ನವದೆಹಲಿ: 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಉಪಚುನಾವಣೆ ನಡೆಯಲಿದೆ. ಲೋಕಸಭಾ ಚುನಾವಣೆ ಬಳಿಕ ನಡೆಯುತ್ತಿರುವ ಈ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಸೇರಿದಂತೆ ಅನೇಕ ಹಿರಿಯರು ಮತ್ತು ಇದೇ ಮೊದಲ ಬಾರಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಪಶ್ಚಿಮ ಬಂಗಾಳದ ರಾಯಗಂಜ್, ರಣಘಾಟ್ ದಕ್ಷಿಣ, ಬಾಗ್ಡಾ ಮತ್ತು ಮಾಣಿಕ್ತಾಲಾ ವಿಧಾನಸಭಾ ಕ್ಷೇತ್ರಗಳು, ಉತ್ತರಾಖಂಡದ ಬದರಿನಾಥ್ ಮತ್ತು ಮಂಗಲೌರ್, ಪಂಜಾಬ್‌ನ ಪಶ್ಚಿಮ ಜಲಂಧರ್, ಹಿಮಾಚಲ ಪ್ರದೇಶದ ಡೆಹ್ರಾ, ಹಮೀರ್‌ಪುರ ಮತ್ತು ನಲಘರ್, ಬಿಹಾರದ ರೂಪೌಲಿ, ತಮಿಳುನಾಡಿನ ವಿಕ್ರವಾಂಡಿ ಮತ್ತು ಮಧ್ಯಪ್ರದೇಶದ ಅಮರ್ವಾರ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಸಾವು ಅಥವಾ ರಾಜೀನಾಮೆಯಿಂದಾಗಿ ಉಪಚುನಾವಣೆ ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಿದ ಆಡಳಿತಾರೂಢ ಟಿಎಂಸಿ ಮತ್ತು ಲೋಕಸಭೆ ಚುನಾವಣೆಯಲ್ಲಿ ಈ ನಾಲ್ಕು ಕ್ಷೇತ್ರಗಳಲ್ಲಿ ತಾನು ಗಳಿಸಿದ್ದ ಗಮನಾರ್ಹ ಮುನ್ನಡೆಯನ್ನು ಪುನರಾವರ್ತಿಸಿಕೊಳ್ಳಲು ಬಿಜೆಪಿ ಕಸರತ್ತು ನಡೆಸುತ್ತಿವೆ. ನಂತರ, ಬಿಜೆಪಿ ಶಾಸಕರು ಟಿಎಂಸಿಗೆ ಬದಲಾದರು. 2022ರ ಫೆಬ್ರವರಿಯಲ್ಲಿ ಟಿಎಂಸಿ ಶಾಸಕ ಸಾಧನ್ ಪಾಂಡೆ ಅವರ ನಿಧನದಿಂದಾಗಿ ಮಣಿಕ್ತಾಲಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು.
2021ರಲ್ಲಿ ನಡೆದಿದ್ದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮಾಣಿಕ್ತಾಲಾ ಕ್ಷೇತ್ರವನ್ನು ಗೆದ್ದಿದ್ದರೆ, ಬಿಜೆಪಿ ರಾಯ್‌ಗಂಜ್, ರಣಘಾಟ್ ದಕ್ಷಿಣ ಮತ್ತು ಬಾಗ್ಡಾವನ್ನು ಕೈ ವಶ ಮಾಡಿಕೊಂಡಿತ್ತು. ನಂತರ ಬಿಜೆಪಿ ಶಾಸಕರು ಟಿಎಂಸಿಗೆ ಸೇರ್ಪಡೆಯಾಗಿದ್ದರು. ಫೆಬ್ರವರಿ 2022ರಲ್ಲಿ ಟಿಎಂಸಿಯ ಹಾಲಿ ಶಾಸಕ ಸಾಧನ್ ಪಾಂಡೆ ಅವರ ನಿಧನದಿಂದ ಮಾಣಿಕ್ತಾಲಾ ಕ್ಷೇತ್ರ ತೆರವಾಗಿತ್ತು. ಇನ್ನು ಈ ಕ್ಷೇತ್ರದಿಂದ ಟಿಎಂಸಿ ಪಾಂಡೆ ಅವರ ಪತ್ನಿ ಸುಪ್ತಿ ಅವರನ್ನು ಕಣಕ್ಕಿಳಿಸಿದೆ.
ಬಿಜೆಪಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರನ್ನು ಮಾಣಿಕ್ತಾಲಾದಿಂದ, ಮನೋಜ್ ಕುಮಾರ್ ಬಿಸ್ವಾಸ್ ರಣಘಾಟ್ ದಕ್ಷಿಣದಿಂದ, ಬಿನಯ್ ಕುಮಾರ್ ಬಿಸ್ವಾಸ್ ಬಾಗ್ದಾದಿಂದ ಮತ್ತು ಮಾನಸ್ ಕುಮಾರ್ ಘೋಷ್ ರಾಯ್‌ಗಂಜ್‌ನಿಂದ ಕಣಕ್ಕಿಳಿಸಿದೆ. ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಹುಮ್ಮಸ್ಸಿನಲ್ಲಿರುವ ಟಿಎಂಸಿ ಎಲ್ಲ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ. "ನಾವು ಎಲ್ಲ ನಾಲ್ಕು ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಂಗಾಳದ ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ" ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಫೆಬ್ರವರಿ 27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತ ಚಲಾಯಿಸಿದ ಮೂವರು ಪಕ್ಷೇತರ ಶಾಸಕರಾದ ಹೋಶಿಯಾರ್ ಸಿಂಗ್ (ಡೆಹ್ರಾ), ಆಶಿಶ್ ಶರ್ಮಾ (ಹಮೀರ್‌ಪುರ್) ಮತ್ತು ಕೆಎಲ್ ಠಾಕೂರ್ (ನಲಘರ್) ಅವರು ತಮ್ಮ ಸ್ಥಾನಕ್ಕೆ ಮಾರ್ಚ್ 22ರಂದು ರಾಜೀನಾಮೆ ನೀಡಿದ ನಂತರ ಈ ಕ್ಷೇತ್ರಗಳು ತೆರವು ಗೊಂಡಿದ್ದವು. ಪಕ್ಷಕ್ಕೆ ಸೇರಿದ ಈ ಮೂವರನ್ನು ಅವರವರ ಕ್ಷೇತ್ರಗಳಿಂದ ಬಿಜೆಪಿ ಕಣಕ್ಕಿಳಿಸಿದೆ.
ಡೆಹ್ರಾದಲ್ಲಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿದ್ದ ಬಿಜೆಪಿಯ ಹೋಶಿಯಾರ್ ಸಿಂಗ್ ಅವರ ವಿರುದ್ಧ ಸೆಣೆಸುತ್ತಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು.
ನೆರೆ ರಾಜ್ಯದ ಉತ್ತರಾಖಂಡದ ಮಂಗಲೌರ್ ಕ್ಷೇತ್ರ ತ್ರಿಕೋನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಾಲಿ ಬಿಎಸ್‌ಪಿ ಶಾಸಕ ಸರ್ವತ್ ಕರೀಂ ಅನ್ಸಾರಿ ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು. ಈ ಹಿಂದೆ ಕಾಂಗ್ರೆಸ್ ಮತ್ತು ಬಿಎಸ್‌ಪಿ ವಶದಲ್ಲಿದ್ದ ಹಾಗೂ ಮುಸ್ಲಿಂ ಮತ್ತು ದಲಿತ ಪ್ರಾಬಲ್ಯ ಹೊಂದಿರುವ ಮಂಗಲೌರ್ ಕ್ಷೇತ್ರವನ್ನು ಬಿಜೆಪಿ ಇದುವರೆಗೂ ಗೆದ್ದಿಲ್ಲ. ಈ ಬಾರಿ ಬಿಎಸ್‌ಪಿ, ಅನ್ಸಾರಿ ಅವರ ಪುತ್ರ ಉಬೇದುರ್ ರೆಹಮಾನ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಖಾಜಿ ಮೊಹಮ್ಮದ್ ನಿಜಾಮುದ್ದೀನ್ ವಿರುದ್ಧ ಕಣಕ್ಕಿಳಿಸಿದೆ. ಗುಜ್ಜರ್ ನಾಯಕ ಮತ್ತು ಬಿಜೆಪಿ ಅಭ್ಯರ್ಥಿ ಕರ್ತಾರ್ ಸಿಂಗ್ ಭದಾನ ಕೂಡ ಕಣದಲ್ಲಿದ್ದಾರೆ. ಬದರಿನಾಥ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರ ಭಂಡಾರಿ ಮತ್ತು ಕಾಂಗ್ರೆಸ್ನ ಲಖಪತ್ ಸಿಂಗ್ ಬುಟೋಲಾ ನಡುವೆ ನೇರ ಹಣಾಹಣಿ ಏರ್ಪಟಿದೆ.
ಉತ್ತರಾಖಂಡ್ ರಚನೆಯಾದಾಗಿನಿಂದ ನಡೆದ 15 ಉಪಚುನಾವಣೆಗಳಲ್ಲಿ 14 ಅನ್ನು ಅಧಿಕಾರದಲ್ಲಿರುವ ಪಕ್ಷವು ಗೆದ್ದಿದೆ.
ಪಂಜಾಬ್‌ನ ಜಲಂಧರ್ ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮುಖ್ಯಮಂತ್ರಿ ಭಗವಂತ್ ಮಾನ್‌ಗೆ ಅಗ್ನಿಪರೀಕ್ಷೆಯಾಗಿದೆ. ಶೀತಲ್ ಅಂಗುರಾಲ್ ಎಎಪಿ ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ತೆರವಾದ ಕ್ಷೇತ್ರದಲ್ಲಿ ತೀವ್ರ ಹೋರಾಟ ನಡೆಯಲಿದೆ. ಈ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಉಪಚುನಾವಣೆಯ ಮತ ಎಣಿಕೆ ಜುಲೈ 13 ರಂದು ನಡೆಯಲಿದೆ.
ಇದನ್ನೂ ಓದಿ: ಚುನಾವಣಾ ಕಣಕ್ಕೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್? - Swara Bhaskar