ಹೈದರಾಬಾದ್: 10 ವರ್ಷಗಳ ಹಿಂದೆ ಪೋಷಕರಿಂದ ದೂರವಾದ ಮೂವರು ಮಕ್ಕಳು, ಆಧಾರ್ ನೋಂದಣಿ ಆಗಿದ್ದರಿಂದ ಮತ್ತೆ ಹೆತ್ತವರ ಮಡಿಲು ಸೇರುವಂತಾಗಿದೆ. ಸಣ್ಣವರಾಗಿದ್ದಾಗ ಪೋಷಕರು ಮಾಡಿಸಿದ ಆಧಾರ್ ನೆರವಿನಿಂದಾಗಿ ಇದೀಗ ಪೋಷಕರಿಂದ ದೂರವಾಗಿ ಅನಾಥಶ್ರಮ ಸೇರಿದ್ದ ಮಕ್ಕಳು ಮತ್ತೆ ತಂದೆ - ತಾಯಿಯ ಮಡಿಲು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
ಗುಂಟೂರು ಜಿಲ್ಲೆಯ ಕೊಟ್ಟಪ್ಪಕೊಂಡ ಶ್ರಿನು ಮತ್ತು ನಾಗೇಂದ್ರ ದಂಪತಿಯ ಮಕ್ಕಳು 10 ವರ್ಷದ ಹಿಂದೆ ನಾಪತ್ತೆಯಾಗಿದ್ದರು. ಕೊಟ್ಟಪ್ಪಕೊಂಡುವಿನಿಂದ ಹೈದರಾಬಾದ್‌ನ ಎಲ್ಬಿ ನಗರ ಪ್ರದೇಶಕ್ಕೆ ವಲಸೆ ಬಂದ ಈ ದಂಪತಿ ಕೂದಲು ವ್ಯಾಪಾರ ಮಾಡುತ್ತಿದ್ದರು. ಅವರ ಮಕ್ಕಳಾದ 12 ವರ್ಷದ ರಾಜು ಮತ್ತು 10 ವರ್ಷದ ಇಮ್ಯಾನುಯಲ್ ಮನೆಯಿಂದ ತಪ್ಪಿಸಿಕೊಂಡಿದ್ದರು.
ಮತ್ತೊಂದು ಪ್ರಕರಣದಲ್ಲಿ 2015ರಲ್ಲಿ ಮೆದಕ್ ಜಿಲ್ಲೆಯ ಶಿವ್ವಮ್ಪೇಟೆ ಮಂಡಲ್ನ ಮಗ್ಧುಂಪುರ್ ಬೆಥಾನಿ ಅನಾಥಶ್ರಮಕ್ಕೆ ವೆಂಕಟೇಶ್ ಎಂಬ 12 ವರ್ಷದ ಬಾಲಕನನ್ನು ಬಾಲಕರ ಕಲ್ಯಾಣ ಸಮಿತಿ ಸದಸ್ಯರು ಮತ್ತು ಹೈದರಾಬಾದ್ ಪೊಲೀಸರ ಸಹಾಯದಿಂದ ದಾಖಲಿಸಿದ್ದರು. ವೆಂಕಟೇಶ್ ಎಂಬ ಈ ಬಾಲಕ ಕರೀಂನಗರ ಜಿಲ್ಲೆಯ ಢಮ್ಮೈಪೇಟ್ನ ಲಕ್ಷ್ಮೀ ಮತ್ತು ಮಲ್ಲಯ್ಯ ಅವರ ದೊಡ್ಡ ಮಗನಾಗಿದ್ದಾನೆ. 12 ವರ್ಷದವನಿದ್ದಾಗ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಈತನ ಕೈ ಮುರಿದಿದ್ದು, ಈತನಿಗೆ ವೆಮುಲವಾಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಈ ಮೂವರಿಗೂ ಆಧಾರ್ ಇಲ್ಲದಿರುವ ಕುರಿತು ಆಶ್ರಮದ ಆಡಳಿತಾಧಿಕಾರಿ ನರಸಾಪುರ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಅವರ ಗಮನಕ್ಕೆ ತಂದಿದ್ದರು. ಈ ಸಂಬಂಧ ತಹಸೀಲ್ದಾರ್ ಶ್ರೀನಿವಾಸಚಾರಿ ಹಾಗೂ ಎಂಪಿಡಿಒ ನಾಗೇಶ್ವರ್ ಅವರಿಗೆ ಇದೇ 19ರಂದು ಹೈದರಾಬಾದ್‌ನ ಮಾದಾಪುರ ಶಾಶ್ವತ ಆಧಾರ್ ಕೇಂದ್ರದಲ್ಲಿ ನೋಂದಣಿ ಮಾಡುವಂತೆ ನ್ಯಾಯಾಧೀಶರು ಆದೇಶಿಸಿದ್ದರು.
ಅಧಿಕಾರಿಗಳು ಇವರಿಗೆ ಆಧಾರ್ ನೋಂದಣಿ ಮಾಡಿಸುವಾಗ ಈಗಾಗಲೇ ಆಧಾರ್ ನೋಂದಣಿ ಆಗಿರುವ ವಿಚಾರ ಬೆಳಕಿಗೆ ಬಂದಿತ್ತು. ಇದರ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಈ ವಿಚಾರ ಕುರಿತು ಅವರ ಪೋಷಕರಿಗೆ ಮಾಹಿತಿ ಕೂಡಾ ನೀಡಿದ್ದರು. ಮಕ್ಕಳ ಸುಳಿವು ಸಿಕ್ಕ ಪೋಷಕರು, ಮಾಹಿತಿ ನೀಡಿದವರ ಬಳಿ ಬಂದು ಕಳೆದುಕೊಂಡು ಮಕ್ಕಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ, ಅಧಾಪುರ ಆಧಾರ್ ಕೇಂದ್ರದ ಪ್ರಾದೇಶಿಕ ವ್ಯವಸ್ಥಾಪಕಿ ಭವಾನಿ ಪ್ರಸಾದ್, ಆಶ್ರಮದ ಫಾದರ್ ಸಾಜಿ ವರ್ಗೀಸ್, ಕ್ಯಾಂಪಸ್ ಉಸ್ತುವಾರಿ ವಿನ್ಸೆಂಟ್, ಸಮಾಜ ಸೇವಕ ವೀರಬಾಬು, ಸಿಸ್ಟರ್ ಕರ್ಮಲ್ ಉಪಸ್ಥಿತರಿದ್ದರು.
ಇದನ್ನೂ ಓದಿ: ವ್ಯಕ್ತಿ ಮೃತಪಟ್ಟ ಮೇಲೆ ಆಧಾರ್ ಕಾರ್ಡ್ ಏನಾಗುತ್ತೆ?: ಸರಂಡರ್ ಮಾಡಬೇಕಾ? ಇರುವ ಮಾರ್ಗಗಳೇನು?