ಬೆಮೆತರಾ: ಛತ್ತೀಸ್‌ಗಢದ ಬೆಮೆತರಾ ಜಿಲ್ಲೆಯ ಕಥಿಯಾ ಗ್ರಾಮದ ಪೆಟ್ರೋಲ್ ಪಂಪ್ ಬಳಿ ನಿನ್ನೆ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸರಕು ಸಾಗಣೆ ವಾಹನ ಮತ್ತು ಟ್ರಕ್ ನಡುವೆ ಭಾರಿ ಡಿಕ್ಕಿ ಸಂಭವಿಸಿದ್ದರಿಂದ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿ 9 ಮಂದಿ ಮೃತಪಟ್ಟಿದ್ದಾರೆ. ಈ ವೇಳೆ, ವಾಹನದಲ್ಲಿದ್ದ 23 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಮೆತರಾ ಜಿಲ್ಲಾ ಆಸ್ಪತ್ರೆ ಮತ್ತು ಸಿಮ್ಗಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ಗಂಭೀರವಾಗಿ ಗಾಯಗೊಂಡವರನ್ನು ರಾಜಧಾನಿಯಲ್ಲಿರುವ ಏಮ್ಸ್‌ಗೆ ದಾಖಲಿಸಲಾಗಿದೆ.
ಐವರು ಮಹಿಳೆಯರು, ಮೂವರು ಮಕ್ಕಳ ದಾರುಣ ಸಾವು: ಅಪಘಾತದಲ್ಲಿ ಗಾಯಗೊಂಡಿದ್ದ 23 ಮಂದಿಯನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸಲಾಗಿದೆ. ಇವರಲ್ಲಿ ಭೂರಿ ನಿಶಾದ್ (50), ನೀರಾ ಸಾಹು (55), ಗೀತಾ ಸಾಹು (60), ಅಗ್ನಿಯಾ ಸಾಹು (60), ಖುಷ್ಬೂ ಸಾಹು (39), ಮಧು ಸಾಹು (5), ರಿಕೇಶ್ ನಿಶಾದ್ (6) ಮತ್ತು ಟ್ವಿಂಕಲ್ ನಿಶಾದ್ (6) ಸೇರಿದ್ದಾರೆ.
ಪೊಲೀಸರ ಹೇಳಿಕೆ ಪ್ರಕಾರ, ಭಾನುವಾರ ತಡರಾತ್ರಿ ಬೆಮೆತರಾ ಜಿಲ್ಲೆಯ ಕಥಿಯಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಬೆಮೆತರಾ ಜಿಲ್ಲೆಯ ಪಥರ್ರಾ ಗ್ರಾಮದ ಜನರು ನಾಮಕರಣ ಸಮಾರಂಭಕ್ಕೆ ಎಂದು ತಿರಯ್ಯ ಗ್ರಾಮಕ್ಕೆ ತೆರಳಿದ್ದರು. ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಎಲ್ಲರೂ ಪತ್ರಾ ಗ್ರಾಮದ ತಮ್ಮ ಮನೆಗೆ ಮರಳುತ್ತಿದ್ದರು. ಇದೇ ವೇಳೆ ರಸ್ತೆ ಬದಿ ನಿಂತಿದ್ದ ಮಿನಿ ಟ್ರಕ್‌ಗೆ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. 23 ಗಾಯಾಳುಗಳನ್ನು ಎರಡು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ರಾಯ್‌ಪುರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಶಿಫಾರಸು ಮಾಡಲಾಗಿದೆ.
ಬೆಮೆತರಾ ಜಿಲ್ಲಾಧಿಕಾರಿ, ಎಸ್‌ಪಿ, ಶಾಸಕರು ಆಸ್ಪತ್ರೆಗೆ ಭೇಟಿ: ಅಪಘಾತದ ಮಾಹಿತಿ ಪಡೆದ ಬೆಮೆತರಾ ಶಾಸಕ ದೀಪೇಶ್ ಸಾಹು, ಜಿಲ್ಲಾಧಿಕಾರಿ ರಣವೀರ್ ಶರ್ಮಾ, ಎಸ್‌ಪಿ ರಾಮಕೃಷ್ಣ ಸಾಹು ಅವರು ಜಿಲ್ಲಾಸ್ಪತ್ರೆಗೆ ಆಗಮಿಸಿ ಗಾಯಾಳುಗಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
’’ಎಂಟು ಜನರ ಸಾವಿನ ಸುದ್ದಿ ಇದೆ, ಗಾಯಾಳುಗಳನ್ನು ಬೆಮೆತರಾ ಜಿಲ್ಲಾ ಆಸ್ಪತ್ರೆ, ಸಿಮ್ಗಾ ಆಸ್ಪತ್ರೆ ಮತ್ತು ಏಮ್ಸ್ ರಾಯ್‌ಪುರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರೊಂದಿಗೆ ಮಾತನಾಡಿ ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಲಾಗಿದೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮುಂಜಾನೆಯೇ ಸೂಚನೆಗಳನ್ನು ನೀಡಲಾಗಿದೆ. ಸಂತ್ರಸ್ತರಿಗೆ ಬೇಕಾಗಿರುವ ಎಲ್ಲ ನೆರವನ್ನು ತಕ್ಷಣವೇ ನೀಡಲಾಗುವುದು’’ ಎಂದು ಬೆಮೆತರಾ ಜಿಲ್ಲಾಧಿಕಾರಿ ರಣವೀರ್ ಶರ್ಮಾ ಹೇಳಿದ್ದಾರೆ.