ಬಾರಾಬಂಕಿ(ಉತ್ತರಪ್ರದೇಶ): ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಕತ್ತು ಸೀಳಿ ಹತ್ಯೆಗೈದು, ನಂತರ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ರಸ್ತೆಗೆ ಬಂದ ಭೀಭತ್ಸ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ. ಹಂತಕ ತನ್ನ ಒಂದು ಕೈಯಲ್ಲಿ ರುಂಡ, ಮತ್ತೊಂದು ಕೈಯಲ್ಲಿ ಕೊಲೆಗೆ ಬಳಸಿದ ಚಾಕು ಹಿಡಿದು ರಸ್ತೆಯಲ್ಲಿ ಸುತ್ತಾಡುತ್ತಿದ್ದ ದೃಶ್ಯ ಕಂಡ ಸಾರ್ವಜನಿಕರು ಬೆಚ್ಚಿಬಿದ್ದಿದ್ದರು.
ಫತೇಪುರ್ ಸಮೀಪದ ಬಸರ ಗ್ರಾಮದ ನಿವಾಸಿ ಅನಿಲ್ ಕನೋಜಿಯಾ ಈ ಪಾಪಿಯಾಗಿದ್ದು, ತನ್ನ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ದುಷ್ಕೃತ್ಯ ಎಸಗಿದ್ದಾನೆ. ಇದೇ ವಿಷಯವಾಗಿ ಗಂಡ ಮತ್ತು ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಶುಕ್ರವಾರ ಬೆಳಗ್ಗೆ ಕೂಡ ಇಬ್ಬರ ನಡುವೆ ಕಲಹ ಉಂಟಾಗಿದೆ. ಇದು ವಿಕೋಪಕ್ಕೆ ತಿರುಗಿ ಅನಿಲ್ ಪತ್ನಿಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೇ, ಚಾಕುವಿನಿಂದ ಆಕೆಯ ತಲೆ ಕತ್ತರಿಸಿದ್ದಾನೆ ಎಂದು ವರದಿಯಾಗಿದೆ.
ನಂತರ ಈ ದುರುಳ ಹಾಡಹಗಲೇ ತನ್ನ ಪತ್ನಿಯ ರುಂಡ, ಕೃತ್ಯಕ್ಕೆ ಬಳಸಿದ್ದ ಚಾಕು ಹಿಡಿದುಕೊಂಡು ಮುಖ್ಯರಸ್ತೆಗೆ ಬಂದಿದ್ದಾನೆ. ಜನನಿಬಿಡ ಪ್ರದೇಶದಲ್ಲಿ ರುಂಡ ಹಿಡಿದುಕೊಂಡು ಹೋಗುತ್ತಿದ್ದಾಗ ದಾರಿಯುದ್ದಕ್ಕೂ ರಕ್ತ ಸೋರುತ್ತಿತ್ತು. ಈ ದೃಶ್ಯ ನೋಡಿದವರೆಲ್ಲ ಬೆಚ್ಚಿಬಿದ್ದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಘಟನೆ ಕುರಿತು ಹಚ್ಚಿನ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ಸಿಂಗ್, ಆರೋಪಿ ಅನಿಲ್ ಮೇಸ್ತ್ರಿ ಕೆಲಸ ಮಾಡುತ್ತಿದ್ದ. ಶುಕ್ರವಾರ ಬೆಳಗ್ಗೆ ಕೆಲಸ ನಿಮಿತ್ತ ಮನೆಯಿಂದ ತೆರಳಿದ್ದ. ಇದಾದ ಕೆಲ ಹೊತ್ತಿನ ಬಳಿಕ ಮನೆಗೆ ವಾಪಸಾಗಿದ್ದ. ಗಂಡ, ಹೆಂಡತಿ ಮಧ್ಯೆ ಜಗಳ ಶುರುವಾಗಿದೆ. ಇದೇ ವೇಳೆ ಕೋಪಗೊಂಡ ಆರೋಪಿಯ ಪತ್ನಿಯ ಹತ್ಯೆ ಮಾಡಿದ್ದಾನೆ. ಸದ್ಯ ಈತನನ್ನು ಕೊಲೆ ಆರೋಪಡಡಿ ಬಂಧಿಸಲಾಗಿದೆ. ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಿಯಕರನ ಜೊತೆಗೂಡಿ ಗಂಡನ ಕೊಲೆ; ಮನೆಯಲ್ಲೇ ಶವ ಹೂತು ಹಾಕಿದ ಮಹಿಳೆ