ನವದೆಹಲಿ: ರಸ್ತೆ ಬದಿಯಲ್ಲಿ ಮಲಗಿದ್ದ ಐವರ ಮೇಲೆ ವೇಗವಾಗಿ ಬಂದ ಟ್ರಕ್ ಹರಿದಿದ್ದು ಮೂವರು ಸಾವನ್ನಪ್ಪಿ, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ನಡೆದಿದೆ. ಗಾಯಗೊಂಡವರನ್ನು 35 ವರ್ಷದ ಮುಸ್ತಾಕ್ ಮತ್ತು 36 ವರ್ಷದ ಕಮಲೇಶ್ ಎಂದು ಗುರುತಿಸಲಾಗಿದೆ.
ಅಪಘಾತದ ತಕ್ಷಣ ಚಾಲಕ ತನ್ನ ಟ್ರಕ್ ಅನ್ನು ಸ್ವಲ್ಪ ದೂರ ಚಲಾಯಿಸಿ ನಂತರ ಟ್ರಕ್ ಬಿಟ್ಟು ಪರಾರಿಯಾಗಿದ್ದಾನೆ. ಆತನನ್ನು ಹಿಡಿಯಲು ಯತ್ನಿಸಿದವರ ಮೇಲೂ ಚಾಲಕ ಕಲ್ಲು ತೂರಾಟ ನಡೆಸಿದ್ದಾನೆ. ಸದ್ಯ ಪೊಲೀಸರು ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಟ್ರಕ್ ಚಾಲಕನಿಗೆ ಪೊಲೀಸರಿಂದ ಶೋಧ ನಡೆಯುತ್ತಿದೆ. ಮೃತರ ಗುರುತು ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ.
ಪೊಲೀಸರ ಹೇಳಿಕೆ ಪ್ರಕಾರ, "ಮುಂಜಾನೆ 5 ಗಂಟೆ ಸುಮಾರಿಗೆ ಶಾಸ್ತ್ರಿ ಪಾರ್ಕ್ ಪೊಲೀಸ್ ಠಾಣಾ ತಂಡಕ್ಕೆ ಸೀಲಾಂಪುರದಿಂದ ಲೋಹೆ ಕಿ ಸೇತುವೆ ಕಡೆಗೆ ಹೋಗುತ್ತಿದ್ದ ಟ್ರಕ್ ರಸ್ತೆ ಬದಿ ಮಲಗಿದ್ದ ಐವರ ಮೇಲೆ ಅಪಘಾತ ಎಸಗಿದೆ ಎನ್ನುವ ಮಾಹಿತಿ ದೊರಕುತ್ತದೆ. ತಕ್ಷಣ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಇಬ್ಬರು ಗಾಯಾಳುಗಳನ್ನು ಜಗಪ್ರವೇಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನಡೆಯುತ್ತಿದೆ. ಆರೋಪಿ ಟ್ರಕ್ ಚಾಲಕ ಸ್ವಲ್ಪ ದೂರ ಹೋಗಿದ್ದು, ನಂತರ ಟ್ರಕ್ ಬಿಟ್ಟು ಪರಾರಿಯಾಗಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಇನ್ನು ಸ್ಥಳೀಯರು ಈ ಬಗ್ಗೆ ಸಮೀಪದ ಕೊಳೆಗೇರಿಯಲ್ಲಿ ವಾಸಿಸುವ ಜನರು ರಸ್ತೆ ಬದಿ, ಡಿವೈಡರ್ ಮೇಲೆ ಮಲಗುತ್ತಾರೆ. ಅದೇ ರೀತಿ ನಿನ್ನೆ ರಾತ್ರಿ ಹಲವರು ಮಲಗಿದ್ದರು. ಬೆಳಗಿನ ಜಾವ 4:30ರ ಸುಮಾರಿಗೆ ಬಂದ ಟ್ರಕ್ ಮಲಗಿದ್ದ ಐವರ ಮೇಲೆ ಹರಿದು ಹೋಗಿದೆ ಎಂದು ತಿಳಿಸಿದ್ದಾರೆ.