗೊರೆ : ಈಟಿವಿ ಭಾರತ್ ಶಿಕ್ಷಕ ರಾಜೇಂದ್ರ ಕೈತ್ವಾಸ್ ಅವರನ್ನು ಈ ಕುರಿತು ಮಾತನಾಡಿಸಿದಾಗ ಪ್ರತಿಕ್ರಿಯಿಸಿದ ಅವರು, ಪ್ರೇಮಿಗಳ ದಿನದಂದು ನಾನು ಗುಲಾಬಿಗಳನ್ನು ಖರೀದಿಸುತ್ತೇನೆ. ಅದನ್ನು ಜಗತ್ತಿಗೆ ತೋರಿಸಲು ಅಲ್ಲ. ಬದಲಾಗಿ ನನ್ನ ಭಾವನೆಗಳನ್ನು ಸಂಗಾತಿಯೊಂದಿಗೆ ವ್ಯಕ್ತಪಡಿಸಲು ಎಂದಿದ್ದಾರೆ. ರಾಜೇಂದ್ರ ಕೈತ್ವಾಸ್ ಅವರು ತಮ್ಮ ಫೋಟೋವನ್ನು ಸ್ವತಃ ನೋಡಲಾಗುವುದಿಲ್ಲ ಎಂಬ ಕಾರಣಕ್ಕೆ ಜೀವನ ಸಂಗಾತಿಯೊಂದಿಗೆ ಎಂದಿಗೂ ಫೋಟೋ ತೆಗೆದಿಸಿಕೊಂಡಿಲ್ಲವಂತೆ. ಹೀಗಾಗಿ ಪ್ರೇಮಿಗಳ ದಿನದಂದು ಹೂವನ್ನು ನೀಡುವ ಮೂಲಕ ಮಡದಿಯೊಂದಿಗೆ ತಮ್ಮ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಬಣ್ಣಗಳಿಂದ ತುಂಬಿರುವ ರಾಜೇಶ್ ಜೀವನ : ರಾಜೇಂದ್ರ ಕೈತ್ವಾಸ್ ಅವರು ಹೊರ ಜಗತ್ತನ್ನು ತಮ್ಮ ಕಣ್ಣಿನಿಂದ ನೋಡದಿದ್ದರೂ, ಅವರ ಆಂತರಿಕ ಪ್ರಪಂಚವು ಬಣ್ಣಗಳಿಂದ ತುಂಬಿದೆ. ಅವರ ಹೆಂಡತಿಯೂ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಅಂಧರಾಗಿದ್ದರೂ ಕೂಡಾ ತಮ್ಮ ಕೆಲಸವನ್ನು ತಾವೇ ಮಾಡುತ್ತಾರೆ. ಅಷ್ಟೇ ಅಲ್ಲ, ಸ್ವಚ್ಛತೆಯ ಬಗೆಗಿನ ಅವರಿಗಿರುವ ಅರಿವನ್ನು ನೋಡಿ ಎಲ್ಲರೂ ಹೊಗಳುತ್ತಾರೆ. ಪ್ರತಿದಿನ, ದಂಪತಿಗಳಿಬ್ಬರೂ ತಮ್ಮ ಮನೆಯಿಂದ ಉತ್ಪತ್ತಿಯಾಗುವ ಕಸವನ್ನು ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಡಸ್ಟ್‌ಬಿನ್‌ಗೆ ಹಾಕಿ ಬರುತ್ತಾರೆ. ಇದಕ್ಕೆ ಅವರಿಗೆ ಯಾರ ಬೆಂಬಲವೂ ಬೇಕಾಗಿಲ್ಲ. ಅಲ್ಲದೆ ಶಾಲೆಯಿಂದ ಹಿಡಿದು ಎಲ್ಲ ಕೆಲಸಗಳನ್ನು ಯಾರ ಬೆಂಬಲವೂ ಇಲ್ಲದೇ ಇಬ್ಬರೂ ಒಟ್ಟಿಗೆ ಮಾಡುತ್ತಾರೆ.
ಅಮೆರಿಕದಿಂದ ಬರಲಿವೆ ಗುಲಾಬಿ ಹೂಗಳು : ಶಿಕ್ಷಕ ರಾಜೇಂದ್ರ ಕೈತ್ವಾಸ್ ಅವರು ವಿದೇಶದಿಂದ ಗುಲಾಬಿಗಳನ್ನು ತಂದು ದೃಷ್ಟಿ ವಿಕಲಚೇತನ ಪತ್ನಿಗೆ ನೀಡಲು ಆನ್‌ಲೈನ್ ಸಹಾಯವನ್ನು ಪಡೆದುಕೊಂಡಿದ್ದಾರೆ. ಶಾಲೆಯ ಇತರ ಸಹ ಶಿಕ್ಷಕರ ಸಹಾಯದಿಂದ ಬುಕ್ಕಿಂಗ್ ಮಾಡುವುದಾಗಿ ತಿಳಿಸಿದ್ದಾರೆ. ಈ ಬಾರಿಯೂ ಆನ್‌ಲೈನ್‌ನಲ್ಲಿ ಗುಲಾಬಿ ಹೂಗಳನ್ನು ಬುಕ್ ಮಾಡಿದ್ದಾರೆ. ಶೀಘ್ರದಲ್ಲೇ ಅಮೆರಿಕದಿಂದ ಗುಲಾಬಿ ಹೂವುಗಳು ಅವರನ್ನು ತಲುಪಲಿವೆ. ಅವರು ತಮ್ಮ ಪತ್ನಿ ದುರ್ಗಾ ಅವರಿಗೆ ಗುಲಾಬಿಗಳನ್ನು ನೀಡುವ ಮೂಲಕ ಮತ್ತೊಮ್ಮೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ : ತಿಂಗಳಿಗೊಮ್ಮೆ ಪ್ರೇಮಿಗಳ ದಿನ ಆಚರಣೆಯೂ ಇದೆ.. ಈ ದಿನ ಆಚರಿಸೋದು ಎಲ್ಲಿ?