ನವದೆಹಲಿ: ದೇಶದ 41 ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಹಾಕಿದ ಘಟನೆ ಮಂಗಳವಾರ ನಡೆದಿದೆ. ಇದರಿಂದ ಕೆಲವೆಡೆ ವಿಮಾನಗಳ ಹಾರಾಟ ವಿಳಂಬವಾಗಿದೆ. ಎಲ್ಲ ವಿಮಾನಗಳ ತಪಾಸಣೆಯ ಬಳಿಕ ಇದೊಂದು ಹುಸಿ ಬೆದರಿಕೆ ಎಂದು ಗೊತ್ತಾಗಿದೆ. ಬಳಿಕ ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ವಾರಾಣಸಿ, ಚೆನ್ನೈ, ಪಾಟ್ನಾ ಮತ್ತು ಜೈಪುರ ಸೇರಿದಂತೆ ನಲವತ್ತೊಂದು ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಹಾಕಿದ ಇಮೇಲ್‌ಗಳನ್ನು ಆಯಾ ವಿಮಾನ ನಿಲ್ದಾಣದ ಕಂಟ್ರೋಲ್ ರೂಮ್ಗೆ ಕಳುಹಿಸಲಾಗಿದೆ. ಇದರಿಂದ ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಗಂಟೆಗಟ್ಟಲೆ ಶೋಧ ಕಾರ್ಯಾಚರಣೆ ನಡೆಸಿದರು. ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
exhumedyou888@gmail.com ಇಮೇಲ್ ಐಡಿಯಿಂದ ಮಧ್ಯಾಹ್ನ 12.40 ರ ಸುಮಾರಿಗೆ ಸಂದೇಶ ರವಾನಿಸಲಾಗಿದೆ. ಇದರಲ್ಲಿ ಹಲೋ, ವಿಮಾನ ನಿಲ್ದಾಣದಲ್ಲಿ ಸ್ಫೋಟಕಗಳನ್ನು ಇಡಲಾಗಿದೆ. ಬಾಂಬ್‌ಗಳು ಶೀಘ್ರದಲ್ಲೇ ಸ್ಫೋಟಗೊಳ್ಳುತ್ತವೆ. ನೀವೆಲ್ಲರೂ ಸಾಯುತ್ತೀರಿ ಎಂದು ಬರೆಯಲಾಗಿತ್ತು. ಈ ಸಂದೇಶವುಳ್ಳ ಇಮೇಲ್ ಎಲ್ಲ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ.
ಕೆಎನ್ಆರ್ ಗುಂಪಿನಿಂದ ಬೆದರಿಕೆ: ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮೊದಲ ಬಾರಿಗೆ ವಾರಾಣಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭೇಟಿ ನೀಡಿದ್ದರು. ಇದರ ಬೆನ್ನಲ್ಲೆ, ಬಾಂಬ್ ಸ್ಫೋಟ ಬೆದರಿಕೆ ಹಾಕಲಾಗಿತ್ತು. "KNR" ಎಂಬ ಆನ್‌ಲೈನ್ ಗುಂಪು ಈ ಹುಸಿ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದೇ ಗುಂಪು ಮೇ 1 ರಂದು ದೆಹಲಿಯ ಹಲವಾರು ಶಾಲೆಗಳಿಗೆ ಇಮೇಲ್ ಮಾಡಿ ಸ್ಫೋಟದ ಬೆದರಿಕೆ ಹಾಕಿತ್ತು.
ಚೆನ್ನೈ ವಿಮಾನ ವಿಳಂಬ: ತಮಿಳುನಾಡಿನ ಚೆನ್ನೈ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಇಡೀ ನಿಲ್ದಾಣವನ್ನು ಸ್ಫೋಟ ಪತ್ತೆ ದಳ ತಪಾಸಣೆ ನಡೆಸಿತು. ಇದರಿಂದ ದುಬೈಗೆ ಹೊರಟಿದ್ದ 286 ಪ್ರಯಾಣಿಕರಿದ್ದ ವಿಮಾನ ವಿಳಂಬವಾಗಿ ಹಾರಾಟ ಕಂಡಿತು. ಶೋಧದ ಬಳಿಕ ಯಾವುದೇ ಸ್ಫೋಟ ವಸ್ತುಗಳು ಸಿಗದ ಹಿನ್ನೆಲೆ ಅಧಿಕಾರಿಗಳು ಅನುಮತಿ ನೀಡಿದ ಬಳಿಕ ವಿಮಾನ ದುಬೈನತ್ತ ಹಾರಿತು.
ಇದೇ ರೀತಿ ರಾಜಸ್ಥಾನದ ಜೈಪುರ, ಮಹಾರಾಷ್ಟ್ರ ಮುಂಬೈ, ಬಿಹಾರದ ಪಾಟ್ನಾ, ಉತ್ತಪ್ರದೇಶದ ವಾರಾಣಸಿ ಸೇರಿ 41 ವಿಮಾನ ನಿಲ್ದಾಣಗಳಿಗೆ ಒಂದೇ ಬಾಂಬ್ ಸ್ಫೋಟದ ಇಮೇಲ್ ರವಾನೆ ಮಾಡಲಾಗಿದೆ. ಭದ್ರತಾ ಏಜೆನ್ಸಿಗಳು ವಿಮಾನಗಳ ಸಂಪೂರ್ಣ ಶೋಧನೆ ನಡೆಸಿವೆ.
ಪಾಟ್ನಾ ವಿಮಾನ ನಿಲ್ದಾಣದ ನಿರ್ದೇಶಕ ಅಂಚಲ್ ಪ್ರಕಾಶ್ ಮಾತನಾಡಿ, "ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಇತರ 41 ವಿಮಾನ ನಿಲ್ದಾಣಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಬಳಿಕ ತಪಾಸಣೆ ನಡೆಸಲಾಗಿದ್ದು, ಇದು ಹುಸಿ ಬೆದರಿಕೆ ಎಂದು ತಿಳಿದುಬಂದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಇಮೇಲ್; 13 ವರ್ಷದ ಬಾಲಕ ವಶಕ್ಕೆ! - Delhi Airport Bomb Scare