ಯಾದಾದ್ರಿ ಭುವನಗಿರಿ (ತೆಲಂಗಾಣ): ಇಲ್ಲಿನ ಬೀಬಿನಗರದ ಏಮ್ಸ್ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಮಂಗನಿಗಿರುವಂತಹ ಬಾಲವನ್ನು ಹೊಂದಿದ್ದ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಬಾಲವನ್ನು ತೆಗೆದು ಹಾಕಿದ್ದಾರೆ.
ಹೌದು, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಹಿಳೆಯೊಬ್ಬರು ಬಾಲವಿದ್ದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಮೂರು ತಿಂಗಳಿರುವಾಗ ಬಾಲ 15 ಸೆಂ.ಮೀ ಬೆಳೆದಿದೆ. ಇದರಿಂದ ಆತಂಕಗೊಂಡ ಪೋಷಕರು ಬೀಬಿನಗರದ ಏಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲ ಬೆನ್ನೆಮೂಳೆಯೊಂದಿಗೆ ಕೂಡಿಕೊಂಡಿರುವುದನ್ನು ಗುರುತಿಸಿದ ವೈದ್ಯರು ಆಪರೇಷನ್ ಮಾಡಿ ಬಾಲ ಕತ್ತರಿಸಿದ್ದಾರೆ.
ಆರು ತಿಂಗಳ ಹಿಂದೆ ನಡೆದ ಆಪರೇಷನ್ ಬಳಿಕ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ. ಶಸ್ತ್ರಚಿಕಿತ್ಸೆಯ ನಂತರ ನರ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇರುತ್ತದೆ. ಆದರೆ, ಮಗು ಆರೋಗ್ಯದಿಂದ ಇರುವುದು ಅಪರೂಪ. ಜಗತ್ತಿನಲ್ಲಿ ಇದುವರೆಗೆ ಕೇವಲ 40 ಇಂತಹ ಪ್ರಕರಣಗಳನ್ನು ಮಾತ್ರ ಗುರುತಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.