ವಾರಾಣಸಿ (ಉತ್ತರಪ್ರದೇಶ): ಭಾರತ ಆಧ್ಯಾತ್ಮಿಕ ರಾಷ್ಟ್ರ. ಈ ತಪೋಭೂಮಿ ವಿಶ್ವದ ಜನರಿಗೆ ಅಚ್ಚುಮೆಚ್ಚು. ಉತ್ತರಪ್ರದೇಶದ ವಾರಾಣಸಿಗೆ ಈಚೆಗೆ ಭೇಟಿ ನೀಡಿದ 20 ದೇಶಗಳ ರಾಯಭಾರಿಗಳು ಅಲ್ಲಿನ ಸೊಬಗನ್ನು ಕಂಡು ಉಲ್ಲಸಿತರಾಗಿದ್ದಾರೆ. ಗಂಗಾ ಆರತಿಯಲ್ಲಿ ಪಾಲ್ಗೊಂಡು ಪುನೀತರಾಗಿದ್ದಾರೆ. ಜೊತೆಗೆ ಸಂದರ್ಶಕರ ಪುಸ್ತಕದಲ್ಲಿ 'ನಾವಿಲ್ಲಿಗೆ ಬಂದಿದ್ದು ಅದೃಷ್ಟ ಮತ್ತು ಪುಣ್ಯ' ಎಂದು ಬರೆದಿದ್ದಾರೆ.
ಶನಿವಾರದಂದು (ಏಪ್ರಿಲ್ 13) 20 ದೇಶಗಳ ರಾಯಭಾರಿಗಳು ಕಾಶಿಗೆ ಭೇಟಿ ನೀಡಿದ್ದರು. ನಗರ ಪ್ರದಕ್ಷಿಣೆ ಹಾಕಿ ಇಲ್ಲಿನ 'ಕ್ಷೇತ್ರಶಕ್ತಿ'ಯನ್ನು ಅನುಭವಿಸಿದರು. ಜೊತೆಗೆ ಗಂಗಾ ತೀರದ ದಶಾಶ್ವಮೇಧ ಘಾಟ್ನಲ್ಲಿ ನಡೆದ ವಿಶ್ವವಿಖ್ಯಾತ ಗಂಗಾ ಆರತಿಯಲ್ಲಿ ಪಾಲ್ಗೊಂಡರು. ಗಂಗಾಮಾತೆಯ ಆರತಿಯನ್ನು ನೋಡಿದ ರಾಯಭಾರಿಗಳೆಲ್ಲರೂ ಮೈಮರೆತರು. ಕೆಲ ಚಿತ್ರಗಳನ್ನೂ ತೆಗೆದುಕೊಂಡರು. ಗಂಗಾ ಸೇವಾ ನಿಧಿ ಅಧ್ಯಕ್ಷ ಸುಶಾಂತ್ ಮಿಶ್ರಾ, ಖಜಾಂಚಿ ಆಶಿಶ್ ತಿವಾರಿ, ಕಾರ್ಯದರ್ಶಿ ಹನುಮಾನ್ ಯಾದವ್ ಅವರು ಅತಿಥಿಗಳಿಗೆ ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿದರು. ಅಲ್ಲಿಂದ ಹೊರಡುವಾಗ ಎಲ್ಲ ಪ್ರತಿನಿಧಿಗಳಿಗೂ ಪ್ರಸಾದ ನೀಡಲಾಯಿತು.
ಕ್ಷೇತ್ರದರ್ಶನ ಪುಣ್ಯ ಭಾಗ್ಯ: ಜಮೈಕಾದ ರಾಯಭಾರಿ ಹೆಚ್.ಇ.ಜೇಸನ್ ಅವರು, "ಗಂಗಾ ತೀರದಲ್ಲಿ ನಡೆದ ಆರತಿಯಲ್ಲಿ ಭಾಗಿಯಾಗಿದ್ದು, ತುಂಬಾ ಗೌರವ ಮತ್ತು ಕೃತಜ್ಞತಾಭಾವ ಮೂಡಿದೆ. ಎಲ್ಲರಿಗೂ ಆ ಭಗವಂತ ಶಾಂತಿ, ಪ್ರೀತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಗಂಗಾ ಸೇವಾ ನಿಧಿಯ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ. ಉಗಾಂಡಾದ ಹೈ ಕಮಿಷನರ್ ಅವರು, ಗಂಗಾ ಸೇವೆಯಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಭಾರತದ ಸಂಸ್ಕೃತಿ ಮತ್ತು ವಿಶ್ವದ ಮೊದಲ ನಗರಕ್ಕೆ ಭೇಟಿ ನೀಡಿದ್ದು ಅದ್ಭುತ ಅನುಭವ ತಂದಿದೆ ಎಂದು ಬರೆದಿದ್ದಾರೆ.
ಸುರಿನಾಮ್ ರಾಯಭಾರಿ ಅರುಣ್ ಕೊಮರ್ ಹಾರ್ಡಿಯನ್ ಅವರು, ನಮಗೆಲ್ಲರಿಗೂ ಬಹಳ ವಿಶೇಷವಾದ ದಿನವಾಗಿದೆ. ಗಂಗಾ ಮಾತೆಯ ಆರತಿಯನ್ನು ನೋಡಿದಾಗ, ಖುದ್ದು ನಾವು ಗಂಗಾ ಮಾತೆಯ ಆಶೀರ್ವಾದ ಮತ್ತು ಅದ್ಭುತ ಶಕ್ತಿಯನ್ನು ಅನುಭವಿಸಿದೆವು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹೀಗೆ ವಿವಿಧ ದೇಶಗಳ ರಾಯಭಾರಿಗಳೂ ತಮ್ಮ ಅನುಭವ ಮತ್ತು ಅಭಿಪ್ರಾಯವನ್ನು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.
ಬನಾರಸ್ ಉಡುಗೆಯಲ್ಲಿ ರೂಪದರ್ಶಿಗಳು: ವಾರಾಣಸಿಯಲ್ಲಿ ಕಳೆದೆರಡು ದಿನಗಳಿಂದ ವಿವಿಧ ಕಾರ್ಯಕ್ರಮ ನಡೆಯುತ್ತಿದ್ದು, ಭಾನುವಾರದಂದು ನಮೋ ಘಾಟ್ನಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಬನಾರಸ್ ಸೀರೆಗಳ ಉತ್ತೇಜಿಸಲು ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ವಿನ್ಯಾಸಗೊಳಿಸಿದ ಬನಾರಸಿ ಬಟ್ಟೆಗಳನ್ನು ಧರಿಸಿ ರೂಪದರ್ಶಿಗಳು ಹೆಜ್ಜೆ ಹಾಕಿದರು. ಸಿನಿಮಾ ತಾರೆಯರಾದ ರಣವೀರ್ ಸಿಂಗ್ ಮತ್ತು ಕೃತಿ ಸನೋನ್ ಜಡ್ಜ್ಗಳಾಗಿ ಭಾಗವಹಿಸಿದ್ದರು.
ಇದನ್ನೂ ಓದಿ; ಕಾಶಿ ವಿಶ್ವನಾಥ ಕಾರಿಡಾರ್‌ನಲ್ಲಿ ಪ್ರವಾಸೋದ್ಯಮ ಚೇತರಿಕೆ: ₹643 ಕೋಟಿ ಜಿಎಸ್ಟಿ ಕಲೆಕ್ಷನ್!