ನವದೆಹಲಿ: ಕೇರಳದ ವಯನಾಡ್ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಅವಮಾನಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತ ವಿಡಿಯೋ ಹಂಚಿಕೊಂಡಿರುವ ಪಕ್ಷದ ಹಲವು ನಾಯಕರು, "ಪಕ್ಷದಲ್ಲಿ ಗಾಂಧಿ ಕುಟುಂಬದ ಸದಸ್ಯರೇ ಮೊದಲೆಂಬುದು ಮತ್ತೆ ಸಾಬೀತಾಗಿದೆ. ದೇಶದ ಹಿರಿಯ ರಾಜಕಾರಣಿಯನ್ನು ದಲಿತ ಎಂಬ ಕಾರಣಕ್ಕಾಗಿ ಅವಮಾನಕ್ಕೀಡು ಮಾಡಲಾಗಿದೆ" ಎಂದು ಟೀಕಿಸಿದ್ದಾರೆ.
ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಪ್ರಿಯಾಂಕಾ ನಾಮಪತ್ರ ಸಲ್ಲಿಕೆಯ ವೇಳೆ ಮಲ್ಲಿಕಾರ್ಜುನ್ ಖರ್ಗೆ ಅವರು ಚುನಾವಣಾಧಿಕಾರಿ ಕಚೇರಿಯ ಹೊರಭಾಗದಲ್ಲಿ ನಿಂತಿರುವ ಹಾಗೆ ಕಾಣುತ್ತಿದ್ದಾರೆ. ಸಿಬ್ಬಂದಿ ಅವರನ್ನು ಬಾಗಿಲಲ್ಲೇ ತಡೆದು ನಿಲ್ಲಿಸಿದಂತೆ ಗೋಚರಿಸುತ್ತದೆ.
Where were you @kharge Saheb ? when first family Priyanka Vadra ji was filing her nomination as Cong candidate for #Wayanad
— Rajeev Chandrasekhar 🇮🇳 (@RajeevRC_X) October 23, 2024
Kept outside - bcoz hes not family.🤮🤬
Self-respect & dignity sacrificed at the altar of arrogance & entitlement of the Sonia family 😡
Just imagine… pic.twitter.com/74Tm0fBbI5
ಇದನ್ನು ಟೀಕಿಸಿರುವ ಅವರು, "ಪ್ರಿಯಾಂಕಾ ಅವರು ವಯನಾಡ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಮಲ್ಲಿಕಾರ್ಜುನ್ ಖರ್ಗೆ ಸಾಹೇಬರೇ ನೀವು ಎಲ್ಲಿದ್ದೀರಿ" ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, "ಖರ್ಗೆ ಅವರು ಕುಟುಂಬದವರಲ್ಲದ ಕಾರಣ ದಲಿತ ನಾಯಕನನ್ನು ಹೊರಗಿಡಲಾಗಿದೆ. ಸೋನಿಯಾ ಕುಟುಂಬಸ್ಥರ ಅಹಂಕಾರದ ಎದುರು ಸ್ವಾಭಿಮಾನ ಮತ್ತು ಘನತೆಯು ಬಲಿಯಾಗಿದೆ" ಎಂದು ಖಂಡಿಸಿದ್ದಾರೆ.
"ಪಕ್ಷದ ಅಧ್ಯಕ್ಷ ಮತ್ತು ದೇಶದ ಹಿರಿಯ ದಲಿತ ನಾಯಕನನ್ನೇ ಆ ಕುಟುಂಬವು (ಸೋನಿಯಾ ಕುಟುಂಬ) ಈ ರೀತಿ ನಡೆಸಿಕೊಳ್ಳುತ್ತಾರೆ ಎಂದರೆ, ವಯನಾಡಿನ ಸಾಮಾನ್ಯ ಜನರನ್ನು ಹೇಗೆ ಕಾಣುತ್ತಾರೆ ಎಂಬುದನ್ನು ಊಹಿಸಿ" ಎಂದು ಹೇಳಿದ್ದಾರೆ.
ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರೂ ಇದೇ ವಿಡಿಯೋವನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಎಐಸಿಸಿ ಅಥವಾ ಪಿಸಿಸಿ ಅಧ್ಯಕ್ಷರೇ ಆಗಿರಲಿ, ರಬ್ಬರ ಸ್ಟಾಂಪ್ಗಳು ಎಂದು ಭಾವಿಸುವ ನಾಯಕರನ್ನು ಅವಮಾನ ಮಾಡುವುದು ಈ ಕುಟುಂಬ ಹೆಮ್ಮೆಯ ಸಂಗತಿ ಎಂದು ಪರಿಗಣಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಹಿರಿಯ ದಲಿತ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಈ ರೀತಿ ಅವಮಾನಿಸುತ್ತಿರುವುದು ತೀವ್ರ ಬೇಸರ ತಂದಿದೆ ಎಂದು ಬರೆದುಕೊಂಡಿದ್ದಾರೆ.
It’s deeply disheartening to witness the disrespect shown towards a veteran Parliamentarian and Dalit leader like Shri @kharge Ji by the so-called Holy Trinity in Wayanad today.
— Himanta Biswa Sarma (@himantabiswa) October 23, 2024
Whether it’s the President of AICC or PCC, does the Family take pride in humiliating those they treat… pic.twitter.com/FCnKOloaxz
ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪ್ರಸ್ತಾಪಿಸಿ, ಪ್ರಿಯಾಂಕಾ ಗಾಂಧಿ ಅವರ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಇದು ಕಾಂಗ್ರೆಸ್ನ ಅಸಲಿಯತ್ತು ಎಂದು ಟೀಕಿಸಿದ್ದಾರೆ. ವೈರಲ್ ಆದ ವಿಡಿಯೋವನ್ನೂ ಪ್ರಸಾರ ಮಾಡಿದ ಅವರು, ಖರ್ಗೆ ಅವರನ್ನು ಹೇಗೆ ಮೂಲೆಗುಂಪು ಮಾಡಲಾಗಿದೆ ಎಂಬುದನ್ನು ವಿವರಿಸಿದರು.
ಇದಕ್ಕೂ ಮೊದಲು, ಪಕ್ಷದ ಮಾಜಿ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿ ಅವರನ್ನು ಇದೇ ರೀತಿ ಅವಮಾನಕರವಾಗಿ ನಡೆಸಿಕೊಂಡ ಉದಾಹರಣೆಯನ್ನು ಉಲ್ಲೇಖಿಸಿದರು. ಕುಟುಂಬಕ್ಕೆ ಸೇರದ ಯಾವುದೇ ನಾಯಕನನ್ನು ಕೆಟ್ಟದಾಗಿ ನಡೆಸಿಕೊಳ್ಳುವುದು ಸೋನಿಯಾ ಕುಟುಂಬದ ಅಭ್ಯಾಸ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ವಯನಾಡ್ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ವಾದ್ರಾ ₹12 ಕೋಟಿ ಆಸ್ತಿಯ ಒಡತಿ