ತಿರುಪುರ್ (ತಮಿಳುನಾಡು): ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸಿಕೊಂಡಷ್ಟು, ವಂಚನೆಗೂ ಬಳಕೆಯಾಗುತ್ತಿದೆ. ಈ ಆಧುನಿಕ ಕಾಲದಲ್ಲಿ ಮೋಸದ ಜಾಲ ತುಂಬ ದಿನ ಉಳಿಯುವುದಿಲ್ಲ ಎಂಬುದನ್ನ ಈ ಪ್ರಕರಣ ಸಾಬೀತು ಮಾಡುತ್ತದೆ. ತಮಿಳುನಾಡಿನ ಮಹಿಳೆಯೋರ್ವಳು 12 ಮಂದಿಯೊಂದಿಗೆ ವಿವಾಹವಾಗಿ ವಂಚಿಸಿದ್ದು, ಬೆಳಕಿಗೆ ಬಂದಿದೆ.
ಸತ್ಯ(30) ಬಂಧಿತ ಮಹಿಳಾ ಆರೋಪಿ. ಈಕೆಯ ಮೇಲೆ 12 ಕಡೆ ವಂಚನೆಯ ಆರೋಪಗಳಿವೆ. ಚಿನ್ನದ ಆಭರಣ, ಹಣವನ್ನು ಎಗರಿಸಿಕೊಂಡು ಹೋದ ಬಗ್ಗೆಯೂ ಕೇಸ್ ದಾಖಲಿಸಲಾಗಿದೆ. ಈ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ತನಿಖೆ ನಡೆಯುತ್ತಿದೆ.
ಪ್ರಕರಣದ ವಿವರ: ಈರೋಡ್ ಜಿಲ್ಲೆಯ ಕೊಡುಮಡಿಯ ನಿವಾಸಿಯಾದ ಆರೋಪಿ ಮಹಿಳೆ ಸತ್ಯ ಮ್ಯಾಟ್ರಿಮನಿಗಳಲ್ಲಿ ವಿವಾಹವಾಗದ ಯುವಕರನ್ನು ಪರಿಚಯಿಸಿಕೊಳ್ಳುತ್ತಿದ್ದರು. ಬಳಿಕ ಅವರನ್ನು ಮದುವೆಯಾಗಿ ಹಣ, ಚಿನ್ನವನ್ನು ಎಗರಿಸಿಕೊಂಡು ಹೋಗುತ್ತಿದ್ದರು. ಈಚೆಗೆ ಮಹೇಶ್ ಅರವಿಂದ್ ಎಂಬುವರನ್ನು ಜುಲೈ ಆರಂಭದಲ್ಲಿ ವಿವಾಹವಾಗಿದ್ದಾರೆ.
ಸತ್ಯಳನ್ನು ತಮಿಳ್ಚೆಲ್ವಿ ಎಂಬಾಕೆ ಮಹೇಶ್ಗೆ ಪರಿಚಯಿಸಿದ್ದಳು. ಇಬ್ಬರೂ ಭೇಟಿಯಾಗಿ ಪರಿಚಯಿಸಿಕೊಳ್ಳುವ ಮುನ್ನವೆ, ತಾಯಿಯ ಅನಾರೋಗ್ಯದ ಕಾರಣ ನೀಡಿ ಆತುರಾತುರವಾಗಿ ವಿವಾಹ ಮಾಡಿಸಿದ್ದರು. ಬಳಿಕ ಅರವಿಂದ್ ಅವರ ಮನೆಯಲ್ಲಿ ಸತ್ಯಳನ್ನು ತನ್ನ ಪತ್ನಿ ಎಂದು ಪರಿಚಯಿಸಿದ್ದ. ಅವರೂ ಕೂಡ ಒಪ್ಪಿಕೊಂಡು 12 ಸಾವಿರ ಮೌಲ್ಯದ ಚಿನ್ನದ ಆಭರಣಗಳನ್ನು ಸೊಸೆಗೆ ನೀಡಿದ್ದರು. ಕೆಲವು ದಿನಗಳ ನಂತರ ಮಹೇಶ್ ಅರವಿಂದ್, ಸತ್ಯಳ ಆಧಾರ್ ಕಾರ್ಡ್ ನೋಡಿದಾಗ ಅನುಮಾನ ಬಂದಿದೆ.
ಆಧಾರ್ ಕಾರ್ಡ್ನಲ್ಲಿತ್ತು ರಹಸ್ಯ: ಜೊತೆಗೆ ಆಕೆಯ ಚಟುವಟಿಕೆಗಳು ಕೂಡ ಶಂಕೆಗೆ ಕಾರಣವಾಗಿದ್ದವು. ಆಧಾರ್ನಲ್ಲಿ ಆತನ ಹೆಸರಿನ ಬದಲಿಗೆ ಚೆನ್ನೈ ಮೂಲದ ಮತ್ತೊಬ್ಬ ವ್ಯಕ್ತಿಯ ಹೆಸರು ಕಂಡು ಬಂದಿತ್ತು. ಆಕೆಯ ವಯಸ್ಸು ಕೂಡ ಹೆಚ್ಚಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಅಚ್ಚರಿಗೆ ಒಳಗಾದ ಆ ಮಹೇಶ್ ಅರವಿಂದ್ ಈ ಬಗ್ಗೆ ಸತ್ಯಳನ್ನು ಪ್ರಶ್ನಿಸಿದ್ದಾನೆ. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇಂತಹ ಹಲವು ಕೃತ್ಯಗಳನ್ನು ನಡೆಸಿದ್ದ ಸತ್ಯ, ಮಹೇಶ್ ಅರವಿಂದ್ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ.
ಇದರಿಂದ ಎಚ್ಚೆತ್ತುಕೊಂಡ ಮಹೇಶ್ ಅರವಿಂದ್ ಆಕೆಯನ್ನು ಸಮಾಧಾನಪಡಿಸಿ, ತಕ್ಷಣವೇ ಸ್ಥಳೀಯ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ಸತ್ಯಳ ವಿರುದ್ಧ ತನಿಖೆ ಆರಂಭಿಸಿದಾಗ, ಕಳೆದ ವಾರ ಆಕೆ ಅಲ್ಲಿಂದ ಪರಾರಿಯಾಗಿದ್ದಳು.
ಸಾಲು ಸಾಲು ಆರೋಪಗಳು: ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಅಚ್ಚರಿಯ ಸಂಗತಿಗಳು ಬಯಲಾಗುತ್ತಾ ಬಂದಿವೆ. ಮೋಸಗಾತಿ ಮಹಿಳೆ 10 ವರ್ಷಗಳ ಹಿಂದೆ ಚೆನ್ನೈ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಓರ್ವ ಮಗು ಹೊಂದಿದ್ದು ಗೊತ್ತಾಗಿದೆ. ಇದಲ್ಲದೇ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಯುವಕ ಸೇರಿ 12 ಮಂದಿಯನ್ನು ಆಕೆ ಹೀಗೆಯೇ ವಂಚಿಸಿ ಮದುವೆಯಾಗಿದ್ದಳು ಎಂಬುದು ಗೊತ್ತಾಗಿದೆ. ವಿವಾಹವಾದ ಬಳಿಕ ಗಂಡನೊಂದಿಗೆ ಜಗಳವಾಡಿ ಮನೆಯಲ್ಲಿದ್ದ ಒಡವೆ, ಹಣದೊಂದಿಗೆ ಪರಾರಿಯಾಗುತ್ತಿದ್ದಳು ಎಂಬುದೂ ತನಿಖೆಯಲ್ಲಿ ಗೊತ್ತಾಗಿದೆ.
ಈವರೆಗೂ ಆಕೆ 12 ಮಂದಿಯಿಂದ ಲಕ್ಷಗಟ್ಟಲೆ ಹಣ, ಭಾರೀ ಮೌಲ್ಯದ ಒಡವೆ ದೋಚಿದ್ದಾಳೆ. ಇದಕ್ಕೆ ತಮಿಳ್ಚೆಲ್ವಿ ಎಂಬಾಕೆಯ ಸಾಥ್ ಕೂಡ ಇದೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ತಲೆಮರೆಸಿಕೊಂಡಿದ್ದ ಸತ್ಯಳನ್ನು ಪೊಲೀಸರು ಪುದುಚೇರಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಜೈಲಿಗೆ ಹಾಕಿದ್ದಾರೆ.