ಕಾನ್ಪುರ(ಉತ್ತರ ಪ್ರದೇಶ): ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ರೈಲನ್ನು ಹಳಿ ತಪ್ಪಿಸುವ ಮತ್ತೊಂದು ಪ್ರಯತ್ನವನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ವಿಫಲಗೊಳಿಸಲಾಗಿದೆ. ದೆಹಲಿ-ಹೌರಾ ಮಾರ್ಗದ ಪ್ರೇಮ್ ಪುರ್ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್ ಇಡಲಾಗಿತ್ತು. ಆದರೆ ಗೂಡ್ಸ್ ರೈಲಿನ ಲೋಕೋ ಪೈಲಟ್ ದೂರದಿಂದಲೇ ಸಿಲಿಂಡರ್ ಅನ್ನು ಗಮನಿಸಿ ತುರ್ತು ಬ್ರೇಕ್ ಹಾಕಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಸರಕು ಸಾಗಣೆ ರೈಲು ಕಾನ್ಪುರದಿಂದ ಪ್ರಯಾಗ್ ರಾಜ್ಗೆ ಲೂಪ್ ಲೈನ್ ಮೂಲಕ ಪ್ರಯಾಣಿಸುತ್ತಿತ್ತು. ಬೆಳಗ್ಗೆ 5:55 ರ ಸುಮಾರಿಗೆ ಹಳಿಗಳ ಮೇಲೆ 5 ಕೆಜಿ ತೂಕದ ಸಿಲಿಂಡರ್ ಬಿದ್ದಿರುವುದು ಪೈಲಟ್ ಗಮನಕ್ಕೆ ಬಂದಿದೆ. ಆಗ ಅವರು ತಕ್ಷಣವೇ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ಈ ಮೂಲಕ ದೊಡ್ಡ ಅಪಘಾತವೊಂದನ್ನು ಅವರು ತಪ್ಪಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
#WATCH | Kanpur, Uttar Pradesh: Police personnel inspect the spot where a 5-litre empty gas cylinder was found on tracks just as a goods train was about to pass through, at Prempur Station earlier today. pic.twitter.com/6wdsrpAZKg
— ANI (@ANI) September 22, 2024
ರೈಲು ಸಿಬ್ಬಂದಿ ತಕ್ಷಣ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಮತ್ತು ಇತರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದಾರೆ. ಹಿರಿಯ ಅಧಿಕಾರಿಗಳು ಘಟನಾ ಸ್ಥಳ ಮತ್ತು ನಿಯಂತ್ರಣ ಕೊಠಡಿಯಲ್ಲಿ ಉಪಸ್ಥಿತರಿದ್ದು, ತನಿಖೆ ನಡೆಸುತ್ತಿದ್ದಾರೆ. ಕೆಲ ಹೊತ್ತಿನ ನಂತರ ಗೂಡ್ಸ್ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಿದೆ.
ರೈಲು ಅಪಘಾತವಾಗುವಂತೆ ಮಾಡುವ ಇಂಥ ಪಿತೂರಿ ಬಯಲಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ತಿಂಗಳು, ಕಾನ್ಪುರದ ಬಳಿ ಮಧ್ಯರಾತ್ರಿ ಸಾಬರಮತಿ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದರೂ ದೊಡ್ಡ ಅಪಘಾತವಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿತ್ತು. ವಾರಣಾಸಿಯಿಂದ ಅಹಮದಾಬಾದ್ಗೆ ತೆರಳುತ್ತಿದ್ದ ರೈಲು ಗೋವಿಂದಪುರಿ ನಿಲ್ದಾಣದ ಬಳಿ ತಪ್ಪಿದ್ದರಿಂದ, 22 ಬೋಗಿಗಳು ಹಳಿಯಿಂದ ಹೊರ ಬಂದಿದ್ದವು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ಸೆಪ್ಟೆಂಬರ್ 9ರಂದು ಕಾಳಿಂದಿ ಎಕ್ಸ್ಪ್ರೆಸ್ ಅನ್ನು ಹಳಿ ತಪ್ಪಿಸುವ ಪ್ರಯತ್ನವಾಗಿ ಕಾನ್ಪುರ-ಕಾಸ್ ಗಂಜ್ ಮಾರ್ಗದಲ್ಲಿ ಬರಾಜ್ ಪುರ ಮತ್ತು ಬಿಲ್ಹೌರ್ ನಿಲ್ದಾಣಗಳ ನಡುವಿನ ಮುಂಡೇರಿ ಗ್ರಾಮದ ಕ್ರಾಸಿಂಗ್ ಬಳಿ ರೈಲ್ವೆ ಹಳಿಯ ಮೇಲೆ ಗ್ಯಾಸ್ ಸಿಲಿಂಡರ್ ಅನ್ನು ಇರಿಸಲಾಗಿತ್ತು. ಗಂಟೆಗೆ 70-80 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ಸಿಲಿಂಡರ್ಗೆ ಡಿಕ್ಕಿ ಹೊಡೆದಿತ್ತು. ಆಗ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿದ್ದರು.
ಇದನ್ನೂ ಓದಿ: ತಿರುಪತಿ ಲಡ್ಡು ಕಲಬೆರಕೆ ವಿವಾದ: 11 ದಿನಗಳ ಪ್ರಾಯಶ್ಚಿತ್ತ ಉಪವಾಸ ವ್ರತ ಕೈಗೊಂಡ ಪವನ್ ಕಲ್ಯಾಣ್ - Pawan Kalyan