ಪಟಿಯಾಲ (ಪಂಜಾಬ್) : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.
ತರನ್ ತರನ್ ಜಿಲ್ಲೆಯ ಪಹುವಿಂಡ್‌ನ ರೇಷಮ್ ಸಿಂಗ್ (55) ಮೃತ ರೈತ. ಗುರುವಾರ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವಾಗ ರೈತ ರೇಷಮ್ ಸಿಂಗ್, ವಿಷಕಾರಿ ದ್ರವವನ್ನು ಸೇವಿಸಿದ್ದಾನೆ. ತಕ್ಷಣವೇ ಆತನನ್ನು ಪಟಿಯಾಲದ ರಾಜೀಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ ಎಂದು ರೈತರು ತಿಳಿಸಿದ್ದಾರೆ.
ರೈತ ರೇಷಮ್ ಸಿಂಗ್ ಅವರು ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿದ್ದರು. ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಅವರು ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ರೈತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ: ರೈತ ಉತ್ಪಾದಕ ಸಂಸ್ಥೆಯಿಂದ ಅನ್ನದಾತರಿಗೆ ಮಿಶ್ರ ಬೇಸಾಯದ ತರಬೇತಿ ; ನಿತ್ಯ ಆದಾಯಕ್ಕೆ ಆಸರೆ
ಈ ಬಗ್ಗೆ ಮಾತನಾಡಿರುವ ರೈತ ನಾಯಕ ತೇಜ್‌ವೀರ್ ಸಿಂಗ್ ಅವರು, ದೀರ್ಘಕಾಲದ ಪ್ರತಿಭಟನೆಯ ಹೊರತಾಗಿಯೂ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ಇದರ ವಿರುದ್ಧ ರೈತರು ಅಸಮಾಧಾನಗೊಂಡಿದ್ದಾರೆ. ಇಂದು ರೇಷಮ್ ಸಿಂಗ್ ಅವರು ನೊಂದು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಎರಡನೇ ಘಟನೆ: ಪ್ರತಿಭಟನೆಯಲ್ಲಿ ರೈತನ ಸಾವು ಕಳೆದ ಮೂರು ವಾರಗಳಲ್ಲಿ ಎರಡನೇ ಘಟನೆಯಾಗಿದೆ. ಇದಕ್ಕೂ ಮೊದಲು 2024ರ ಡಿಸೆಂಬರ್ 18 ರಂದು ರಂಜೋಧ್ ಸಿಂಗ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತೀಚೆಗೆ, ದೆಹಲಿಗೆ ಮೆರವಣಿಗೆ ನಡೆಸಲು ಮುಂದಾದಾಗ, ಭದ್ರತಾ ಪಡೆಗಳು ತಡೆದಿದ್ದವು. ಬಳಿಕ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು, ಖಾನೌರಿ ಗಡಿಗಳಲ್ಲಿ ರೈತರು ಬೀಡು ಬಿಟ್ಟಿದ್ದಾರೆ.
ಇದನ್ನೂ ಓದಿ: ಶಂಭು ಗಡಿ ಬಳಿ ಪ್ರತಿಭಟನಾನಿರತ ರೈತರ ಮೇಲೆ ಆಶ್ರುವಾಯು ಬಳಕೆ