ಸರನ್, ಬಿಹಾರ: ಕಲಬೆರಕೆ ಮದ್ಯ ಸೇವಿಸಿ 45ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ನೋವು ತಂದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ. ಅನೇಕ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸರನ್ ಜಿಲ್ಲೆಯ ದಿಲಿಯಾ ರಹಿಂಪುರದ ಮುಖಿಯಾ ವಿಷ್ಣು ಸಾಹ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕಳ್ಳಭಟ್ಟಿ ದುರಂತ: ಬಿಹಾರದ ಕಳ್ಳಭಟ್ಟಿ ದುರಂತದಲ್ಲಿ ಸರನ್ ಜಿಲ್ಲೆಯ 11 ಮಂದಿ ಸಿವನ್ ಜಿಲ್ಲೆಯ 32 ಮಂದಿ ಮೃತಪಟ್ಟಿದ್ದಾರೆ. ಗೋಪಾಲ್ಗಂಜ್ನಲ್ಲಿ 2 ಸಾವುಗಳು ಸಂಭವಿಸಿವೆ. ಇದುವರೆಗೆ 25 ಸಾವುಗಳು ದೃಢಪಟ್ಟಿದೆ ಎಂದು ಡಿಜಿಪಿ ಅಲೋಕ್ ರಾಜ್ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಸಿವಾನ್ನಲ್ಲಿ 20 ಜನ ಮತ್ತು ಸರನ್ ಜಿಲ್ಲೆಯ ಐವರಿದ್ದಾರೆ. ಸರನ್ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.
73 ಮಂದಿಗೆ ಚಿಕಿತ್ಸೆ : ಸರನ್ ಮತ್ತು ಸಿವನ್ ಜಿಲ್ಲೆಯಲ್ಲಿ ಸದ್ಯ 73 ಮಂದಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದಲ್ಲಿ ನಕಲಿ ಮದ್ಯ ಮುಕ್ತವಾಗಿ ಲಭ್ಯವಾಗುತ್ತಿದ್ದು, ಇದನ್ನು ಸೇವಿಸಿದವರು ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ನಮ್ಮ ಕಣ್ಣ ಮುಂದೆಯೇ ನಮ್ಮವರನ್ನು ಕಳೆದುಕೊಂಡೆವು ಎಂದು ಮೃತರ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.
ಗೋಪಾಲ್ಗಂಜ್ನಲ್ಲೂ ಸಾವು: ಜಿಲ್ಲೆಯ ಮೊಹಮ್ಮದ್ಪುರ್ ಲಾಲ್ಬಾಬು ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಲಾಲ್ದೇವ್ ಮಂಜಿ ಅವರ ಮಗ ಪ್ರದೀಪ್ ಕುಮಾರ್ ಚುಲೈ ಮಂಗಳವಾರ ಎಮ್ಮೆ ಖರೀದಿಗೆ ಹೋಗುವ ಮುನ್ನ ನಕಲಿ ಮಧ್ಯ ಸೇವಿಸಿದ್ದಾರೆ, ಬುಧವಾರ ಸಂಜೆ ಅವರ ಆರೋಗ್ಯ ಹದಗೆಟ್ಟಿತು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ ತಂದೆ ಸಾವನ್ನಪ್ಪಿದ್ದು, ಮಗ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಕುರಿತು ಮಾತನಾಡಿರುವ ಡಿಎಂ ಪ್ರಶಾಂತ್ ಕುಮಾರ್, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆ ನಡೆಸಲಾಗುತ್ತಿದೆ. ತನಿಖೆಯ ವರದಿ ಹೊರ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಥಳಕ್ಕೆ ಬೈಕುಂಠಪುರ ಪೊಲೀಸರು ಭೇಟಿ ನೀಡಿದ್ದು, ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ ಎಂದು ಎಸ್ಪಿ ಅವಧೇಶ್ ದೀಕ್ಷಿತ್ ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ಎಸ್ಐಟಿ ರಚನೆ: ಸರನ್ ಜಿಲ್ಲಾ ಆಡಳಿತ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಿದೆ. ಮಶ್ರಕ್ ಪೊಲೀಸ್ ಠಾಣೆ ಇನ್ಚಾರ್ಜ್ಗೆ ಈ ಸಂಬಂಧ ನೋಟಿಸ್ ನೀಡಲಾಗಿದ್ದು, ಎಸ್ಐ ರಾಮ್ನಾಥ್ ಜಾ ಮತ್ತು ಕಾನ್ಸ್ಟೇಬಲ್ ಮಹೇಶ್ ರೈ ಸೇರಿದಂತೆ 8 ಮಂದಿ ಪೊಲೀಸರ ಅಮಾನತು ಮಾಡಲಾಗಿದೆ.
ಮದ್ಯ ರಾಜಕೀಯ: ಮದ್ಯ ನಿಷೇಧದ ನಡುವೆ ಕಳ್ಳಭಟ್ಟಿ ದುರಂತ ನಡೆದಿರುವ ಬೆನ್ನಲ್ಲೇ ನಿತೀಶ್ ಸರ್ಕಾರದ ವಿರುದ್ಧ ವಿಪಕ್ಷಗಳು ಹರಿಹಾಯ್ದಿವೆ. ಬಿಹಾರದಲ್ಲಿ ಯಾವುದೇ ಮದ್ಯ ನಿಷೇಧವಾಗಿಲ್ಲ ಎಂಬುದಕ್ಕೆ ಘಟನೆ ಸಾಕ್ಷಿಯಾಗಿದೆ ಎಂದು ತೇಜಸ್ವಿ ಯಾದವ್ ಟೀಕಿಸಿದ್ದಾರೆ. ಈ ನಡುವೆ ಸಿಎಂ ನಿತೀಶ್ ಕುಮಾರ್ ಪ್ರಕರಣದ ತನಿಖೆಗೆ ಡಿಜಿಪಿಗೆ ಆದೇಶಿಸಿದ್ದಾರೆ.
ತನಿಖೆಗೆ ಸಿಎಂ ಆದೇಶ: ಬಿಹಾರದಲ್ಲಿ ಮದ್ಯವನ್ನು ನಿಷೇದಿಸಲಾಗಿದ್ದು, ಜನರು ಮದ್ಯ ಸೇವನೆ ಮಾಡಬಾರದು ಎಂದು ಅರ್ಥೈಸಿಕೊಳ್ಳಬೇಕಿದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
ನಳಂದ ಸಂಸದ ಕೌಶಲೇಂದ್ರ ಕುಮಾರ್ ಮಾತನಾಡಿ, 2010ರ ಮೊದಲು ಬಿಹಾರದಲ್ಲಿ ಮದ್ಯ ಸೇವಿಸಿ ಮದುವೆ ಮೆರವಣಿಗೆಯಲ್ಲಿ ಗಲಾಟೆ ಮಾಡುವುದು ಸಾಮಾನ್ಯವಾಗಿತ್ತು, ಮದ್ಯ ನಿಷೇಧದಿಂದಾಗಿ ರಾಜ್ಯದಲ್ಲಿ ಶಾಂತಿ ಮತ್ತು ಸಾಮಾಜಿಕ ಸಾಮರಸ್ಯವಿತ್ತು. ಇದೀಗ ಈ ಘಟನೆ ದೊಡ್ಡ ಅಪಘಾತವಾಗಿದೆ. ನಿತೀಶ್ ಕುಮಾರ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಸಲ್ಮಾನ್ ಮೇಲಿನ ಬಿಷ್ಣೋಯಿ ವೈಷಮ್ಯ ಕೊನೆಗೊಳಿಸಲು 5 ಕೋಟಿ ನೀಡಿ; ಪೊಲೀಸರಿಗೆ ಬಂತು ಬೆದರಿಕೆ ಸಂದೇಶ