ನವದೆಹಲಿ: ಇಂಡಿಯಾ ಕೂಟದ ನೇತೃತ್ವ ವಹಿಸಿರುವ ಕಾಂಗ್ರೆಸ್ಗೆ ಆಮ್ ಆದ್ಮಿ ಪಕ್ಷ(ಆಪ್) ಮತ್ತೊಂದು ಶಾಕ್ ನೀಡಿದೆ. ದೆಹಲಿಯ ಎಲ್ಲ 7 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಭಾನುವಾರ ಘೋಷಿಸಿದೆ. ಈಗಾಗಲೇ ಪಂಜಾಬ್‌ನಲ್ಲಿ ಸೀಟು ಹಂಚಿಕೆ ಮೈತ್ರಿ ಇಲ್ಲ ಎಂದು ಹೇಳಿದೆ.
ಪಂಜಾಬ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಕುರಿತು ಇನ್ನೂ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ಹೀಗಾಗಿ ಆಪ್ ಪಂಜಾಬ್ ನಂತರ ದೆಹಲಿಯ ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲಿದೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷಕ್ಕೆ ಎಲ್ಲಾ 7 ಸ್ಥಾನಗಳನ್ನು ನೀಡಲು ದೆಹಲಿಯ ಜನರು ನಿರ್ಧರಿಸಿದ್ದಾರೆ. ಹೀಗಾಗಿ ನಾವು ಪಂಜಾಬ್ನಂತೆ ದೆಹಲಿಯಲ್ಲೂ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸಭೆಯಲ್ಲಿ ಘೋಷಿಸಿದರು.
ಇದಕ್ಕೂ ಮುನ್ನ ಕೇಜ್ರಿವಾಲ್ ಅವರು ಪಂಜಾಬ್‌ನ ಎಲ್ಲಾ 13 ಸ್ಥಾನಗಳು ಮತ್ತು ಚಂಡೀಗಢದ ಲೋಕಸಭಾ ಸ್ಥಾನಕ್ಕೆ ಏಕಾಂಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು. ಅಲ್ಲದೇ, ಗುಜರಾತ್‌ನ ಭರೂಚ್ ಮತ್ತು ಅಸ್ಸಾಂನ ಮೂರು ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಲಾಗಿದೆ. ಗೋವಾ, ಗುಜರಾತ್ ಮತ್ತು ಹರಿಯಾಣದಲ್ಲಿ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲು ಪಕ್ಷವು ಫೆಬ್ರವರಿ 13 ರಂದು ರಾಜಕೀಯ ವ್ಯವಹಾರಗಳ ಸಮಿತಿ ಸಭೆಯನ್ನು ಕರೆದಿದೆ.
ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಂಡ ನಂತರ ಆಮ್ ಆದ್ಮಿ ಪಕ್ಷವು ತನ್ನ ನೆಲೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಪ್ರಯತ್ನಿಸುತ್ತಿದೆ. ಜೊತೆಗೆ ದೆಹಲಿಯಲ್ಲಿ ಅಧಿಕಾರದಲ್ಲಿದ್ದರೂ, ಒಂದೇ ಒಂದು ಸಂಸದ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಎಲ್ಲ 7 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ, ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ರಾಷ್ಟ್ರ ರಾಜಧಾನಿಯ ಎಲ್ಲ ಏಳು ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದಾಗ್ಯೂ ಆಪ್, 7 ರ ಪೈಕಿ 5 ಕ್ಷೇತ್ರಗಳಲ್ಲಿ ಮತ ಪ್ರಮಾಣದಲ್ಲಿ ಮೂರನೇ ಸ್ಥಾನ ಪಡೆದಿದೆ. ಶೇಕಡಾ 18.2 ರಷ್ಟು ಮತಗಳನ್ನು ಗಳಿಸಿತ್ತು. ಕಾಂಗ್ರೆಸ್ ಶೇಕಡಾ 22.6 ಮತ್ತು ಬಿಜೆಪಿ ಶೇಕಡಾ 56.9 ರಷ್ಟು ಮತಗಳನ್ನು ಪಡೆದಿದೆ.
ವಿಪಕ್ಷಗಳು ರಚಿಸಿಕೊಂಡಿರುವ I.N.D.I.A ಕೂಟದ ಭಾಗವಾಗಿರುವ ಆಪ್ ಸೀಟು ಹಂಚಿಕೆ ಕುರಿತು ದಿಲ್ಲಿಯಲ್ಲಿ ಕಾಂಗ್ರೆಸ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದೆ. ಆದರೆ, ಫಲಪ್ರದವಾಗದ ಕಾರಣ ಇದೀಗ ಏಳೂ ಸ್ಥಾನಗಳಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಆಪ್ - ಟಿಎಂಸಿ ಏಕಾಂಗಿ ಸ್ಪರ್ಧೆ ಇಂಡಿಯಾ ಕೂಟದ ಮರಣಶಾಸನ: ಬಿಜೆಪಿ