ತಿರುಮಲ: ವಿಶ್ವವಿಖ್ಯಾತ ತಿರುಮಲ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಕೆ ಮಾಡಲಾಗಿದೆ ಎಂಬ ಆರೋಪ ಕೋಟ್ಯಂತರ ಭಕ್ತರ ಶ್ರದ್ಧೆಗೆ ಧಕ್ಕೆ ತಂದಿದೆ. ಹಿಂದಿನ ವೈಎಸ್ಆರ್ಸಿಪಿ ಸರ್ಕಾರ ಕಡಿಮೆ ದರಕ್ಕೆ ಕಲಬೆರಕೆ ತುಪ್ಪವನ್ನು ಲಡ್ಡು ತಯಾರಿಗೆ ಬಳಸಿದ್ದು, ಪ್ರಯೋಗಾಲಯ ವರದಿಯಲ್ಲಿ ದೃಢಪಟ್ಟಿದೆ.
ಆದರೆ, ಈ ಆರೋಪವನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯ ಮಾಜಿ ಕಾರ್ಯನಿರ್ವಹಣಾಧಿಕಾರಿ, ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ ಕುಟುಂಬಸ್ಥರೂ ಆಗಿರುವ ವೈವಿ ಸುಬ್ಬಾರೆಡ್ಡಿ ಅಲ್ಲಗಳೆದಿದ್ದಾರೆ. ಭಕ್ತರ ನೆರವಿನಿಂದ ರಾಜಸ್ಥಾನದಿಂದ ಶುದ್ಧ ಹಸುವಿನ ತುಪ್ಪವನ್ನು ಖರೀದಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಶುದ್ಧ ಹಸುವಿನ ತುಪ್ಪ ₹320ಗೆ ಸಿಗುವುದೇ?: ಹಿಂದಿನ ಸರ್ಕಾರದ ಆಡಳಿತಾವಧಿಯಲ್ಲಿ ತಿಮ್ಮಪ್ಪನ ಪ್ರಸಾದಕ್ಕೆ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎಂಬ ಆರೋಪ ಕೇಳಿಬಂದ ನಂತರ, ಟಿಟಿಡಿ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ, ಜಗನ್ ಕುಟುಂಬಸ್ಥರಾದ ವೈವಿ ಸುಬ್ಬಾರೆಡ್ಡಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ರಾಜಸ್ಥಾನದ ಫತೇಪುರದಿಂದ ದಾನಿಗಳ ನೆರವಿನಿಂದ ದಿನಕ್ಕೆ 60 ಕೆಜಿ ಶುದ್ಧ ದೇಸಿ ಹಸುವಿನ ತುಪ್ಪವನ್ನು ಖರೀದಿಸಲಾಗಿದೆ. ಈ ಶುದ್ಧ ತುಪ್ಪಕ್ಕೆ ಕೆಜಿಗೆ 1,667 ರೂಪಾಯಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಆದರೆ, ಟಿಟಿಡಿ ಪ್ರಕಾರ, ಲಡ್ಡು ತಯಾರಿಸಲು ಪ್ರತಿ ಕೆಜಿ ತುಪ್ಪಕ್ಕೆ 320 ರೂಪಾಯಿ ನೀಡಲಾಗಿದೆ ಎಂದು ತಿಳಿಸಿದೆ. ಹಾಗಾದರೆ, 1,667 ರೂಪಾಯಿ ನೀಡಿ ತುಪ್ಪ ಖರೀದಿಸಲಾಗಿದೆ ಎಂಬ ಸುಬ್ಬಾರೆಡ್ಡಿ ಅವರ ಹೇಳಿಕೆಯೇ ಸುಳ್ಳಾಗಿದೆ. ಕೆಜಿ ತುಪ್ಪ ತಯಾರಿಕೆಗೆ 17-18 ಲೀಟರ್ ಹಾಲು ಬೇಕಾಗುತ್ತದೆ. ಲೀಟರ್ಗೆ 40 ರೂಪಾಯಿ ಇದೆ. ಹೀಗಿದ್ದಾಗ, 320 ರೂಪಾಯಿಗೆ ಶುದ್ಧ ಹಸುವಿನ ತುಪ್ಪ ಯಾವ ಕಂಪನಿಯೂ ಸರಬರಾಜು ಮಾಡುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಿರುಪತಿ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಕೆ ಮಾಡಲಾಗಿದೆ ಎಂಬುದು ಈ ಮೂಲಕ ವಿಧಿತವಾಗಿದೆ. ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿನ ಕಂಪನಿಗಳು ಸಾರಿಗೆ ವೆಚ್ಚವನ್ನೂ ಪಡೆಯದೆ ಒಂದು ಕಿಲೋ ತುಪ್ಪಕ್ಕೆ 320 ರೂಪಾಯಿಗೆ ಪೂರೈಸಲು ಹೇಗೆ ಸಾಧ್ಯ?. ಕಡಿಮೆ ಬೆಲೆಗೆ ಸಿಕ್ಕ ತುಪ್ಪವು ಕಲಬೆರಕೆಯಾಗಿದೆ ಎಂದು ಸಾಮಾನ್ಯ ಜನರು ಸಹ ಅರ್ಥಮಾಡಿಕೊಳ್ಳಬಹುದು. ಆದರೆ, ಹಿಂದಿನ ಸರ್ಕಾರ ಮತ್ತು ಆಡಳಿತ ಮಂಡಳಿಗೆ ಇದು ತಿಳಿದಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.
ಕರ್ನಾಟಕದಿಂದ ತುಪ್ಪ ಪೂರೈಕೆ: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತೆ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡಲು ಆಂಧ್ರಪ್ರದೇಶ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಹಿಂದಿನ ಸರ್ಕಾರ ನಂದಿನಿ ಬ್ರಾಂಡ್ ಹೆಸರಿನ ಶುದ್ಧ ತುಪ್ಪವನ್ನು ಬೆಲೆ ದುಬಾರಿ ಎಂದು ನಿರಾಕರಿಸಿತ್ತು. ಕಳೆದ 50 ವರ್ಷಗಳಿಂದ ಟಿಟಿಡಿಗೆ ಕೆಎಂಎಫ್ನಿಂದಲೇ ತುಪ್ಪ ಸರಬರಾಜಾಗುತ್ತಿತ್ತು. ಮಾಜಿ ಸಿಎಂ ಜಗನ್ ಸರ್ಕಾರ ಕಡಿಮೆ ದರಕ್ಕೆ ಟೆಂಡರ್ ಪಡೆದ ಬೇರೊಂದು ಕಂಪನಿಗೆ ತುಪ್ಪ ಪೂರೈಕೆಗೆ ಅವಕಾಶ ನೀಡಿತ್ತು.
ಇದನ್ನೂ ಓದಿ: ನಮ್ಮ ಕಂಪನಿ ತುಪ್ಪದಲ್ಲಿ ಯಾವುದೇ ದೋಷವಿಲ್ಲ; ತಪಾಸಣೆಗೆ ಸಿದ್ಧವೆಂದ ಎಆರ್ ಡೈರಿ ಫುಡ್ - Tirumala Laddus Row