ಹೈದರಾಬಾದ್: ವಿದ್ಯೆ ಎಂಬುದು ಸಮುದಾಯಕ್ಕೆ ಬೆಳಕು ನೀಡುವ ಶಕ್ತಿ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ನ ಯುವಕ. ಯುವ ಇಂಜಿನಿಯರ್ ಆದ ದೀಪಕ್ ರೆಡ್ಡಿ, ಉತ್ತಮ ಸಂಬಳ ಬರುವ ಕೆಲಸವನ್ನು ತೊರೆದು ಕೃಷಿಯಲ್ಲಿ ಹೊಸ ಆವಿಷ್ಕಾರ ಮಾಡಿ ಎಲ್ಲರಿಗೆ ಸ್ಪೂರ್ತಿಯಾಗಿದ್ದಾರೆ. ಆತನ ದೃಢತೆ ಮತ್ತು ಜಾಣ್ಮೆಯ ಪ್ರತಿಫಲವಾಗಿ ಕೃಷಿ ಯೋಗ್ಯವಲ್ಲದ ಭೂಮಿ ಇಂದು ಉತ್ತಮ ಫಸಲು ಬರುವ ಭೂಮಿಯಾಗಿ ರೂಪುಗೊಂಡಿದೆ.
ಓದು ಕೇವಲ ತನ್ನ ಬದುಕಿಗೆ ಮಾತ್ರ ಅರ್ಥಪೂರ್ಣ ಪ್ರಯೋಜನ ನೀಡಿದರೆ ಸಾಲದು. ಅದು ತನ್ನ ಸಮುದಾಯಕ್ಕೂ ಹಾಗೂ ಸುತ್ತಮುತ್ತಲಿನ ಜನರಿಗೂ ನೆರವಾಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ದೀಪಕ್ ಹೊಂದಿದ್ದ. ಇದೇ ಕಾರಣಕ್ಕೆ ಆರಾಮದಾಯಕ ಸಾಫ್ಟ್ವೇರ್ ಉದ್ಯೋಗದ ಗುರಿಯನ್ನು ಅರ್ಧಕ್ಕೆ ಬಿಟ್ಟು, ಕೃಷಿಗೆ ಯೋಗ್ಯವಲದೇ ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಭೂಮಿಯನ್ನು ಹುಲಸಾಗಿ ಮಾಡುವ ಯಂತ್ರವನ್ನು ಅವಿಷ್ಕಾರ ಮಾಡುವ ಹೊಸ ಕ್ರಾಂತಿಗೆ ಮುಂದಾದ.
ಸತತ ನಾಲ್ಕು ವರ್ಷದ ಪರಿಶ್ರಮ: ನಾಲ್ಕು ವರ್ಷಗಳ ಕಾಲ ನಡೆಸಿದ ಈ ಪ್ರಯೋಗದಲ್ಲಿ ದೀಪಕ್ ಹಲವು ಸೋಲುಗಳನ್ನು ಕಂಡರು. ಆದರೆ, ಅವರಲ್ಲಿದ್ದ ಪಟ್ಟುಬಿಡದ ಛಲ, ದೃಢ ಮನಸ್ಸು ಕಡೆಗೂ ಫಲ ನೀಡಿದೆ. ಬಂಜರು ಭೂಮಿಯನ್ನು ಹದ ಮಾಡಲು ಬೇಕಾದ ಸ್ಟೋನ್ ಕ್ರಷರ್ ಯಂತ್ರವನ್ನು ರೂಪಿಸುವ ಮೂಲಕ ಆತ ಕೃಷಿಯಲ್ಲಿ ಹೊಸ ಆವಿಷ್ಕಾರ ಮಾಡಿದ್ದಾನೆ.
ಈ ನಾವೀನ್ಯತೆ ಆವಿಷ್ಕಾರ ನಡೆಸಲು ದೀಪಕ್ ಏಕಾಂಗಿ ಪ್ರಯಾಣ ನಡೆಸಿದ್ದಾರೆ. ತಾವೇ ಆವಿಷ್ಕರಿಸಿದ ಯಂತ್ರದ ಸಹಾಯದಿಂದ ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ರೂಪಿಸಿದ್ದಾರೆ. ಈ ಹಿಂದೆ ಈ ರೀತಿಯ ಬಂಜರು ಭೂಮಿಯನ್ನು ಕೃಷಿ ಭೂಮಿಯಾಗಿ ಮಾಡಲು ಕನಿಷ್ಠ 10 ದಿನಗಳು ಬೇಕಾಗುತ್ತಿತ್ತು. ಆದರೆ, ಇದೀಗ ನಾಲ್ಕು ಗಂಟೆಗಳಲ್ಲಿ ಈ ಯುವಕ ತಯಾರಿಸಿದ ಯಂತ್ರದ ಸಹಾಯದಿಂದ ಭೂಮಿಯನ್ನು ಹದಗೊಳಿಸಬಹುದಾಗಿದೆ.
ಕೃಷಿಕರಿಗೆ ಹೊಸ ಆಶಾಕಿರಣ: ದೀಪಕ್ನ ಈ ಆವಿಷ್ಕಾರವೂ ಕೃಷಿಕರಲ್ಲಿ ಹೊಸ ಆಶಾಕಿರಣವನ್ನೇ ತಂದಿದೆ. ಬಂಜರು ಭೂಮಿಯನ್ನು ಕೃಷಿಕರು ಮರಳಿ ಪಡೆಯಲು ಮುಂದಾಗುತ್ತಿದ್ದಾರೆ. ಉತ್ತಮ ಸಾಮರ್ಥ್ಯ ಮತ್ತು ಪರಿಣಾಮಕಾರಿತ್ವದ ಈ ಯಂತ್ರವೂ ಕೇವಲ ಸಮಯವನ್ನು ಮಾತ್ರವಲ್ಲ, ಭೂಮಿ ಸಿದ್ಧಗೊಳಿಸುವಿಕೆಯ ವೆಚ್ಚವನ್ನು ಕೂಡ ಕಡಿಮೆ ಮಾಡುತ್ತದೆಯಂತೆ.
ಸದ್ಯ ಯಂತ್ರವನ್ನು ಆವಿಷ್ಕರಿಸಿರುವ ದೀಪಕ್ ಮತ್ತಷ್ಟು ದೂರದೃಷ್ಟಿ ಕೂಡಾ ಹೊಂದಿದ್ದಾರೆ. ಕೃಷಿಯಲ್ಲಿ ಎದುರಾಗುತ್ತಿರುವ ಕಾರ್ಮಿಕರ ಕೊರತೆ ನೀಗಿಸುವುದು ಮತ್ತು ಉತ್ಪಾದನೆ ಹೆಚ್ಚಿಸುವುದು ಅವರ ಮುಂದಿರುವ ಸವಾಲಾಗಿದೆ. ಇದಕ್ಕಾಗಿ ಈಗಾಗಲೇ ಅವರು ಯೋಜನೆ ರೂಪಿಸಿದ್ದು, ಇದರ ಸಂಬಂಧ ರೋಬೋಟ್ ಮೂಲಕ ಪರಿಹಾರ ಕಾಣುವ ಯೋಜನೆಯೊಂದನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಹಣ್ಣು ಕೀಳುವ ರೋಬೋಟಿಕ್ ಯಂತ್ರದ ಅಭಿವೃದ್ಧಿಯಲ್ಲಿ ತೊಡಗಿದ್ದು, ಇದು ಅವರ ಜ್ಞಾನ ಮತ್ತು ಬದ್ಧತೆಯನ್ನು ಪ್ರದರ್ಶಿಸಿದೆ.
ದೀಪಕ್ ತಮ್ಮ ಆವಿಷ್ಕಾರದ ಹಾದಿಯ ಮೂಲಕ ಅನೇಕ ಮಂದಿಗೆ ಸ್ಪೂರ್ತಿಯಾಗಿದ್ದಾರೆ. ತಮ್ಮ ಜ್ಞಾನ ಮತ್ತು ಸಮುದಾಯಕ್ಕೆ ಏನಾದರೂ ಸೇವೆ ಮಾಡಬೇಕು ಎಂಬ ಸಮರ್ಪಣೆ ದೀಪಕ್ ಯಶಸ್ಸಿಗೆ ಕಾರಣವಾಗಿದೆ. ಇವರ ಈ ಸಾಧನೆ ಕೇವಲ ವೈಯಕ್ತಿಕ ಸಾಧನೆ ಆಗಿರದೇ ಇತರರಿಗಾಗಿ ಬದುಕಬೇಕು ಎಂಬ ಅರ್ಥವನ್ನು ಹೊಂದಿದೆ.
ಇದನ್ನೂ ಓದಿ: ಲಕ್ಷ ವೇತನದ ಉದ್ಯೋಗ ತೊರೆದು ಸೀರೆ ಉದ್ಯಮದಲ್ಲಿ ಯಶಸ್ಸು; ಪೊಚಂಪಲ್ಲಿ ಸೀರೆಗೆ ಹೊಸ ಟಚ್ ನೀಡಿದ ಯುಗೇಂದರ್