ಮಯೂರ್‌ಭಂಜ್ ( ಒಡಿಶಾ): ನಾಟಕ ತಂಡ ಪ್ರಯಾಣಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಆರು ಜನರು ಮೃತಪಟ್ಟು, 11 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 49ರ ಧರ್ಸುನಿ ಘಾಟ್ನಲ್ಲಿ ನಡೆದಿದೆ. ಗಾಯಾಳುಗಳನ್ನು ಪಿಆರ್‌ಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಟ್ರಕ್ ರಾಯರಂಗಪುರದಿಂದ ಜಲೇಶ್ವರಕ್ಕೆ (ಬಾಲಸೋರ್ ಜಿಲ್ಲೆ) ತೆರಳುತ್ತಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಟ್ರಕ್ ಧರ್ಸುನಿ ಘಾಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕೊನೆಯ ತಿರುವಿನಲ್ಲಿ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಟ್ರಕ್ನಲ್ಲಿದ್ದವರು 20 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದಾರೆ. ಇನ್ನು ಟ್ರಕ್ನಲ್ಲಿ ಧೌಲಿ ಗಣನಾಟ್ಯ ನಾಟಕ ತಂಡದ 15ಕ್ಕೂ ಹೆಚ್ಚು ಸದಸ್ಯರು ಪ್ರಯಾಣಿಸುತ್ತಿದ್ದರು ಎಂದು ಹೇಳಿದ್ದಾರೆ.
ತಕ್ಷಣ ಘಟನಾ ಸ್ಥಳಕ್ಕೆ ಬಂಗಿರಿಪೋಶಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಸ್ಥಳೀಯರ ನೆರವಿನಿಂದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಈ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕರ ಸಂಕ್ರಾಂತಿ ಮತ್ತು ತುಸು ಹಬ್ಬ (ಆದಿವಾಸಿಗಳ ಹಬ್ಬ) ನಿಮಿತ್ತ ಮಯೂರಭಂಜ್‌ನ ರಾಯರಂಗಪುರದ ಬಲ್ಡಾ ಬ್ಲಾಕ್, ಬಾಸಿಂಗಿ ಗ್ರಾಮದಲ್ಲಿ ‘ಧೌಲಿ ಗಣನಾಟ್ಯ’ ನಾಟಕ ನಡೆಸಿ, ಇಂದು ವಾಪಸ್ ಆಗುವಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಅಯ್ಯಪ್ಪ ಭಕ್ತರಿದ್ದ ಬಸ್ ಪಲ್ಟಿ, 15 ಜನರಿಗೆ ಗಾಯ
ಕಾರಿನ ಮೇಲೆ ಲಾರಿ ಪಲ್ಟಿ, ಮಗು ಸೇರಿ ನಾಲ್ವರು ಸಾವು(ಗುಜರಾತ್): ಇತ್ತೀಚಿಗೆ, ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಪಲ್ಟಿಯಾಗಿ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಗುಜರಾತ್ನಲ್ಲಿ ನಡೆದಿತ್ತು. ಡ್ಯಾಂಗ್ ಜಿಲ್ಲೆಯ ಸಪುತಾರಾ ಘಾಟ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿತ್ತು. ಘಟನೆ ಬಗ್ಗೆ ಡ್ಯಾಂಗ್ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಿ.ಪಾಟೀಲ್ ಅವರು ಮಾಹಿತಿ ನೀಡಿ, ರಸ್ತೆಯ ಎರಡನೇ ತಿರುವಿನ ಬಳಿ ಲಾರಿ ಪಲ್ಟಿಯಾಗಿ ಕಾರು ನಜ್ಜುಗುಜ್ಜಾಗಿದೆ. ಅದರಲ್ಲಿ ಮೂವರು ಮಹಿಳೆಯರು, ಬಾಲಕಿ ಹಾಗೂ ಒಬ್ಬ ಪುರುಷ ಸೇರಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬ ವೃದ್ಧೆಯನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿಸಿದ್ದರು.
ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ನಡೆಸಿದ್ದರು. ಎರಡು ಜೆಸಿಬಿ ಹಾಗೂ ಕ್ರೇನ್ ಮೂಲಕ ಕಾರನ್ನು ಲಾರಿ ಅಡಿಯಿಂದ ಹೊರ ತೆಗೆಯಲಾಗಿತ್ತು. ರಾಮನಾಬೆನ್ ಠಾಕೂರ್, ಅಮಿತ್ಕುಮಾರ್ ರಜಪೂತ್ ಮತ್ತು ಅವರ ಪತ್ನಿ ಪ್ರಿಯಾಂಕಾ ಹಾಗೂ 2 ವರ್ಷದ ಮಗು ಅನಯ ಅಮಿತ್ ಕುಮಾರ್ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ವೃದ್ಧೆ ಮೀರಾಬೆನ್ ರಾಮಾಶ್ರಯ್ ಠಾಕೂರ್ ಪ್ರಾಣಾಪಾಯದಿಂದ ಪಾರಾಗಿದ್ದರು.