ರಾಂಚಿ(ಜಾರ್ಖಂಡ್ ): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ ನಿರ್ಣಾಯಕ ಗೆಲುವು ಸಾಧಿಸಿದ ಹಿನ್ನೆಲೆ ಸಿಎಂ ಹೇಮಂತ್ ಸೊರೆನ್ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾವು ಜಾರ್ಖಂಡ್ನಲ್ಲಿ 'ಅಬುವಾ ರಾಜ್, ಅಬುವಾ ಸರ್ಕಾರ್' (ನಮ್ಮ ಆಡಳಿತ, ನಮ್ಮ ಸರ್ಕಾರ) ಮೂಲಕ ಇತಿಹಾಸ ಸೃಷ್ಟಿಸಲಿದ್ದೇವೆ" ಎಂದು ಘೋಷಿಸಿದರು.
ಇದು ಮಹತ್ವದ ಚುನಾವಣೆಯಾಗಿತ್ತು. ರಾಜ್ಯದ ಪ್ರಜಾಸತ್ತಾತ್ಮಕ ಪಯಣದಲ್ಲಿ ಇಂತಹ ಚುನಾವಣೆಯನ್ನು ಜನ ಎಂದಿಗೂ ನೋಡಿರಲಿಲ್ಲ. ನಾವು ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದೇವೆ. ಜನರು ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಉತ್ಸಾಹದಿಂದ ಸ್ವೀಕರಿಸಿದ್ದಾರೆ ಎಂದ ಸೊರೆನ್, ಪ್ರಧಾನಿ ನರೇಂದ್ರ ಮೋದಿ ಅವರ ಅಭಿನಂದನಾ ಸಂದೇಶಕ್ಕೆ ಧನ್ಯವಾದಗಳನ್ನು ತಿಳಿಸಿದರು ಮತ್ತು ಚುನಾವಣೆಯಲ್ಲಿ ಮಹಿಳೆಯರು ಮತ್ತು ಯುವಕರ ಸಕ್ರಿಯವಾಗಿ ಭಾಗವಹಿಸಿದ್ದನ್ನು ಶ್ಲಾಘಿಸಿದರು.
ರಾಜ್ಯದ ಮತದಾರರ ರಾಜಕೀಯ ಪ್ರಬುದ್ಧತೆಗೆ ಶರಣು: ಈ ವೇಳೆ ಉಪಸ್ಥಿತರಿದ್ದ ಕಾಂಗ್ರೆಸ್‌ನ ಜಾರ್ಖಂಡ್ ಉಸ್ತುವಾರಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್ ಮಾತನಾಡಿ, ರಾಜ್ಯದ ಮತದಾರರ ರಾಜಕೀಯ ಪ್ರಬುದ್ಧತೆಯನ್ನು ಶ್ಲಾಘಿಸಿದರು. ಒಂದೆಡೆ, ನಮ್ಮ ಮೈತ್ರಿಕೂಟವು ಐದು ವರ್ಷಗಳ ಸಾಧನೆಗಳನ್ನು ಮತ್ತು ಭವಿಷ್ಯದ ದೃಷ್ಟಿಕೋನವನ್ನು ಮತದಾರರ ಮುಂದಿಟ್ಟರೆ, ಮತ್ತೊಂದೆಡೆ, ಪ್ರತಿಪಕ್ಷಗಳು ತಮ್ಮ ಕಾರ್ಯಸೂಚಿಯ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲು ವಿಫಲವಾಗಿವೆ ಎಂದರು.
ಮೈತ್ರಿಕೂಟದ ಅಧಿಕಾರಾವಧಿಯಲ್ಲಿ ಕೋವಿಡ್ ಒಡ್ಡಿದ ಸವಾಲುಗಳ ಬಗ್ಗೆ ಮಾತನಾಡಿ, ಜನರ ಸೇವೆಗಾಗಿ ಸರ್ಕಾರ ಮಾಡಿದ ಪ್ರಯತ್ನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಮಹಿಳೆಯರ ಬೆಂಬಲವೂ ಈ ಗೆಲುವಿಗೆ ಕಾರಣವಾಗಿದೆ ಎಂದು ಹೇಳಿದರು.
ಜನರು ದ್ವೇಷವನ್ನು ಸೋಲಿಸಿದ್ದಾರೆ: ಆರ್ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ನಾರಾಯಣ್ ಯಾದವ್ ಮಾತನಾಡಿ, ಇದು ರಾಜ್ಯಕ್ಕೆ "ಐತಿಹಾಸಿಕ ದಿನ" ಎಂದು ಬಣ್ಣಿಸಿದರು. ಜನರು ದ್ವೇಷವನ್ನು ಸೋಲಿಸಿದ್ದಾರೆ ಮತ್ತು ಇಂಡಿಯಾ ಮೈತ್ರಿಕೂಟದ ಮೇಲೆ ನಂಬಿಕೆ ಇಟ್ಟಿದ್ದಾರೆ. ಈ ಗೆಲುವು ಸಮಾಜದ ಪ್ರತಿಯೊಂದು ವರ್ಗದ ಆಶೀರ್ವಾದವನ್ನು ಪ್ರತಿಬಿಂಬಿಸುತ್ತದೆ ಎಂದರು.
56 ಕ್ಷೇತ್ರಗಳಲ್ಲಿ ಗೆಲುವು: ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಸದ್ಯ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ 56 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಹೇಮಂತ್- ಕಲ್ಪನಾ ’ಭಲೇ ಜೋಡಿ’ಯ ಕಮಾಲ್: ಜಾರ್ಖಂಡ್ನಲ್ಲಿ 2ನೇ ಬಾರಿಗೆ ಅಧಿಕಾರ ಹಿಡಿದ ಜೆಎಂಎಂ, ಬಂಧನವೇ ವರವಾಯ್ತಾ?