ಗುವಾಹಟಿ (ಅಸ್ಸೋಂ) : ಅಸ್ಸೋಂ ಕಾಂಗ್ರೆಸ್ ಕಾರ್ಯಾಧ್ಯಕ್ಷ, ಹಿರಿಯ ನಾಯಕ ರಾಣಾ ಗೋಸ್ವಾಮಿ ಅವರು ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂಬ ಮಾಹಿತಿ ಬಂದಿದೆ. ಕ್ರಿಮಿನಲ್ ಹಿನ್ನೆಲೆ ಇಲ್ಲದ ಯಾರೇ ಪಕ್ಷ ಸೇರಿದರೂ ಸ್ವಾಗತ ಎಂದು ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಗೋಸ್ವಾಮಿ ಅವರು ಕಾರ್ಯಾಧ್ಯಕ್ಷ ಸ್ಥಾನ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾಗಿ ಅದರಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿ ಸೇರ್ಪಡೆಗೆ ಸಿದ್ಧತೆ?: ರಾಜ್ಯ ಕಾಂಗ್ರೆಸ್ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದ್ದು, ಇದರ ಹಿನ್ನೆಲೆಯಲ್ಲಿ ಹಿರಿಯ ನಾಯಕರಾಗಿರುವ ರಾಣಾ ಗೋಸ್ವಾಮಿ ಅವರು ಪಕ್ಷ ತೊರೆದಿದ್ದಾರೆ ಎನ್ನಲಾಗಿದೆ. ಮಾರ್ಚ್ 4 ರಂದು ಬಿಜೆಪಿ ಸೇರುವ ಸಾಧ್ಯತೆಗಳು ದಟ್ಟವಾಗಿವೆ. ಅವರು ಇಂದು (ಬುಧವಾರ) ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ರಾಣಾ ಗೋಸ್ವಾಮಿ ಅವರು ಮೂರು ಬಾರಿ ಅಸ್ಸೋಂ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2006 ರಲ್ಲಿ ಜೋರ್ಹತ್ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ರಾಣಾ ಅವರು ಬಿಜೆಪಿ ಸೇರಲು ನಿರ್ಧರಿಸಿದರೆ ಪಕ್ಷಕ್ಕೆ ಸ್ವಾಗತಿಸುವುದಾಗಿ ಸಿಎಂ ಈ ಹಿಂದೆ ಹೇಳಿದ್ದರು.
ಕ್ರಿಮಿನಲ್ ಹಿನ್ನೆಲೆ ಇರಬಾರದು: ಕಾಂಗ್ರೆಸ್ಗೆ ಗುಡ್ಬೈ ಹೇಳಿರುವ ಹಿರಿಯ ನಾಯಕ ರಾಣಾ ಗೋಸ್ವಾಮಿ ಅವರು ಬಿಜೆಪಿ ಸೇರಲು ಬಯಸಿದರೆ ಸ್ವಾಗತಿಸುತ್ತೇವೆ. ದಿಲ್ಲಿಯಲ್ಲಿ ಗಾಂಧಿ ಕುಟುಂಬ ಸೇರಿದಂತೆ ರಾಜ್ಯಗಳಲ್ಲಿ ಹಲವು ಕುಟುಂಬಗಳ ಹಿಡಿತಕ್ಕೆ ಸಿಲುಕಿದ ಕಾರಣ ಪಕ್ಷ ಇಂದು ಈ ದುಸ್ಥಿತಿಗೆ ತಲುಪಿದೆ. ಪಕ್ಷದಲ್ಲಿ ಆಂತರಿಕ ಕಚ್ಚಾಟ ಜೋರಾಗಿದೆ. ಹೀಗಾಗಿ ಅಲ್ಲಿನ ನಾಯಕರು ಬೇರೆಡೆ ವಲಸೆ ಹೋಗುತ್ತಿದ್ದಾರೆ ಎಂದರು.
ರಾಣಾ ಅವರು ಜೋರ್ಹತ್ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ, ಆ ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಸಮಿತಿ ಕಾರ್ಯಕರ್ತರ ಸಮಿತಿ ರಚಿಸಲಾಗಿದೆ. ಸಮಿತಿ ಸಮಾಲೋಚಿಸಿ ಅಭ್ಯರ್ಥಿಯ ಹೆಸರನ್ನು ಸೂಚಿಸಿದ್ದಾರೆ. ಕೊನೆಯಲ್ಲಿ ಸರ್ವಸಮ್ಮತಿ ಮೇರೆಗೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಲಿದೆ. ಯಾವುದೇ ಕ್ರಿಮಿನಲ್ ದಾಖಲೆ ಇಲ್ಲದವರನ್ನು ಪಕ್ಷಕ್ಕೆ ಸ್ವಾಗತಿಸಲು ಬಿಜೆಪಿ ಸಿದ್ಧವಿದೆ ಎಂದು ಸಚಿವರು ಹೇಳಿದರು.
ಅಭ್ಯರ್ಥಿ ಆಕಾಂಕ್ಷಿಯಾಗಿ ಯಾರೂ ಪಕ್ಷ ಸೇರಬಾರದು. ಪಕ್ಷದ ಶಿಸ್ತಿಗೆ ಒಪ್ಪಿಕೊಂಡು ಬರಬೇಕು. ಕಾರ್ಯಕರ್ತರ ಸಲಹೆ ಮೇರೆಗೆ ಪಕ್ಷವು ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುತ್ತದೆ ಎಂದರು.
ಇದನ್ನೂ ಓದಿ: ಹಿಮಾಚಲಪ್ರದೇಶದಲ್ಲಿ ರಾಜಕೀಯ ತಲ್ಲಣ: ಓರ್ವ ಸಚಿವ ರಾಜೀನಾಮೆ, ಅಧಿವೇಶನದಿಂದ ಬಿಜೆಪಿ ಶಾಸಕರ ಅಮಾನತು