ಕರ್ನೂಲ್ (ಆಂಧ್ರಪ್ರದೇಶ): ನವರಾತ್ರಿ ಹಬ್ಬದಂದು ನಡೆಯುವ ದೇವರಗಟ್ಟು ವಾರ್ಷಿಕ ಬನ್ನಿ ಉತ್ಸವದ ದಂಡ ಕಾಳಗ (ದೊಣ್ಣೆಯಿಂದ ಬಡಿದುಕೊಳ್ಳುವ ಆಚರಣೆ)ದಲ್ಲಿ 70 ಮಂದಿ ಗಾಯಗೊಂಡಿರುವ ಘಟನೆ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊಳಗುಂದ ತಾಲೂಕಿನ ದೇವರಗಟ್ಟು ಎಂಬಲ್ಲಿ ಪ್ರತಿ ವರ್ಷದಂತೆ ಈ ವರ್ಷದ ವಿಜಯದಶಮಿಯ ದಿನದಂದು ಮಧ್ಯರಾತ್ರಿ ದೊಣ್ಣೆ ಕಾಳಗದ ಮೆರವಣಿಗೆ ನಡೆಸಲಾಯಿತು. ಸಾವಿರಾರು ಜನರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಉತ್ಸವ ಮೂರ್ತಿಗಾಗಿ ಎರಡು ಬಣದವರು ದಂಡ ಕಾಳಗ ನಡೆಸಿಕೊಂಡು ಬರುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ದಂಡ ಕಾಳಗದಲ್ಲಿ 70 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ತಲೆಮಾರುಗಳ ಇತಿಹಾಸ ಇರುವ ಬನ್ನಿ ಉತ್ಸವ: ದೇವರಗಟ್ಟು ಜನರು ತಲೆಮಾರುಗಳಿಂದ ದಸರಾ ಸಂದರ್ಭದಲ್ಲಿ ಈ ಕರ್ರಾಳ ಸಮರ (ದಂಡ ಕಾಳಗ)ವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿವರ್ಷ ವಿಜಯದಶಮಿಯ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ. ಆಲೂರು ಸಮೀಪದ ದೇವರಗಟ್ಟು ಎಂಬ ಬೆಟ್ಟದಲ್ಲಿ ಮಾಳಮಲ್ಲೇಶ್ವರ ಸ್ವಾಮಿ ದೇವಸ್ಥಾನ ಇದ್ದು, ದಸರಾ ದಿನದಂದು ಮಧ್ಯರಾತ್ರಿ 12 ಗಂಟೆಗೆ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿ ಮೂರ್ತಿಗಳಿಗೆ ಕಲ್ಯಾಣ ನೆರವೇರಿಸಲಾಗುತ್ತದೆ. ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಾದ ಗುಡ್ಡ, ಪಡಿಯಗಟ್ಟು, ರಕ್ಷಪದ, ಶಮೀವೃಕ್ಷಂ, ನಖಿಬಸವಣ್ಣಗುಡಿ ಸೇರಿದಂತೆ ವಿವಿಧೆಡೆ ಉತ್ಸವ ಮೂರ್ತಿಗಳ ಮೆರವಣಿಗೆ ಮಾಡುವುದು ಸಂಪ್ರದಾಯ. ಆ ಬಳಿಕ ಉತ್ಸವ ಮೂರ್ತಿ ಎದುರು ಗ್ರಾಮಸ್ಥರು ಎರಡು ಬಣಗಳಾಗಿ ದಂಡ ಕಾಳಗ ನಡೆಸುತ್ತಾರೆ. ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ದಾಳಿ ಮಾಡುವುದು ಇಲ್ಲಿನ ವಿಶೇಷ.
ಅದೇ ರೀತಿ ಈ ವರ್ಷ ಉತ್ಸವ ಮೂರ್ತಿಗಾಗಿ 5 ಗ್ರಾಮಗಳ ಜನರು ಒಂದು ಗುಂಪು ಹಾಗೂ ಇನ್ನುಳಿದ 3 ಗ್ರಾಮಗಳ ಜನರು ಮತ್ತೊಂದು ಗುಂಪು ಕಟ್ಟಿಕೊಂಡು ದಂಡ ಕಾಳಗ ನಡೆಸಿದರು. ನೇರಣಿ, ನೇರಣಿತಾಂಡ, ಕೊತ್ತಪೇಟ ಗ್ರಾಮಗಳ ಜನರ ಒಂದು ತಂಡ ಹಾಗೂ ಆಲೂರು, ಸುಳುವಾಯಿ, ಎಲ್ಲರ್ತಿ, ಅರಿಕೇರಾ, ನಿದ್ರವತ್ತಿ, ಬಿಳೆಹಾಳ್ ಗ್ರಾಮಗಳ ಮತ್ತೊಂದು ತಂಡ ಮುಖಾಮುಖಿಯಾಗಿ ಉತ್ಸವ ಮೂರ್ತಿಗಳನ್ನು ಪಡೆಯಲು ದಂಡ ಕಾಳಗ ನಡೆಸಿದವು. ಈ ವೇಳೆ ಎರಡೂ ಕಡೆಯವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾರೀ ಬಿಗಿ ಭದ್ರತೆ: ಈ ದಂಡ ಕಾಳಗ ವೀಕ್ಷಿಸಲೆಂದೇ ಆಂಧ್ರ ಪ್ರದೇಶ ಅಷ್ಟೇ ಅಲ್ಲದೇ, ತೆಲಂಗಾಣ ಹಾಗೂ ಕರ್ನಾಟಕದ ಲಕ್ಷಾಂತರ ಭಕ್ತರು ಈ ಬೆಟ್ಟಕ್ಕೆ ಆಗಮಿಸಿದ್ದರು. ಮುಂಜಾಗ್ರತವಾಗಿ 800 ಪೊಲೀಸರನ್ನು ನಿಯೋಜಿಸಲಾಗಿತ್ತು. ದೇವಘಟ್ಟ ಸುತ್ತಮುತ್ತಲ ಪ್ರದೇಶದಲ್ಲಿ ಸಿಸಿಟಿವಿ, ಡ್ರೋನ್ ಕ್ಯಾಮರಾಗಳ ಭಾರೀ ಬಿಗಿ ಭದ್ರತೆ ಕೂಡ ಕೈಗೊಳ್ಳಲಾಗಿತ್ತು. ಆದರೂ ಉತ್ಸವದಲ್ಲಿ ಇಂತಹದೊಂದು ಘಟನೆ ನಡೆದಿದೆ ಎಂದು ಜಿಲ್ಲಾಡಳಿತ ಬೇಸರ ವ್ಯಕ್ತಪಡಿಸಿದೆ.
ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಆದೋನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಬ್ಬರು ಯುವಕರ ಸಾವು: ಕರ್ನೂಲು ಜಿಲ್ಲೆಯ ಆಲೂರು ತಾಲೂಕಿನ ಕರಿಡಿಗುಡ್ಡದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಶನಿವಾರ ದೇವರಗಟ್ಟುವಿನಲ್ಲಿ ಬನ್ನಿ ಹಬ್ಬ ವೀಕ್ಷಿಸಲು ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿತ್ತು. ಮೃತರನ್ನು ಕರ್ನಾಟಕ ಮೂಲದವರು ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವಕನನ್ನು ಆದೋನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಶಬರಿಮಲೆ ಸ್ಪಾಟ್ ಬುಕಿಂಗ್ ರದ್ದು ಖಂಡಿಸಿ ಪ್ರತಿಭಟನೆ: ರಾಜಕೀಯ ತಿರುವು ಪಡೆದ ವಿವಾದ