ನವದೆಹಲಿ: ದೇಶದಲ್ಲಿ ಹಾವು ಕಡಿತದಿಂದ ಪ್ರತಿ ವರ್ಷ ಸುಮಾರು 50 ಸಾವಿರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ವಿಶ್ವದಲ್ಲಿಯೇ ಅತಿ ಹೆಚ್ಚು ಎಂದು ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಅವರು ಸೋಮವಾರ ಸದನಕ್ಕೆ ಹೇಳಿದರು.
ಲೋಕಸಭೆಯಲ್ಲಿ ಮಹತ್ವದ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಿದ ಬಿಜೆಪಿ ಸಂಸದ, ಪ್ರತಿ ವರ್ಷ ಭಾರತದಲ್ಲಿ 30 ರಿಂದ 40 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಿದ್ದಾರೆ. ಇದರಲ್ಲಿ 50 ಸಾವಿರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಅಪಾಯಕಾರಿ ಮರಣ ಪ್ರಮಾಣ ಎಂದು ತಿಳಿಸಿದರು.
ರಾಜ್ಯವಾರು ಪೈಕಿ ಬಿಹಾರ ಇದರಲ್ಲಿ ಮೊದಲಿದೆ. ಇಲ್ಲಿನ ಪರಿಸರ ಮತ್ತು ನೈಸರ್ಗಿಕ ವಿಕೋಪ ಕಾರಣಕ್ಕೆ ಅನಾಹುತಗಳು ಸಂಭವಿಸುತ್ತಿವೆ. 28 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಹಾವು ಕಡಿತದ ಘಟನೆಗಳು ಹೆಚ್ಚುತ್ತಿವೆ. ಇದಕ್ಕೆ ಹವಾಮಾನ ಬದಲಾವಣೆ ಕಾರಣವಾಗಿದೆ. ಇದನ್ನು ತಡೆಯುವ ಮೂಲಕ ಅನೇಕ ಸಾವುಗಳನ್ನು ತಪ್ಪಿಸಬಹುದು ಎಂದು ಸದನದ ಗಮನ ಸೆಳೆದರು.
ನೀಟ್ಗೆ ವಿರೋಧ: ತಮಿಳುನಾಡಿನ ಕರೂರ್ ಸಂಸದೆ ಎಸ್. ಜ್ಯೋತಿಮಣಿ ಅವರು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗೆ ವಿರೋಧ ವ್ಯಕ್ತಪಡಿಸಿದರು. ಪ್ರಶ್ನೆ ಪತ್ರಿಕೆಯನ್ನು ಖರೀದಿಸಲು 25 ಲಕ್ಷ ರೂಪಾಯಿ ವೆಚ್ಚವಾಗುವುದರಿಂದ ಅದನ್ನು ನಿಭಾಯಿಸಬಲ್ಲವರು ಮಾತ್ರ NEET ಅನ್ನು ಪಾಸ್ ಮಾಡುತ್ತಾರೆ. ಉಳಿದವರು ಅರ್ಹತೆಯಿಂದ ವಂಚಿತರಾಗುತ್ತಾರೆ ಎಂದು ಅವರು ಪ್ರತಿಪಾದಿಸಿದರು.
ತಮಿಳುನಾಡಿನಲ್ಲಿ 18 ವಿದ್ಯಾರ್ಥಿಗಳು ನೀಟ್ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಅಸಮಾನತೆ ಹೊಂದಿರುವವರು ಪರೀಕ್ಷೆಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಈ ಪರೀಕ್ಷೆಯನ್ನೇ ರದ್ದು ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಬಾಂಗ್ಲಾ ವಲಸಿಗರನ್ನು ತಡೆಯಿರಿ: ಭಾರತದೊಳಗೆ ಬಾಂಗ್ಲಾದೇಶದಿಂದ ಅಕ್ರಮ ವಲಸೆ ಹೆಚ್ಚುತ್ತಿದೆ. ಇದರಿಂದ ಇಲ್ಲಿನ ಆದಿವಾಸಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದರ ವಿರುದ್ಧ ಪ್ರತಿಭಟಿಸಿದ ಆದಿವಾಸಿಗಳ ಮೇಲೆ ಹಲ್ಲೆ, ದಾಳಿ ನಡೆದಿವೆ ಎಂದು ಜಾರ್ಖಂಡ್ನಲ್ಲಿ ನಡೆದ ಘಟನೆಗಳನ್ನು ಉದಾಹರಿಸಿದರು.