ಇಟ್ವಾ(ಉತ್ತರ ಪ್ರದೇಶ): ಹೆಣ್ಣುಮಕ್ಕಳನ್ನು ಉಳಿಸಿ, ಹೆಣ್ಣುಮಕ್ಕಳನ್ನು ಓದಿಸಿ ಎಂಬ ಸರ್ಕಾರದ ಪ್ರಚಾರ ಕಾರ್ಯಕ್ರಮಗಳ ನಡುವೆಯೂ ಹೆಣ್ಣು ಮಕ್ಕಳ ಜನನದ ಬಗ್ಗೆ ಸಮಾಜ ಹೊಂದಿರುವ ಪೂರ್ವಗ್ರಹ ಇನ್ನೂ ನಿರ್ಮೂಲನೆಯಾಗಿಲ್ಲ. ಅದಕ್ಕೆ ಸಾಕ್ಷಿ ಉತ್ತರ ಪ್ರದೇಶದ ಇಟ್ವಾದಲ್ಲಿ ನಡೆದಿರುವ ಘಟನೆ. ನಾಲ್ಕನೇ ಮಗು ಕೂಡಾ ಹೆಣ್ಣಾಯಿತು ಎಂಬ ಕಾರಣಕ್ಕೆ ತಂದೆಯೇ ಹಸುಗೂಸನ್ನು ನೆಲಕ್ಕೆ ಎಸೆದು ಕೊಂದಿರುವ ದಾರುಣ ಘಟನೆ ನಡೆದಿದೆ.
30 ವರ್ಷದ ಬಬ್ಲು ದಿವಾಕರ್ ಈ ಕೃತ್ಯ ಎಸಗಿದ್ದು, ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ವರ್ಮಾ, ಮೂರು ಹೆಣ್ಣು ಮಕ್ಕಳ ಬಳಿಕ ದಿವಾಕರ್ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ. ಆದರೆ, ನಾಲ್ಕನೇ ಮಗುವೂ ಹೆಣ್ಣಾಯಿತು. ಇದರಿಂದ ಕೋಪಗೊಂಡ ಆತ ಭಾನುವಾರ ತಿಂಗಳ ಶಿಶುವನ್ನು ನೆಲಕ್ಕೆ ಬಿಸಾಕಿ ಅದರ ಸಾವಿಗೆ ಕಾರಣನಾಗಿದ್ದಾನೆ ಎಂದರು.
ಮೊದಲ ಹೆಂಡತಿಯಿಂದ ಈಗಾಗಲೇ ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ದಿವಾಕರ್ ಇದೇ ಕಾರಣದಿಂದ ಎರಡನೇ ಮದುವೆಯಾಗಿದ್ದ. ಎರಡನೇ ಹೆಂಡತಿಗೂ ಮೊದಲ ಮಗು ಹೆಣ್ಣಾಗಿತ್ತು. ಇದೀಗ ಎರಡನೇ ಮಗುವೂ ಹೆಣ್ಣಾಗಿದೆ.
ಒಂದು ತಿಂಗಳ ಹಿಂದೆ ಮಗು ಜನಿಸಿದ್ದು, ಭಾನುವಾರ ಮಗು ತಾಯಿಯ ಮಡಿಲಲ್ಲಿ ಮಲಗಿತ್ತು. ಈ ವೇಳೆ ಕೋಪಿತಗೊಂಡ ದಿವಾಕರ್ ತಾಯಿಯಿಂದ ಮಗುವನ್ನು ಕಸಿದು, ನೆಲಕ್ಕೆ ಬಡಿದಿದ್ದಾನೆ. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ಕರೆತರಲಾಯಿತು. ಆದರೆ, ಮಗು ಅದಾಗಲೇ ಗಂಭೀರ ಗಾಯದಿಂದ ಮೃತಪಟ್ಟಿತ್ತು.
ಇದೀಗ ಹೆಂಡತಿ ನೀಡಿರುವ ದೂರಿನ ಆಧಾರದ ಮೇಲೆ ದೂರು ದಾಖಲಿಸಲಾಗಿದೆ. ಬಿಎನ್ಎಸ್ ಸೆಕ್ಷನ್ 105ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಇದನ್ನೂ ಓದಿ: ಹೇಮಾ ಸಮಿತಿ ವರದಿ: ನಿರ್ದೇಶಕ ಪ್ರಕಾಶ್ ಬಂಧನ, ಜಾಮೀನಿನ ಮೇಲೆ ಬಿಡುಗಡೆ