ಕಂಧಮಲ್ (ಒಡಿಶಾ) : ಒಡಿಶಾದ ಕಂಧಮಲ್ ಜಿಲ್ಲೆಯ ಮಂಡಿಪಂಕ ಎಂಬ ಬುಡಕಟ್ಟು ಗ್ರಾಮದಲ್ಲಿ ಮಾವಿನ ಗೊರಟೆಯಿಂದ ಮಾಡಿದ ಗಂಜಿ ಸೇವಿಸಿ ಮೂವರು ಮಹಿಳೆಯರು ಮೃತಪಟ್ಟು, ಹಲವರು ಅಸ್ವಸ್ಥಗೊಂಡ ಘಟನೆ ನಡೆದಿದ್ದು, ಇದು ಸ್ಥಳೀಯರನ್ನು ಚಿಂತೆಗೀಡು ಮಾಡಿದೆ. ನವೆಂಬರ್ 1 ರಿಂದ ಈವರೆಗೂ ಮಾವಿನ ಗೊರಟೆಯ ಗಂಜಿ ಸೇವಿಸಿ 8 ಮಹಿಳೆಯರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಫಲಿಸದೇ ಮೂವರು ಮಹಿಳೆಯರು ಅಸುನೀಗಿದ್ದಾರೆ.
ಕಳೆದ ಸೋಮವಾರವಷ್ಟೇ ಅಸ್ವಸ್ಥಗೊಂಡಿದ್ದ ಜೀತಾ ಮಾಝಿ ಎಂಬ ಮಹಿಳೆ ಕೊನೆಯುಸಿರೆಳೆದಿದ್ದು, ಇದಕ್ಕೂ ಮುನ್ನ ಗ್ರಾಮದಲ್ಲಿ ಇದೇ ಗಂಜಿ ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. 12 ದಿನಗಳ ಕಾಲ ವೆಂಟಿಲೇಟರ್ನಲ್ಲಿದ್ದ ಜೀತಾ, ಮೂತ್ರಪಿಂಡದ ತೊಂದರೆ ಸೇರಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಜೀತಾ ಅವರ ಕಿಡ್ನಿ, ಹೃದಯ, ಲಿವರ್, ಮೆದುಳು ಎಲ್ಲಾ ಅಂಗಾಂಗಗಳು ನಿಷ್ಕ್ರಿಯಗೊಂಡಿದ್ದವು. 10 ಬಾರಿ ಡಯಾಲಿಸಿಸ್ ಮಾಡಿದರೂ ಆರೋಗ್ಯ ಸುಧಾರಿಸದ ಕಾರಣ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿರುವುದಾಗಿ ಕಟಕ್‌ನ ಎಸ್‌ಸಿಬಿ ಮೆಡಿಕಲ್ ಸೆಂಟರ್ ಆಸ್ಪತ್ರೆ ಖಚಿತಪಡಿಸಿದೆ.
ಕಳೆದ ಎರಡು ದಶಕಗಳಿಂದ, ಒಡಿಶಾವು ಆಹಾರದ ಅಭದ್ರತೆಯಿಂದ ಬಳಲುತ್ತಿದೆಯಾದರೂ, ಮಂಡಿಪಂಕ ಗ್ರಾಮ ಹಿಂದೆಂದೂ ಈ ರೀತಿಯ ಘಟನೆಗೆ ಸಾಕ್ಷಿಯಾಗಿರಲಿಲ್ಲ. ಆದರೆ, ಈ ಘಟನೆಯು ಗ್ರಾಮ ಅಷ್ಟೇ ಅಲ್ಲದೇ ಕಂಧಮಾಲ್ ಜಿಲ್ಲೆ ಮತ್ತು ಇತರ ಆದಿವಾಸಿ ಕುಟುಂಬಗಳಿಗೆ ಭಯ ತರಿಸಿದೆ. ವಾಸ್ತವಕ್ಕೆ ಬರಲು ಜನ ಹೆಣಗಾಡುತ್ತಿದ್ದಾರೆ. ಘಟನೆ ನಡೆದು 20 ದಿನ ಕಳೆದರೂ ಗ್ರಾಮದಲ್ಲಿ ಮೌನ ಆವರಿಸಿದ್ದು, ದುಗುಡ ತುಂಬಿಕೊಂಡೇ ಜೀವನ ಸಾಗುತ್ತಿದ್ದಾರೆ. ಗ್ರಾಮಕ್ಕೆ ಕಾಲಿಟ್ಟಾಗ ಆ ಗ್ರಾಮ ಸ್ತಬ್ಧವಾಗಿತ್ತು. ನಾವು ಹಳ್ಳಿ ಸುತ್ತಿದಾಗ ಬೀದಿಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯೂ ನಮ್ಮೊಂದಿಗೆ ಮಾತನಾಡಲು ಸಿದ್ಧರಿರಲಿಲ್ಲ. ನಾವು (ಮಾಧ್ಯಮದವರು) ಬಂದಿದ್ದು ಅವರಿಗೆ ಖುಷಿ ನೀಡಿರಲಿಲ್ಲ. ಮಾವಿನ ಗೊರಟೆ ಗಂಜಿ ತಮ್ಮವರ ಜೀವಕ್ಕೆ ತಂದ ಆಪತ್ತು ಬಗ್ಗೆ ಆಲೋಚನೆಗಳಲ್ಲಿ ಮುಳುಗಿದ್ದರು ಎಂಬುದನ್ನು ಈಟಿವಿ ಭಾರತದ ವರದಿಗಾರ ಸಮೀರ್ ಕುಮಾರ್ ಆಚಾರ್ಯ ಬಿಚ್ಚಿಟ್ಟಿದ್ದಾರೆ.
ಒಟ್ಟಿಗೆ ಇರುತ್ತಿದ್ದೆವು, ಊಟ -ಆಟ, ನಕ್ಕು ನಲಿಯುತ್ತಿದ್ದೆವು!- ಆದರೆ?: ಘಟನೆ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಮೃತ ವ್ಯಕ್ತಿಯ ಸಂಬಂಧಿ ತರಾನಾ ಪಟ್ಟಾಜಿ ''ಒಂದು ಕಾಲದಲ್ಲಿ ನಮ್ಮಲ್ಲಿ ಸಂತೋಷ ಮತ್ತು ಸಂಭ್ರಮದ ಮನೆ ಮಾಡಿತ್ತು. ಆದರೆ, ಈ ಘಟನೆಯಿಂದ ಗ್ರಾಮದಲ್ಲಿ ಇದೀಗ ದುಃಖವೇ ಆವರಿಸಿದೆ. ನಾವು ಒಟ್ಟಿಗೆ ಕುಳಿತು ಊಡ ಮಾಡುತ್ತಿದ್ದೆವು, ಒಟ್ಟಿಗೆ ನಗುತ್ತಿದ್ದೆವು, ಒಟ್ಟಿಗೆ ಇರುತ್ತಿದ್ದೆವು. ಆ ಖುಷಿ ಘಳಿಗೆ ಇದೀಗ ಇಲ್ಲವಾಗಿದೆ. ಗ್ರಾಮ ಶಾಪಗ್ರಸ್ತವಾಗಿದೆ ಎಂದು ಭಾಸವಾಗುತ್ತಿದೆ. ಕಷ್ಟದ ದಿನಮಾನದಲ್ಲಿ ನಮ್ಮ ಸಮುದಾಯವನ್ನು ಉಳಿಸಿದ ಅದೇ ಮಾವಿನ ಗೊರಟೆಯ ಗಂಜಿ ಈಗ ಸಾವಿನ ಮುನ್ಸೂಚನೆಯಾಗಿ ಮಾರ್ಪಟ್ಟಿದ್ದು ನಮಗೆ ನಂಬಲು ಆಗುತ್ತಿಲ್ಲ'' ಎಂದು ಕಣ್ಣೀರು ಹಾಕಿದ್ದಾರೆ.
ಏನಿದು ಮಾವಿನ (ಹ್ವಾಟೆ) ಗೊರಟೆ ದುರಂತ?: ''ಅನೇಕ ಬುಡಕಟ್ಟು ಹಾಗೂ ಆದಿವಾಸಿ ಕುಟುಂಬಗಳಿಗೆ ಮಾವಿನ ಗೊರಟೆಯ ಗಂಜಿಯೇ ಪ್ರಮುಖ ಆಹಾರ. ಗೊರಟೆಯನ್ನು ತೊಳೆದು, ಒಣಗಿಸಿ ಮತ್ತು ಪುಡಿಮಾಡಿ, ಹಸಿವು ಆದಾಗ ಗಂಜಿಯಾಗಿ, ಹೆಚ್ಚಾಗಿ ಅನ್ನದೊಂದಿಗೆ ಸೇವಿಸಲಾಗುತ್ತದೆ. ವರ್ಷಾನುಗಟ್ಟಲೆ ಇದನ್ನು ಸಂಗ್ರಹ ಮಾಡಿಡಲಾಗುತ್ತದೆ. ಅನ್ನದ ಕೊರತೆಯಿಂದ ಆದಿವಾಸಿ ಜನ ಈ ಗಂಜಿ ಸೇವಿಸುವುದುಂಟು. ಸಂಗ್ರಹಿಸಿಟ್ಟಿದ್ದ ಪದಾರ್ಥವೇ ವಿಷಕಾರಿಯಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಈ ದುರಂತವು ಉತ್ತರ ಸಿಗದ ಹಲವು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಅನ್ನ ಇಲ್ಲದ ಕಾರಣ ಇದನ್ನು ಸೇವಿಸಬೇಕಾಯಿತು. ಹಸಿವು ಆದಾಗ ಹೊಟ್ಟೆಗೆ ಅನ್ನವಿಲ್ಲದಿದ್ದರೆ ಇನ್ನೇನು ಮಾಡಬೇಕು? ಎಲ್ಲವೂ ಸರ್ಕಾರದ ಮೇಲೆಯೇ ಅವಲಂಬಿತವಾಗಿದೆ. ಈಗಲೂ ತಿನ್ನಲು ಅನ್ನವಿಲ್ಲ. ಸರ್ಕಾರ ಕೊಟ್ಟರೆ ತಿಂದು ಬದುಕುತ್ತೇವೆ. ಇಲ್ಲದಿದ್ದರೆ ಇಲ್ಲ'' ಎಂದು ಗ್ರಾಮದ ಮತ್ತೊಬ್ಬ ಮಹಿಳೆ ತನ್ನ ಅಳಲು ತೋಡಿಕೊಂಡರು.
ಮಾವಿನ ಹ್ವಾಟೆ ಗಂಜಿ ಇಂದಿನ ಪದಾರ್ಥವಲ್ಲ: ''ಗೊರಟೆಯ ಗಂಜಿ ಇವತ್ತಿನ ಪದಾರ್ಥವಲ್ಲ. ಇದಕ್ಕೆ ದೀರ್ಘಕಾಲದ ಇತಿಹಾಸವಿದೆ. ಅಕ್ಕಿ-ಬೇಳೆಯನ್ನು ಪ್ರಧಾನವಾಗಿಟ್ಟುಕೊಂಡು, ಗಂಜಿ ಸೇರಿದಂತೆ ನಾನಾ ಖಾದ್ಯಗಳನ್ನು ತಯಾರಿಸಬಹುದು. ಇದು ವಿಷಕಾರಿಯಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಈ ಘಟನೆ ಬಳಿಕ ಕಾಡಿನಲ್ಲಿರುವುದರಿಂದ ಯಾವ ಆಹಾರ ಎಷ್ಟು ಸುರಕ್ಷಿತವೆಂದು ಹೇಗೆ ನಂಬುವುದು? ಎಂದು ಗೊತ್ತಾಗುತ್ತಿಲ್ಲ. ಅಲ್ಲದೇ ನಮ್ಮ ಆಹಾರಕ್ರಮವನ್ನು ಬದಲಾಯಿಸುವುದು ಕಷ್ಟಕರ'' ಎಂದು ಗ್ರಾಮದ ಪರವತಿ ಪಟ್ಟಮಾಜಿ ಕಣ್ಣೀರು ಹಾಕಿದರು.
ಗೊರಟೆ ಗಂಜಿ: ಮಾವು ಹಣ್ಣಾದಾಗ, ವಿಶೇಷವಾಗಿ ಬೇಸಿಗೆಯಲ್ಲಿ, ಮಾವಿನ ಹಣ್ಣುಗಳು ಮಾಗಿದ ನಂತರ, ಬುಡಕಟ್ಟು ಜನಾಂಗದವರು ಗೊರಟೆಯನ್ನು ಸಂಗ್ರಹಿಸಿ ಇಟ್ಟಿರುತ್ತಾರೆ. ಬುಟ್ಟಿ ಅಥವಾ ಚೀಲದಲ್ಲಿ ನೇತುಹಾಕುವ ಮೂಲಕ ವರ್ಷಾನುಗಟ್ಟಲೇ ಹಾಗೆಯೇ ಇಡಲಾಗುತ್ತದೆ. ಚೆನ್ನಾಗಿ ಒಣಗಿದ ನಂತರ ಬೆಲ್ಲದ ನೀರಿನಲ್ಲಿ ದೀರ್ಘಕಾಲ ನೆನೆಸುತ್ತಾರೆ. ಬಳಿಕ ಅದಕ್ಕೆ ಸ್ವಲ್ಪ ಅಕ್ಕಿ ಸೇರಿಸಿ ಗಂಜಿಯಾಗಿ ಮಾಡುತ್ತಾರೆ. ಅಕ್ಕಿ ಖಾಲಿಯಾದಾಗ ಅಥವಾ ಅನ್ನದ ಕೊರತೆಯಾದಾಗ, ಹಸಿವು ನೀಗಿಸಲು ಈ ಮಾವಿನ ಗಂಜಿ ಸೇವಿಸುತ್ತಾರೆ.
ತನಿಖೆಗೆ ಆದೇಶ: ಆದಿವಾಸಿಗಳ ಈ ಆಹಾರ ಪದ್ಧತಿ ಹಾಗೂ ಬುಡಕಟ್ಟು ಗ್ರಾಮದಲ್ಲಿ ನಡೆದ ದುರ್ಘಟನೆ ಬಗ್ಗೆ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯದ ಮೊಗಸಾಲೆಗೂ ಕಾಲಿಟ್ಟಿದ್ದು, ಸಿಎಂ ಮೋಹನ್ ಚರಣ್ ಮಾಝಿ ಅವರು ಪ್ರಕರಣವನ್ನು ಕಂದಾಯ ವಿಭಾಗೀಯ ಆಯುಕ್ತ (ಆರ್‌ಡಿಸಿ)ರ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೇ ತಾತ್ಕಾಲಿಕವಾಗಿ ಪರಿಹಾರದ ಕ್ರಮವಾಗಿ ಗ್ರಾಮಕ್ಕೆ ಮೂರು ತಿಂಗಳಿಗಾಗುವಷ್ಟು ಅಕ್ಕಿಯನ್ನು ವಿತರಿಸಲು ಸೂಚನೆ ನೀಡಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.
ಇದನ್ನೂ ಓದಿ: ಆಹಾರ ಪ್ರಿಯರೇ ಎಚ್ಚರ: ಅಸುರಕ್ಷಿತ ಫುಡ್ ಪದಾರ್ಥಗಳು ಪತ್ತೆ, ಕ್ರಮಕ್ಕೆ ಮುಂದಾದ ಇಲಾಖೆ