ನವದೆಹಲಿ: ಬೃಹತ್ ಅಂತಾರಾಷ್ಟ್ರೀಯ ಡ್ರಗ್ಸ್ ಮಾರಾಟ ಜಾಲವೊಂದನ್ನು ಪೊಲೀಸರು ಭೇದಿಸಿದ್ದು, 95 ಕೆ.ಜಿ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿ, 95 ಕೆ.ಜಿ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಓರ್ವ ಮೆಕ್ಸಿಕನ್ ಪ್ರಜೆ, ಮುಂಬೈನ ರಸಾಯನಶಾಸ್ತ್ರಜ್ಞ ಮತ್ತು ತಿಹಾರ್ ಜೈಲು ವಾರ್ಡನ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮತ್ತು ದೆಹಲಿ ಪೊಲೀಸರ ವಿಶೇಷ ಸೆಲ್ ಈ ಜಂಟಿ ಕಾರ್ಯಾಚರಣೆ ನಡೆಸಿವೆ.
ಈ ಬಗ್ಗೆ ಮಾತನಾಡಿದ ಎನ್ಸಿಬಿಯ ಡಿಡಿಜಿ (ಕಾರ್ಯಾಚರಣೆ) ಜ್ಞಾನೇಶ್ವರ್ ಸಿಂಗ್, "ಅಕ್ರಮ ಮಾದಕವಸ್ತು ಕಳ್ಳಸಾಗಣೆ ಮೂಲಕ ಆರೋಪಿಗಳು ಸೃಷ್ಟಿಸಿದ ಫಾರ್ವರ್ಡ್ ಮತ್ತು ಬ್ಯಾಕ್ ವರ್ಡ್ ಸಂಪರ್ಕಗಳು, ಆರ್ಥಿಕ ಜಾಡು ಮತ್ತು ಆಸ್ತಿಗಳನ್ನು ಪತ್ತೆ ಮಾಡಲಾಗುತ್ತಿದೆ" ಎಂದು ಹೇಳಿದರು.
ಗೌತಮ್ ಬುದ್ಧ ನಗರ ಜಿಲ್ಲೆಯ ಕಸನಾ ಕೈಗಾರಿಕಾ ಪ್ರದೇಶದಲ್ಲಿರುವ ಸಿಂಥೆಟಿಕ್ ಡ್ರಗ್ಸ್ ಘಟಕದ ಮೇಲೆ ಅಕ್ಟೋಬರ್ 25ರಂದು ಈ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಉದ್ಯಮಿ, ಗ್ಯಾಂಗ್ನ ಮಾಸ್ಟರ್ ಮೈಂಡ್ ಮತ್ತು ಜೈಲು ವಾರ್ಡನ್ ಅಲ್ಲಿ ಸಿಕ್ಕಿಬಿದ್ದಿದ್ದಾರೆ.
ಈ ಘಟಕವು ರಫ್ತು ಮಾಡಲು ಮತ್ತು ಭಾರತದಲ್ಲಿ ಬಳಕೆಗಾಗಿ ಮೆಥಾಂಫೆಟಮೈನ್ ಉತ್ಪಾದಿಸುತ್ತಿತ್ತು. ಕಾರ್ಯಾಚರಣೆಯಲ್ಲಿ ಮೆಕ್ಸಿಕನ್ ಸಿಜೆಎನ್ ಜಿ ಡ್ರಗ್ ಕಾರ್ಟೆಲ್ (ಕಾರ್ಟೆಲ್ ಡಿ ಜಾಲಿಸ್ಕೊ ನುಯೆವಾ ಜೆನೆರಾಸಿಯನ್) ಸದಸ್ಯರು, ಮುಂಬೈ ರಸಾಯನಶಾಸ್ತ್ರಜ್ಞ ಮತ್ತು ಉದ್ಯಮಿ ಕೂಡ ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ಕಾರ್ಖಾನೆಯ ಮೇಲಿನ ದಾಳಿಯ ನಂತರದ ತನಿಖೆಯಲ್ಲಿ, ಸಿಂಡಿಕೇಟ್‌ನ ಇನ್ನೊಬ್ಬ ಸದಸ್ಯ ಮತ್ತು ದೆಹಲಿ ಮೂಲದ ಉದ್ಯಮಿಯ ನಿಕಟ ಸಹವರ್ತಿಯನ್ನು ಪಶ್ಚಿಮ ದೆಹಲಿಯ ರಾಜೌರಿ ಗಾರ್ಡನ್ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಸಿಂಗ್ ಹೇಳಿದರು.
ಅಕ್ರಮ ಡ್ರಗ್ ಫ್ಯಾಕ್ಟರಿಯಿಂದ ಬಂಧಿಸಲ್ಪಟ್ಟ ಉದ್ಯಮಿಯನ್ನು ಈ ಹಿಂದೆ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್ ಕಾಯ್ದೆ, 1985 ಪ್ರಕರಣದಲ್ಲಿ ಕಂದಾಯ ಗುಪ್ತಚರ ಇಲಾಖೆ (ಡಿಆರ್ ಐ)ಯಿಂದ ಬಂಧಿಸಿ ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು. ಜೈಲಿನಲ್ಲಿ ವಾರ್ಡನ್ ಜೊತೆಗೆ ಸ್ನೇಹ ಬೆಳೆಸಿ ಆತನನ್ನು ಸಹಚರನನ್ನಾಗಿ ಮಾಡಿಕೊಂಡಿದ್ದ ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ ಬಂಧಿತರಾದ ಎಲ್ಲ ನಾಲ್ವರು ಆರೋಪಿಗಳನ್ನು ಭಾನುವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಎನ್ಸಿಬಿ ತಿಳಿಸಿದೆ. ದಾಳಿಯ ಸಮಯದಲ್ಲಿ ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ ಅಸಿಟೋನ್, ಸೋಡಿಯಂ ಹೈಡ್ರಾಕ್ಸೈಡ್, ಮೆಥಿಲೀನ್ ಕ್ಲೋರೈಡ್, ಪ್ರೀಮಿಯಂ ಗ್ರೇಡ್ ಎಥೆನಾಲ್, ಟೊಲುಯೆನ್, ಕೆಂಪು ರಂಜಕ, ಈಥೈಲ್ ಅಸಿಟೇಟ್ ಮತ್ತು ಆಮದು ಮಾಡಿದ ಯಂತ್ರೋಪಕರಣಗಳು ಸೇರಿವೆ.
ಇದನ್ನೂ ಓದಿ: ಕಸ್ಟಮ್ಸ್, ಜಿಎಸ್ಟಿ ಕಡಿತ: ಮೂರು ಪ್ರಮುಖ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ