ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಹತ್ಯೆಗೀಡಾದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನಾರ್ ಪ್ರಕರಣದ ತನಿಖೆ ಮುಂದುವರೆದಿದೆ. ಆದರೆ, ಇದುವರೆಗೂ ಅನಾರ್ ಅವರ ದೇಹದ ಭಾಗಗಳು ಪತ್ತೆಯಾಗಿಲ್ಲ. ಇವುಗಳ ಪತ್ತೆಗಾಗಿ ಪಶ್ಚಿಮ ಬಂಗಾಳದ ಸಿಐಡಿ ಹಾಗೂ ಬಾಂಗ್ಲಾದೇಶದ ಗುಪ್ತಚರ ಇಲಾಖೆಯು ಜಂಟಿ ತನಿಖೆ ಕೈಗೊಂಡಿದೆ.
ಬಾಂಗ್ಲಾದೇಶದ ಆಡಳಿತಾರೂಢ ಪಕ್ಷ ಅವಾಮಿ ಲೀಗ್ನ ಸಂಸದರಾಗಿದ್ದ ಅನ್ವರುಲ್ ಅಜೀಂ ಅನಾರ್ ವೈದ್ಯಕೀಯ ಚಿಕಿತ್ಸೆಗಾಗಿ ಮೇ 12ರಂದು ಕೋಲ್ಕತ್ತಾಕ್ಕೆ ಬಂದಿದ್ದರು. ಮೇ 13ರಿಂದ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಪುತ್ರಿ ಮುಮ್ತಾರಿನ್ ಫಿರ್ದೌಸ್ ದೂರು ನೀಡಿದ್ದರು. ಈ ಕುರಿತು ತನಿಖೆ ಕೈಗೊಂಡಾಗ ಮೇ 22ರಂದು ಕೋಲ್ಕತ್ತಾದ ನ್ಯೂಟೌನ್ ಪ್ರದೇಶದ ಫ್ಲಾಟ್‌ನಲ್ಲಿ ಅಜೀಂ ಅನಾರ್ ಕೊಲೆಯಾಗಿರುವುದು ಪತ್ತೆಯಾಗಿತ್ತು.
ನ್ಯೂ ಟೌನ್ ಫ್ಲಾಟ್‌ನಲ್ಲಿ ಬಾಂಗ್ಲಾ ಸಂಸದರ ರಕ್ತದ ಕಲೆಗಳು ಕಂಡು ಬಂದಿದ್ದು, ಅವರನ್ನು ಕೊಲೆ ಮಾಡಿ ಚರ್ಮ ಸುಳಿದು ದೇಹವನ್ನು ತುಂಡರಿಸಿ, ಪ್ಲಾಸ್ಟಿಕ್ ಚೀಲಗಳಲ್ಲಿ ಹಂತಕರು ತುಂಬಿದ್ದರು. ಬಳಿಕ ದಕ್ಷಿಣ 24 ಪರಗಣ ಜಿಲ್ಲೆಯ ಭಂಗಾರ್‌ನಲ್ಲಿ ಕಾಲುವೆಗೆ ದೇಹದ ಭಾಗಗಳನ್ನು ಎಸೆದಿದ್ದಾರೆ ಎಂದು ಇದುವರೆಗಿನ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಕಮೋಡ್‌ಗೆ ಪೈಪ್ ಒಡೆಯಲು ಒತ್ತಾಯ: ಸಂಸದ ಅನ್ವರುಲ್ ಅಜೀಂ ಅನಾರ್ ಪ್ರಕರಣ ಸಂಬಂಧ ಬಾಂಗ್ಲಾದೇಶದ ಗುಪ್ತಚರ ವಿಭಾಗದ ಮುಖ್ಯಸ್ಥ ಹರುನ್ ಉರ್ ರಶೀದ್ ಮೇ 16ರಂದೇ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಬಾಂಗ್ಲಾದೇಶದ ಹೆಚ್ಚುವರಿ ಪ್ರಾದೇಶಿಕ ಅಪರಾಧಗಳ ವಿಭಾಗ ಅಡಿ ಬಾಂಗ್ಲಾದೇಶದ ಗುಪ್ತಚರ ಇಲಾಖೆ ಮತ್ತು ಪಶ್ಚಿಮ ಬಂಗಾಳದ ಗುಪ್ತಚರ ಇಲಾಖೆ ತನಿಖೆ ನಡೆಸುತ್ತಿದೆ.
ಈ ತನಿಖೆ ಬಗ್ಗೆ ಮಾತನಾಡಿರುವ ಹರುನ್ ಉರ್ ರಶೀದ್, ಬಂಗಾಳದ ಗುಪ್ತಚರ ಇಲಾಖೆಯ ಸಿಐಡಿಯೊಂದಿಗೆ ಕೆಲಸ ಮಾಡಲು ತೃಪ್ತಿ ಇದೆ. ಸಿಐಡಿ ತನ್ನ ಕೆಲಸ ಮಾಡುತ್ತಿದೆ. ಶವ ಪತ್ತೆಯಾದ ಅಪಾರ್ಟ್‌ಮೆಂಟ್‌ನ ಕಮೋಡ್‌ಗೆ ಸಂಪರ್ಕ ಕಲ್ಪಿಸುವ ಚರಂಡಿಯ ಫ್ಲಶ್ ಪೈಪ್ ಒಡೆಯುವಂತೆ ಸಿಐಡಿಗೆ ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕಾಲುವೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡ್ರೋನ್ಗಳ ಬಳಕೆ ಮಾಡಲಾಗಿದೆ. ಸಂಸದರ ದೇಹದ ಭಾಗಗಳನ್ನು ಪತ್ತೆ ಹಚ್ಚಲು ಸಿಐಡಿ ಅತ್ಯಂತ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ಬಾಂಗ್ಲಾದೇಶದ ಗುಪ್ತಚರ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.
ಡಿಎನ್‌ಎ ಪರೀಕ್ಷೆಗೂ ನಿರ್ಧಾರ: ಮತ್ತೊಂದೆಡೆ, ನ್ಯೂಟೌನ್ ಫ್ಲಾಟ್‌ನಲ್ಲಿ ಪತ್ತೆಯಾದ ರಕ್ತದ ಮಾದರಿಯ ಡಿಎನ್‌ಎ ಪರೀಕ್ಷೆ ನಡೆಸಲು ಬಾಂಗ್ಲಾದೇಶ ಪೊಲೀಸರು ನಿರ್ಧರಿಸಿದ್ದಾರೆ. ನಂತರ ಸಂಸದರ ಕುಟುಂಬದ ಸದಸ್ಯರ ಡಿಎನ್‌ಎ ಪರೀಕ್ಷಿಸಲಾಗುತ್ತದೆ ಎಂದು ಬಾಂಗ್ಲಾದೇಶದ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಡಿಎನ್‌ಎ ಪರೀಕ್ಷೆಯಿಂದ ಅನ್ವಾರುಲ್ ಅಜೀಂ ಅವರನ್ನು ನಿಜವಾಗಿಯೂ ಕೊಲೆ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯುತ್ತದೆ. ಬಾಂಗ್ಲಾದೇಶ ಸಂಸದರ ದೇಹದ ಭಾಗಗಳು ಪತ್ತೆಯಾಗದೇ ಇದ್ದರೆ, ತನಿಖಾಧಿಕಾರಿಗಳಿಗೆ ಇದೇ ಕೊನೆಯ ಉಪಾಯ ಅಥವಾ ಅಸ್ತ್ರವಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.