ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ಕುಪ್ವಾರದಲ್ಲಿ ಶನಿವಾರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ಕ್ಯಾಪ್ಟನ್ ಸೇರಿದಂತೆ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ. ಇದೇ ವೇಳೆ, ಪಾಕಿಸ್ತಾನದ ಒಳನುಸುಳುಕೋರನೊಬ್ಬನನ್ನು ಭದ್ರತಾ ಸಿಬ್ಬಂದಿ ಸದೆಬಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಟ್ರೆಹ್ಗಾಮ್ ಪ್ರದೇಶದ ಮಚಿಲ್ ಸೆಕ್ಟರ್‌ನಲ್ಲಿರುವ ಕುಮ್ಕಾಡಿ ಪೋಸ್ಟ್‌ನಲ್ಲಿ ಭದ್ರತಾ ಪಡೆಗಳ ಉಗ್ರಗಾಮಿ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ನಡೆದ ಎರಡನೇ ಎನ್‌ಕೌಂಟರ್ ಇದಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯಲ್ಲಿ ಕುಮ್ಕಾಡಿ ಪೋಸ್ಟ್ ಬಳಿ ಉಗ್ರರ ಚಲನವಲನವನ್ನು ಪತ್ತೆಹಚ್ಚಿವೆ. ಈ ವೇಳೆ ಪೋಸ್ಟ್ ಬಳಿ ಮೂವರು ಒಳನುಸುಳುಕೋರರು ಗ್ರೆನೇಡ್ ಎಸೆದು ಮತ್ತು ಮುಂದಕ್ಕೆ ಬಂದ ಪೋಸ್ಟ್‌ಗೆ ಗುಂಡು ಹಾರಿಸಿದರು. ಸೈನಿಕರು ಪ್ರತಿದಾಳಿ ನಡೆಸಿದರು. ಇದರಿಂದ ಎರಡು ಕಡೆ ಗುಂಡಿನ ಚಕಮಕಿ ಪ್ರಾರಂಭವಾಗಿವೆ.
ಈ ಎನ್‌ಕೌಂಟರ್‌ನಲ್ಲಿ ಐವರು ಸೈನಿಕರು ಗಾಯಗೊಂಡಿದ್ದರು. ಇವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾರೆ. ಇದೇ ವೇಳೆ, ಕ್ಯಾಪ್ಟನ್ ಸೇರಿದಂತೆ ಗಾಯಗೊಂಡ ಸೇನಾ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಯೋಧರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮತ್ತೊಂದೆಡೆ, ಇದುವರೆಗೆ ಒಳನುಸುಳುಕೋರನೊಬ್ಬನನ್ನು ಎನ್‌ಕೌಂಟರ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
BAT ದಾಳಿ ವಿಫಲ: ಈ ಒಳನುಸುಳುಕೋರರು ಪಾಕಿಸ್ತಾನಕ್ಕೆ ಸೇರಿದ್ದಾರೆ. ಪಾಕಿಸ್ತಾನದ ಬಾರ್ಡರ್ ಆ್ಯಕ್ಷನ್ ಟೀಮ್ (ಬಿಎಟಿ-BAT)ನೊಂದಿಗೆ ದಾಳಿಗೆ ಮುಂದಾಗಿದ್ದರು. ಬಿಎಟಿ ಸಾಮಾನ್ಯವಾಗಿ ಪಾಕಿಸ್ತಾನ ಸೇನೆಯ ವಿಶೇಷ ಪಡೆ ಸಿಬ್ಬಂದಿ ಮತ್ತು ಭಯೋತ್ಪಾದಕರನ್ನು ಒಳಗೊಂಡಿರುತ್ತದೆ. ಒಳನುಸುಳುಕೋರರ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಗಂಟೆಗಳ ಕಾಲ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಒಬ್ಬ ಒಳನುಸುಳುಕೋರನನ್ನು ಬೇಟೆಯಾಡಲಾಗಿದೆ. ಇದರ ನಡುವೆಯೂ ಇಬ್ಬರು ಒಳನುಸುಳುಕೋರರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಪಲಾಯನ ಮಾಡಿ ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಹೆಚ್ಚಿದ ಉಗ್ರರ ಉಪಟಳ: ಬುಧವಾರ ಕೂಡ ಇದೇ ಕುಪ್ವಾರದಲ್ಲಿ ರಾತ್ರೋರಾತ್ರಿ ಎನ್‌ಕೌಂಟರ್ ನಡೆದಿತ್ತು. ಭಾರತೀಯ ಸೇನೆಯ ನಾನ್ ಕಮಿಷನ್ಡ್ ಅಧಿಕಾರಿ (ಎನ್‌ಸಿಒ) ಹುತಾತ್ಮರಾಗಿದ್ದರು. ಒಬ್ಬ ಉಗ್ರನನ್ನು ಭದ್ರತಾ ಸಿಬ್ಬಂದಿ ಎನ್‌ಕೌಂಟರ್ ಮಾಡಿದ್ದರು. ಇನ್ನು, ಜಮ್ಮುವಿನ ಗಡಿ ಪ್ರದೇಶಗಳಲ್ಲಿ ಉಗ್ರರ ಉಪಟಳ ಉಲ್ಬಣಗೊಂಡಿದೆ. ಜುಲೈ 15ರಂದು ದೋಡಾದಲ್ಲಿ ಅವಳಿ ಗುಂಡಿನ ಚಕಮಕಿಗಳು ನಡೆದಿದ್ದವು. ಈ ಕಾರ್ಯಾಚರಣೆಯಲ್ಲಿ ಕ್ಯಾಪ್ಟನ್ ಸೇರಿದಂತೆ ಐವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು.
ಇದನ್ನೂ ಓದಿ: ಗಡಿ ನಿಯಂತ್ರಣ ರೇಖೆಗೆ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಭೇಟಿ