ಪ್ರಯಾಗರಾಜ್ (ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ತಡೆ ನೀಡಲು ನಿರಾಕರಿಸಿದೆ. ಇಡೀ ಪ್ರದೇಶವನ್ನು ರಕ್ಷಿಸಬೇಕು ಎಂದು ಉತ್ತರ ಪ್ರದೇಶದ ಸರ್ಕಾರಕ್ಕೆ ಆದೇಶಿಸಿದೆ.
ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅವಕಾಶ ನೀಡಿದ ಆದೇಶವನ್ನು ಪ್ರಶ್ನಿಸಿ ಮುಸ್ಲಿಮರ ಪರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ಉಚ್ಛ ನ್ಯಾಯಾಲಯವು ನಡೆಸಿತು. ಈ ವೇಳೆ, ಜ್ಞಾನವಾಪಿ ಸಂಕೀರ್ಣವನ್ನು ಸಂರಕ್ಷಿಸುವಂತೆ ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ಅಲ್ಲಿ ಯಾವುದೇ ಹಾನಿ ಅಥವಾ ನಿರ್ಮಾಣ ಮಾಡಬಾರದು ಎಂದು ತಾಕೀತು ಮಾಡಿದೆ. ಆದರೆ, ನೆಲಮಾಳಿಗೆಯಲ್ಲಿ ಪೂಜೆಗೆ ಯಾವುದೇ ತಡೆಯನ್ನು ನೀಡಿಲ್ಲ. ಮುಂದಿನ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿದೆ.
ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಬುಧವಾರ ವಾರಣಾಸಿ ನ್ಯಾಯಾಲಯವು ಅನುಮತಿ ನೀಡಿತ್ತು. ಆದೇಶದ ಪ್ರಕಾರ, ಮಸೀದಿಯೊಳಗಿನ ನಿರ್ಬಂಧಿತ ಪ್ರದೇಶವಾದ 'ವ್ಯಾಸ್ಜಿ ತೆಹ್ಖಾನಾ'ದಲ್ಲಿ ಹಿಂದೂ ಭಕ್ತರು ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಅಲ್ಲದೇ, ಪೂಜೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು. ಇದಾದ ಬಳಿಕ ಗುರುವಾರ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲಾಗಿತ್ತು.
ಮತ್ತೊಂದೆಡೆ, ಹಿಂದೂ ಧಾರ್ಮಿಕ ಆಚರಣೆಗಳನ್ನು ನಡೆಸಲು ಹಿಂದೂಗಳು ಐದು ಬಾರಿ ಆರತಿಗಳನ್ನು ಸಲ್ಲಿಸುವ ಬಗ್ಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರ ಪ್ರಕಾರ, ನೆಲಮಾಳಿಗೆಯಲ್ಲಿ ಪ್ರತಿದಿನವೂ ವಿಶೇಷ ಪೂಜೆ ಜರುಗಲಿದೆ. ಈ ಕುರಿತು ವಕೀಲ ವಿಷ್ಣು ಶಂಕರ್ ಜೈನ್, ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮಸೀದಿ ಸಂಕೀರ್ಣದಲ್ಲಿ ಪೂಜೆ ಅವಕಾಶ ನೀಡಿದ ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ. ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅದರಲ್ಲೂ, ಇಂದು ಶುಕ್ರವಾರವಾಗಿದ್ದು, ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇದರ ಹಿನ್ನೆಲೆಯಲ್ಲಿ ಮೂರು ಜಿಲ್ಲೆಗಳಿಂದ ಹೆಚ್ಚುವರಿ ಭದ್ರತಾ ಪಡೆಗಳನ್ನು ಕರೆಸಲಾಗಿದೆ.
ಅಲ್ಲದೇ, ಇಡೀ ಪ್ರದೇಶದಲ್ಲಿ ಡ್ರೋನ್‌ಗಳ ಮೂಲಕ ನಿಗಾ ವಹಿಸಲಾಗಿದೆ. ಮುಸ್ಲಿಮರ ಪ್ರಾಬಲ್ಯವಿರುವ ಪ್ರದೇಶಗಳು ಮತ್ತು ಪ್ರಮುಖ ಮಸೀದಿಗಳ ಸುತ್ತಲೂ ವಿಶೇಷ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಗುರುವಾರ ರಾತ್ರಿ ಮುಸ್ಲಿಂ ಸಮುದಾಯದ ಪ್ರತಿನಿಧಿಗಳೊಂದಿಗೆ ಪೊಲೀಸರು ಸಭೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅಶೋಕ್ ಜೈನ್ ತಿಳಿಸಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಸಂಕೀರ್ಣದಲ್ಲಿರುವ ಮೂರ್ತಿಗಳಿಗೆ ಪ್ರತಿನಿತ್ಯ 5 ಬಾರಿ ಆರತಿ: ವೇಳಾಪಟ್ಟಿ ಪ್ರಕಟ