ನವದೆಹಲಿ: ವಿವಾದಗಳಿಂದ ಹೆಚ್ಚು ಚಾಲ್ತಿಯಲ್ಲಿರುವ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಸಂಸತ್ತಿನಲ್ಲಿ ಇಂದು ಹೊಸ ವಿವಾದ ಸೃಷ್ಟಿಸಿದರು. ನೂತನ ಸಂಸದನಾಗಿ ಪ್ರಮಾಣವಚನ ಕೈಗೊಳ್ಳುವಾಗ ಓವೈಸಿ, 'ಜೈ ಪ್ಯಾಲೆಸ್ಟೈನ್' ಎಂದು ಘೋಷಣೆ ಕೂಗಿದರು. ಇದು ಕೆಲಕಾಲ ಗದ್ದಲಕ್ಕೆ ಕಾರಣವಾಯಿತು.
ತೆಲಂಗಾಣದ ಹೈದರಾಬಾದ್ ಲೋಕಸಭೆ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಯಾಗಿರುವ ಅಸಾದುದ್ದೀನ್ ಓವೈಸಿ ಮಂಗಳವಾರ ಉರ್ದುವಿನಲ್ಲಿ ಪ್ರಮಾಣ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರಕ್ಕೂ ಮೊದಲು ಪ್ರಾರ್ಥನೆ ಸಲ್ಲಿಸಿದರು. ಅಲ್ಲಾಹು ಅಕ್ಬರ್ ಹೆಸರಿನಲ್ಲಿ ಪ್ರಮಾಣ ಮಾಡಿದ ಅವರು, ಕೊನೆಗೆ ಜೈ ಭೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ಟೈನ್ ಎಂದರು. ಇದರ ಜೊತೆಗೆ ಅವರ ಪಕ್ಷವಾದ ಎಂಐಎಎಂ (ಮಿಮ್) ಬಗ್ಗೆಯೂ ಪ್ರಸ್ತಾಪಿಸಿದರು.
#WATCH | AIMIM president and MP Asaduddin Owaisi takes oath as a member of the 18th Lok Sabha; concludes his oath with the words, " jai bhim, jai meem, jai telangana, jai palestine" pic.twitter.com/ewZawXlaOB
— ANI (@ANI) June 25, 2024
ಪ್ಯಾಲೆಸ್ಟೈನ್ ಘೋಷಣೆಗೆ ಆಕ್ಷೇಪ: ಪಶ್ಚಿಮ ಏಷ್ಯಾದ ರಾಷ್ಟ್ರಗಳಾದ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಯುದ್ಧ ನಡೆಯುತ್ತಿದೆ. ಸಾವಿರಾರು ಜನರ ಪ್ರಾಣಾಹುತಿಗೂ ಕಾರಣವಾಗಿದೆ. ಇದನ್ನೇ ಸಂಸದ ಓವೈಸಿ ಭಾರತದ ಸಂಸತ್ತಿನಲ್ಲಿ ಪ್ರಸ್ತಾಪಿಸಿ ಪ್ಯಾಲೆಸ್ಟೈನ್ ಪರ ಘೋಷಣೆ ಕೂಗಿದ್ದು, ಆಕ್ಷೇಪಕ್ಕೆ ಕಾರಣವಾಯಿತು. ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದವಾಯಿತು. ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದ ರಾಧಾ ಮೋಹನ್ ಸಿಂಗ್ ಅವರು ಪ್ರಮಾಣ ವಚನದ ಹೊರತಾಗಿ ಯಾವುದೇ ಘೋಷಣೆಗಳನ್ನು ಕೂಗದಂತೆ ಸೂಚಿಸಿದರು.
ಹಂಗಾಮಿ ಸ್ಪೀಕರ್ ಭರ್ತೃಹರಿ ಮತಬ್ ಅವರು ಸ್ಪೀಕರ್ ಸ್ಥಾನಕ್ಕೆ ಮರಳಿದ ಬಳಿಕ, ಓವೈಸಿ ಅವರ ಪ್ಯಾಲೆಸ್ಟೈನ್ ಘೋಷಣೆಯನ್ನು ಕಡತದಿಂದ ತೆಗೆದು ಹಾಕುವಂತೆ ಸೂಚಿಸಿದರು. ಸದಸ್ಯರು ಪ್ರಮಾಣವಚನ ಮಾತ್ರ ಸ್ವೀಕರಿಸಬೇಕು. ಇದನ್ನು ಮಾತ್ರ ದಾಖಲಿಸಲಾಗುವುದು ಎಂದು ತಿಳಿಸಿದರು.
ಘೋಷಣೆ ಸಮರ್ಥಿಸಿಕೊಂಡ ಓವೈಸಿ: ಪ್ರಮಾಣವಚನ ಸ್ವೀಕಾರ ಬಳಿಕ ಸಂಸತ್ತಿನ ಹೊರಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಓವೈಸಿ, ಇತರ ಸದಸ್ಯರೂ ಬೇರೆ ಬೇರೆ ಘೋಷಣೆ ಕೂಗಿದ್ದಾರೆ. ನಾನು ಜೈ ಭೀಮ್, ಜೈ ಮಿಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ಟೈನ್ ಎಂದು ಕೂಗಿದೆ. ಅದರಲ್ಲಿ ತಪ್ಪೇನಿದೆ?. ಸಂವಿಧಾನದ ಯಾವ ನಿಬಂಧನೆಯಲ್ಲಿ ಇದನ್ನು ನಿರ್ಬಂಧಿಸಲಾಗಿದೆ. ಮಹಾತ್ಮ ಗಾಂಧಿಯವರು ಪ್ಯಾಲೆಸ್ಟೈನ್ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಮೊದಲು ತಿಳಿಯಿರಿ ಎಂದರು.
#WATCH | On his words while taking the oath, AIMIM president and MP Asaduddin Owaisi says, " everyone is saying a lot of things...i just said "jai bhim, jai meem, jai telangana, jai palestine"...how it is against, show the provision in the constitution..." https://t.co/dirMZIMYtX pic.twitter.com/m6eOGYQDrZ
— ANI (@ANI) June 25, 2024
ಕಡತದಿಂದ ಪದ ತೆಗೆದುಹಾಕಿದ್ದಕ್ಕೆ ಪ್ರತಿಕ್ರಿಯಿಸಿ, ನಾನು ಹೇಳಬೇಕು ಎಂದಿದ್ದನ್ನು ಸಂಸತ್ತಿನಲ್ಲಿ ಹೇಳಿಯಾಗಿದೆ. ಅದನ್ನು ಉಳಿಸಿದರೂ, ತೆಗೆದರೂ ಅಷ್ಟೇ. ದಾಳಿಗೆ ಒಳಗಾದವರ ಪರ ಧ್ವನಿ ಎತ್ತಿದ್ದೇನೆ ಎಂದು ತಮ್ಮ ಘೋಷಣೆಯನ್ನು ಸಮರ್ಥಿಸಿಕೊಂಡರು.