ಆಗ್ರಾ, ಉತ್ತರಪ್ರದೇಶ: ವೈಶ್ಯವಾಟಿಕೆಯಲ್ಲಿ ತೊಡಗಲು ಬಲವಂತ ಮಾಡಿದ ಕಾರಣಕ್ಕೆ 17 ವರ್ಷದ ಅಪ್ರಾಪ್ತೆ ಹೋಟೆಲ್ ಬಾಲ್ಕನಿಯಿಂದ ಜಿಗಿದಿರುವ ಘಟನೆ ಉತ್ತರ ಪ್ರದೇಶ ಆಗ್ರಾದ ತಾಜ್ನಗರಿಯಿಂದ ವರದಿಯಾಗಿದೆ. ಅಪ್ರಾಪ್ತೆ ಮೇಲಿನಿಂದ ಜಿಗಿದ ಪರಿಣಾಮ ಆಕೆಯ ಎರಡು ಕಾಲುಗಳಿಗೆ ಹಾನಿಯಾಗಿದೆ. ಈ ಸಂಬಂಧ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.
ಏನಿದು ಘಟನೆ?: ಘಟನೆ ಕುರಿತು ವಿವರಣೆ ನೀಡಿದ ಟ್ರಾನ್ಸ್ ಯಮುನಾ ಪೊಲೀಸ್ ಠಾಣೆ ಅಧಿಕಾರಿ ಭಾನು ಪ್ರತಾಪ್ ಸಿಂಗ್, 17 ವರ್ಷದ ಅಸ್ಸಾಂ ನಿವಾಸಿ, ಕುಟುಂಬದ ಜೊತೆಗಿನ ಜಗಳದಿಂದ ಡಿಸೆಂಬರ್ 1ರಂದು ಮನೆ ತೊರೆದಿದ್ದಳು. ಈ ವೇಳೆ ಗುವಾಹಟಿ ನಿಲ್ದಾಣದಲ್ಲಿ ಆಕೆಗೆ ಮಹಿಳೆಯೊಬ್ಬಳು ಪರಿಚಯವಾಗಿ ತುಂಡ್ಲಾ ಸ್ಟೇಷನ್ಗೆ ಕರೆ ತಂದಿದ್ದಳು. ಇಲ್ಲಿ ಯುವಕನನ್ನು ಭೇಟಿಯಾಗಿದ್ದಾಳೆ. ಮೂವರು ಸೇರಿ ಆಗ್ರಾ ಹೋಟೆಲ್ಗೆ ಹೋಗಿದ್ದಾರೆ.
ಈ ವೇಳೆ ಬಾಲಕಿಗೆ ಯುವಕ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದರಿಂದ ಪಾರಾಗುವ ಉದ್ದೇಶದಿಂದ ಅಪ್ರಾಪ್ತೆ ಹೋಟೆಲ್ ಬಾಲ್ಕನಿಯಿಂದ ಜಿಗಿದಿದ್ದಾಳೆ. ಈ ಸಂದರ್ಭದಲ್ಲಿ ಪಕ್ಕದ ಅಂಗಡಿಯ ಛಾವಣಿ ಮೇಲೆ ಅಪ್ರಾಪ್ತೆ ಸಿಕ್ಕಿ ಹಾಕಿಕೊಂಡಿದ್ದಾಳೆ. ಅಪ್ರಾಪ್ತೆ ಕಿರುಚಾಟ ಕಂಡು ಸ್ಥಳೀಯ ಜನರು ಗುಂಪು ಸೇರಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆಕೆಯ ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಕಾಲಿಗೆ ಗಾಯವಾಗಿದ್ದು, ಯಾವುದೇ ಮೂಳೆ ಮುರಿದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಅಪ್ರಾಪ್ತೆ ನೀಡಿದ ಮಾಹಿತಿ ಮತ್ತು ವಿಳಾಸದ ಆಧಾರದ ಮೇಲೆ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಅವರ ಕುಟುಂಬಸ್ಥರ ಬರುವಿಕೆಗೆ ಕಾಯಲಾಗುತ್ತಿದೆ. ಹೋಟೆಲ್ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನನಿಸುತ್ತಿದ್ದು, ಆಕೆಯ ಜೊತೆಗೆ ಬಂದವರ ಪತ್ತೆ ಮಾಡಲಾಗುತ್ತಿದೆ. ಹೋಟೆಲ್ನಲ್ಲಿ ಮಹಿಳೆ ನೀಡಿದ ಆಧಾರ್ ಕಾರ್ಡ್ ಮಾಹಿತಿ ಪ್ರಕಾರ ತನಿಖೆ ಶುರು ಮಾಡಲಾಗಿದೆ. ಈ ನಡುವೆ ಹೋಟೆಲ್ ಸಿಬ್ಬಂದಿ ಕೂಡ ತಲೆ ಮರೆಸಿಕೊಂಡಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪತಿ, ಮಕ್ಕಳಿಂದ ಬೇರಾಗಿ ಶೌಚಾಲಯದಲ್ಲೇ ವಾಸ: ಮಾನಸಿಕ ಅಸ್ವಸ್ಥೆಗೆ ಆಶ್ರಯ ನೀಡಿದ ಎನ್ಜಿಒ