ನವದೆಹಲಿ: ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಎಎಪಿ ನಾಯಕಿ ಆತಿಶಿ ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿ ಖಾಲಿ ಕುರ್ಚಿ ಇಟ್ಟುಕೊಳ್ಳುವ ಮೂಲಕ ಅರವಿಂದ್ ಕೇಜ್ರಿವಾಲ್ ಅವರೊಂದಿಗಿನ ಭಾವನಾತ್ಮಕ ಸಂಬಂಧವನ್ನು ಅವರು ಪ್ರದರ್ಶಿಸಿದರು.
ರಾಮಾಯಣದ ಸಾಂಕೇತಿಕತೆಯನ್ನು ಪ್ರತಿಧ್ವನಿಸುತ್ತಾ, "ನಾನಿಂದು ಭರತ ಹೊತ್ತ ಹೊರೆಯನ್ನೇ ಹೊತ್ತಿದ್ದೇನೆ. ಆತ ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿರಿಸಿ ರಾಜ್ಯಭಾರ ನಡೆಸಿದಂತೆಯೇ, ಮುಂದಿನ ನಾಲ್ಕು ತಿಂಗಳ ಕಾಲ ನಾನು ಅದೇ ಸ್ಫೂರ್ತಿಯಲ್ಲಿ ದೆಹಲಿಯಲ್ಲಿ ಆಡಳಿತ ನಡೆಸುತ್ತೇನೆ" ಎಂದರು.
ತಮ್ಮ ಪಕ್ಕದಲ್ಲಿದ್ದ ಖಾಲಿ ಕುರ್ಚಿಯನ್ನು ತೋರಿಸುತ್ತಾ, "ಅರವಿಂದ್ ಕೇಜ್ರಿವಾಲ್ ಮತ್ತೆ ಅಧಿಕಾರಕ್ಕೆ ಬರುವವರೆಗೂ ಇದು ಖಾಲಿಯಾಗಿಯೇ ಇರುತ್ತದೆ" ಎಂದರು.
#WATCH | Delhi CM Atishi says, " i have taken charge as the delhi chief minister. today my pain is the same as that was of bharat when lord ram went to exile for 14 years and bharat had to take charge. like bharat kept the sandals of lord ram for 14 years and assumed charge,… https://t.co/VZvbwQY0hX pic.twitter.com/ZpNrFEOcaV
— ANI (@ANI) September 23, 2024
"ನಾನು ದೆಹಲಿ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದೇನೆ. ಶ್ರೀರಾಮ 14 ವರ್ಷಗಳ ಕಾಲ ವನವಾಸಕ್ಕೆ ಹೋದಾಗ ಆತನ ಸಹೋದರ ಭರತನಿಗಿದ್ದ ನೋವು ಇಂದು ನನ್ನದಾಗಿದೆ. ಕೇಜ್ರಿವಾಲ್ ಅಧಿಕಾರದಿಂದ ಕೆಳಗಿಳಿಯುವ ಮೂಲಕ ರಾಜಕೀಯದಲ್ಲಿ ನಮಗೆ ಘನತೆಯ ಉದಾಹರಣೆಯಾಗಿದ್ದಾರೆ" ಎಂದು ಶ್ಲಾಘಿಸಿದರು.
"ಅರವಿಂದ್ ಕೇಜ್ರಿವಾಲ್ ಅವರ ಇಮೇಜ್ ಹಾಳುಮಾಡಲೆಂದೇ ಕೇಂದ್ರ ಬಿಜೆಪಿ ಇನ್ನಿಲ್ಲದ ಸುಳ್ಳು ಪ್ರಕರಣಗಳನ್ನು ಹೊರಿಸಿ ಅವರನ್ನು ಬಂಧಿಸಿ ಆರು ತಿಂಗಳ ಕಾಲ ಜೈಲಿನಲ್ಲಿರಿಸಿತು. ಬಹಳ ಯಾತನೆ ಅನುಭವಿಸಬೇಕಾಯಿತು. ಇದೆಲ್ಲವೂ ತೆರೆದಿಟ್ಟ ಪುಸ್ತಕ" ಎಂದು ದೂರಿದರು.
"ದೆಹಲಿಯ ಸಾರ್ವಜನಿಕರು ನಂಬಿಕೆ ಇಡುವವರೆಗೂ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಜನರು ಮತ್ತೆ ಅವರನ್ನು ಸಿಎಂ ಆಗಿ ಚುನಾಯಿಸುತ್ತಾರೆ ಎಂಬ ನಂಬಿಕೆ ನನಗಿದೆ" ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆತಿಶಿ ತಮ್ಮ ಐವರು ಸಚಿವರೊಂದಿಗೆ ಶನಿವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಸಿಎಂ ಆಗುವ ಮುನ್ನ ಆತಿಶಿ ಅವರು ಕೇಜ್ರಿವಾಲ್ ನೇತೃತ್ವದ ಸರ್ಕಾರದಲ್ಲಿ ಅತಿ ಹೆಚ್ಚು ಖಾತೆಗಳನ್ನು ಹೊಂದಿದ್ದ ಸಚಿವೆಯಾಗಿದ್ದರು. ಸದ್ಯ ಅವರ ಬಳಿ ಹಣಕಾಸು, ಕಂದಾಯ, ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಉನ್ನತ ಶಿಕ್ಷಣ, ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಮತ್ತು ಭಾಷೆ, ಲೋಕೋಪಯೋಗಿ ಇಲಾಖೆ, ವಿದ್ಯುತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸೇವೆ ಮತ್ತು ಜಾಗೃತ ಇಲಾಖೆಗಳಂತ ಹಲವು ಖಾತೆಗಳಿವೆ.
ದೆಹಲಿ ವಿಧಾನಸಭೆ ಅಧಿವೇಶನ ಸೆ.26 ಮತ್ತು 27ರಂದು ನಡೆಯಲಿದೆ.
ಇದನ್ನೂ ಓದಿ: ದೆಹಲಿ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ಸ್ವೀಕಾರ: ಮೂರನೇ 'ಮಹಿಳಾ ಸಿಎಂ' ಅಭಿದಾನ - Atishi takes oath