ಪಾಟ್ನಾ (ಬಿಹಾರ): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬುಧವಾರ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಜೆಡಿಯು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಬಿಹಾರದಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಬಳಿಕದ ರಾಷ್ಟ್ರ ರಾಜಧಾನಿಗೆ ನೀಡುತ್ತಿರುವ ಮೊದಲ ಭೇಟಿ ಮತ್ತು ಮೋದಿಯೊಂದಿಗಿನ ಮೊದಲ ಭೇಟಿಯೂ ಇದಾಗಿದೆ.
ಸಿಎಂ ನಿತೀಶ್ಕುಮಾರ್ ಅವರು ಫೆಬ್ರವರಿ 12 ರಂದು ವಿಶ್ವಾಸ ಮತ ಪರೀಕ್ಷೆಗೆ ಒಳಗಾಗಲಿದ್ದು, ಇದಕ್ಕೂ ಐದು ದಿನಗಳ ಮುಂಚಿತವಾಗಿ ರಾಷ್ಟ್ರ ರಾಜಧಾನಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ನಿತೀಶ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನೂ ಭೇಟಿ ಮಾಡುವ ನಿರೀಕ್ಷೆಯಿದೆ. ಬಿಹಾರದ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ಬಿಜೆಪಿಯ ವಿಜಯ್ ಕುಮಾರ್ ಸಿನ್ಹಾ ಅವರು ಸೋಮವಾರವಷ್ಟೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು.
ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚೆ: ಜೆಡಿಯು ಮೂಲಗಳ ಪ್ರಕಾರ, ಬಿಹಾರದ ಆರು ರಾಜ್ಯಸಭಾ ಸ್ಥಾನಗಳು ತೆರವಾಗಲಿದ್ದು, ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆಯೂ ಸಿಎಂ ನಿತೀಶ್ ಬಿಜೆಪಿಯ ಉನ್ನತ ನಾಯಕರೊಂದಿಗಿನ ಸಭೆ ನಡೆಸಿ ಚರ್ಚಿಸಬಹುದು ಎಂದು ತಿಳಿದು ಬಂದಿದೆ.
ಖಾಲಿಯಾಗುತ್ತಿರುವ ಆರು ಸ್ಥಾನಗಳಲ್ಲಿ 2 ಜೆಡಿಯು ಪಕ್ಷದ್ದಾಗಿವೆ. ಬಶಿಷ್ಠ್ ನಾರಾಯಣ ಸಿಂಗ್ ಮತ್ತು ಹಿರಿಯ ನಾಯಕ ಅನಿಲ್ ಹೆಗ್ಡೆ ಅವಧಿ ಮುಗಿಸಲಿದ್ದಾರೆ. ಜೊತೆಗೆ, ಆರ್ಜೆಡಿಯ ಮನೋಜ್ ಕುಮಾರ್ ಝಾ ಮತ್ತು ಮಿಸಾ ಭಾರತಿ, ಬಿಜೆಪಿಯ ಸುಶೀಲ್ ಕುಮಾರ್ ಮೋದಿ, ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್ ಅವರ ಅವಧಿ ಕೂಡ ಮುಗಿಯಲಿದೆ.
ಇಂಡಿಯಾ ಮೈತ್ರಿ ಕಡಿದುಕೊಂಡ ನಿತೀಶ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಎಲ್ಲ ವಿಪಕ್ಷಗಳ ಸೇರಿಕೊಂಡು ರಚಿಸಿಕೊಂಡಿದ್ದ INDI ಕೂಟದಿಂದ ಜೆಡಿಯು ನಾಯಕ ನಿತೀಶ್ಕುಮಾರ್ ಹೊರಬಂದು ಬಿಜೆಪಿ ನೇತೃತ್ವದ ಎನ್ಡಿಎ ಸೇರಿಕೊಂಡಿದ್ದಾರೆ. ಇದು ವಿಪಕ್ಷಗಳಿಗೆ ಭಾರೀ ಹೊಡೆತ ನೀಡಿದೆ. ಜೊತೆಗೆ ರಾಜ್ಯದಲ್ಲಿ ಆರ್ಜೆಡಿ ಜೊತೆ ಮೈತ್ರಿ ಮಾಡಿಕೊಂಡು ರಚಿಸಿದ್ದ 18 ತಿಂಗಳ ಅವಧಿಯ ರಾಜ್ಯ ಸರ್ಕಾರಕ್ಕೂ ಎಳ್ಳುನೀರು ಬಿಟ್ಟಿದ್ದರು. ಇದೀಗ ಬಿಜೆಪಿ ಜೊತೆಗೂಡಿ 9ನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ನಿತೀಶ್ಕುಮಾರ್, ಫೆಬ್ರವರಿ 12 ರಂದು ಬಹುಮತ ಸಾಬೀತುಪಡಿಸಬೇಕಿದೆ.
ಇದನ್ನೂ ಓದಿ: ಜಾತಿ ಸಮೀಕ್ಷೆ ವಿಚಾರ: ರಾಹುಲ್ ಹೇಳಿಕೆ ಅಸಂಬದ್ಧ ಎಂದು ತಳ್ಳಿ ಹಾಕಿದ ನಿತೀಶ್ ಕುಮಾರ್