ಜಮ್ಮು: 370ನೇ ವಿಧಿ ರದ್ದುಗೊಳಿಸಿದ ಐದನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಅಮರನಾಥ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಒಂದು ದಿನದ ಮಟ್ಟಿಗೆ ಈ ಯಾತ್ರೆಗೆ ಬ್ರೇಕ್ ನೀಡಲಾಗಿದ್ದು, ಇಂದು ಭಗವತಿ ನಗರ್ ಬೇಸ್ ಕ್ಯಾಂಪ್ನಿಂದ ಯಾವುದೇ ಯಾತ್ರಾರ್ಥಿಗಳು ಯಾತ್ರೆಗೆ ಪ್ರಯಾಣ ನಡೆಸಲಿಲ್ಲ.
ಈ ವರ್ಷದ ಯಾತ್ರೆಯಲ್ಲಿ ಇಲ್ಲಿಯವರೆಗೆ 4.90 ಲಕ್ಷ ಯಾತ್ರಿಕರು ಹಿಮ ಲಿಂಗದ ದರ್ಶನ ನಡೆಸಿದ್ದಾರೆ. ಇಂದು ಮುನ್ನೆಚ್ಚರಿಕೆ ಕ್ರಮವಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ಯಾವುದೇ ಹೊಸ ಬ್ಯಾಚ್ ಜಮ್ಮು ಮತ್ತು ಕಾಶ್ಮೀರದಿಂದ ಇಂದು ಪ್ರಯಾಣ ನಡೆಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಹಕ್ಕಿನ ವಿಧಿ 370 ಅನ್ನು ರದ್ದು ಮಾಡಿ ಇಂದಿಗೆ ಐದು ವರ್ಷವಾಗಿದೆ. ನಗರದಲ್ಲಿ ಮುನ್ನೆಚ್ಚರಿಕೆ ಕ್ರಮ ನಡೆಸಲಾಗಿದ್ದು, ಎಲ್ಲೆಡೆ ಭದ್ರತೆ ಕಲ್ಪಿಸಲಾಗಿದೆ ಎಂದರು.
2019ರ ಆಗಸ್ಟ್ 5 ರಂದು ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಿತ್ತು. ಜೊತೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಅನ್ನು ಎರಡು ಕೇಂದ್ರಾಡಳಿ ಪ್ರದೇಶವಾಗಿ ಘೋಷಿಸಿತು.
ಜಮ್ಮು ಕಾಶ್ಮೀರದಲ್ಲಿ ಜೂನ್ 29ರಿಂದ ಅಮರನಾಥ ಯಾತ್ರೆ ಸಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ದಾಖಲೆ ಮಟ್ಟದಲ್ಲಿ ಅಮರನಾಥ ಯಾತ್ರೆಗೆ ಯಾತ್ರಿಕರು ಆಗಮಿಸಿದ್ದಾರೆ. 2023ರಲ್ಲಿ ಸಂಪೂರ್ಣ ಅಮರನಾಥ ಯಾತ್ರೆಯಲ್ಲಿ 4.54 ಲಕ್ಷ ಯಾತ್ರಿಕರು ಶಿವಲಿಂಗನ ದರ್ಶನ ನಡೆಸಿದ್ದರು. ಈ ಬಾರಿ 4.90 ಲಕ್ಷ ಯಾತ್ರಿಕರು ದರ್ಶನ ಪಡೆದಿದ್ದು, ದಾಖಲೆ ನಿರ್ಮಾಣ ಮಾಡಿದೆ. ಕಣಿವೆ ರಾಜ್ಯದಲ್ಲಿ ಶಾಂತಿಯುತ ಮತ್ತು ಸುಗಮ ಯಾತ್ರೆಗಾಗಿ ಈ ಬಾರಿ ಸಿಎಪಿಎಫ್ ಮತ್ತು ಜಮ್ಮು ಕಾಶ್ಮೀರದ ಪೊಲೀಸರಿಂದ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದು ಯಾವುದೇ ಸಮಸ್ಯೆಯಾಗದಂತೆ ಎಲ್ಲ ಭದ್ರತೆ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.
ಅಮರನಾಥ ಗುಹೆ ಕಾಶ್ಮೀರದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಭಕ್ತರು ಸಾಂಪ್ರದಾಯಿಕ ದಕ್ಷಿಣ ಕಾಶ್ಮೀರ (ಪಹಲ್ಗಾಮ್) ಮಾರ್ಗದಿಂದ ಅಥವಾ ಉತ್ತರ ಕಾಶ್ಮೀರ (ಬಾಲ್ಟಾಲ್) ಮಾರ್ಗದಿಂದ ಈ ಗುಹಾ ದೇವಾಲಯ ತಲುಪುವ ವ್ಯವಸ್ಥೆ ಮಾಡಲಾಗಿದೆ.
52 ದಿನಗಳ ಅಮರನಾಥ ಯಾತ್ರೆ ಆಗಸ್ಟ್ 19ರಂದು ರಕ್ಷಾ ಬಂಧನ್ ಹಾಗೂ ಶ್ರಾವಣ ಪೂರ್ಣಿಮೆಯ ದಿನ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ವಯನಾಡ್ ಭೂಕುಸಿತಕ್ಕೆ ಮಿಡಿದ ಚಿತ್ರರಂಗ: ಸಂತ್ರಸ್ತರ ನೆರವಿಗೆ ಧಾವಿಸಿದ ಸಿನಿಮೋದ್ಯಮ