ಸಿವಾನ್ (ಬಿಹಾರ): ಸಣ್ಣ ಸೇತುವೆ ಕುಸಿದುಬಿದ್ದ ಘಟನೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ಒಂದು ವಾರದೊಳಗೆ ಕುಸಿದು ಬಿದ್ದ ಎರಡನೇ ಸೇತುವೆ ಇದಾಗಿದೆ. ಆದರೆ, ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳು ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ದಾರಾವುಂಡಾ ಮತ್ತು ಮಹಾರಾಜ್‌ಗಂಜ್ ಹಳ್ಳಿಗಳನ್ನು ಸಂಪರ್ಕಿಸುವ ಕಾಲುವೆಗೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿತ್ತು. ಶನಿವಾರ ಮುಂಜಾನೆ 5 ಗಂಟೆಯ ಸುಮಾರಿಗೆ ಇದು ಕುಸಿದಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಇದು ತುಂಬಾ ಹಳೆಯದಾಗಿದ್ದು, ಕಾಲುವೆಯ ಮೂಲಕ ನೀರು ಬಿಡುವಾಗ ಪಿಲ್ಲರ್‌ಗಳು ಕುಸಿದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಮುಕುಲ್ ಕುಮಾರ್ ಗುಪ್ತಾ ಹೇಳಿದರು. ಅಲ್ಲದೇ, ಈ ಸೇತುವೆಯನ್ನು ಪುನರ್ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿಯವರೆಗೆ ಹಳ್ಳಿಗಳ ನಿವಾಸಿಗಳು ಸಾಧ್ಯವಾದಷ್ಟು ಅನಾನುಕೂಲತೆ ಉಂಟಾಗದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ ಎಂದು ಅವರು ವಿವರಿಸಿದರು.
ದಾರಾವುಂಡಾ ಬಿಡಿಆರ್ ಸೂರ್ಯ ಪ್ರತಾಪ್ ಸಿಂಗ್ ಮಾತನಾಡಿ, 1991ರಲ್ಲಿ ಅಂದಿನ ಮಹಾರಾಜ್‌ಗಂಜ್ ಶಾಸಕ ಉಮಾ ಶಂಕರ್ ಸಿಂಗ್ ನೆರವಿನಿಂದ ಈ ಸೇತುವೆಯನ್ನು ನಿರ್ಮಿಸಲಾಗಿತ್ತು ಎಂದು ಸ್ಥಳೀಯರು ಹೇಳುತ್ತಿದ್ದಾರೆ ಎಂದು ತಿಳಿಸಿದರು. ಮತ್ತೊಂದೆಡೆ, ಮಹಾರಾಜಗಂಜ್‌ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ಪ್ರತಿಕ್ರಿಯಿಸಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 20 ಅಡಿ ಉದ್ದದ ಸೇತುವೆ ನಿರ್ಮಿಸಲಾಗಿತ್ತು. ಈಗ ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಮಂಗಳವಾರ, ಅರಾರಿಯಾ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಸುಮಾರು 180 ಮೀಟರ್ ಉದ್ದದ ಸೇತುವೆ ಕುಸಿದಿತ್ತು. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಗ್ರಾಮೀಣ ಕಾಮಗಾರಿ ಇಲಾಖೆಗೆ ಸೂಚಿಸಲಾಗಿದೆ. ಇದಷ್ಟೇ ಅಲ್ಲ, ನದಿಗಳು ಮತ್ತು ಕಾಲುವೆಗಳಿಗೆ ನಿರ್ಮಿಸಲಾದ ದೊಡ್ಡ ಮತ್ತು ಸಣ್ಣ ಸೇತುವೆಗಳು ಕುಸಿದ ಹಲವಾರು ದುರ್ಘಟನೆಗಳಿಗೆ ಬಿಹಾರ ಸಾಕ್ಷಿಯಾಗಿದೆ. ಇಂತಹ ಘಟನೆಗಳು ಸಾವು-ನೋವುಗಳಿಗೆ ಕಾರಣವಾಗದಿದ್ದರೂ, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.
ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷೆಗಳ ಸುಧಾರಣೆಗೆ 7 ಸದಸ್ಯರ ಸಮಿತಿ ರಚಿಸಿದ ಕೇಂದ್ರ ಸರ್ಕಾರ