ಪಂಜಾಬ್: ರೋಪರ್‌ನ ಐದು ವರ್ಷದ ತೇಗ್‌ಬೀರ್ ಸಿಂಗ್ ಎಂಬ ಬಾಲಕ ತಾಂಜಾನಿಯಾದಲ್ಲಿರುವ ಕಿಲಿಮಂಜಾರೋ ಪರ್ವತವನ್ನು ಏರಿದ ಏಷ್ಯಾದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಬರೋಬ್ಬರಿ 5,895 ಮೀಟರ್ ಎತ್ತರ ಇರುವ ಈ ಪರ್ವತವನ್ನು ಆಫ್ರಿಕಾ ಖಂಡದ ಅತಿ ಎತ್ತರದ ಶಿಖರವೆಂದು ಕರೆಯಲಾಗುತ್ತದೆ.
Proud of Teghbir Singh, 5-yr-old from #Ropar, #Punjab for becoming the youngest #Asian to conquer Mount #Kilimanjaro! His determination & resilience are an inspiration to us all. May his achievements motivate others to push beyond their limits & strive for greatness! #Inspiration pic.twitter.com/dxB4Gj8OKu
— DGP Punjab Police (@DGPPunjabPolice) August 26, 2024
ಏಷ್ಯಾ, ಭಾರತದ ಅತ್ಯಂತ ಕಿರಿಯ ಬಾಲಕ: ಈ ಸಾಧನೆ ಮಾಡುವ ಮೂಲಕ ತೇಗ್‌ಬೀರ್ ಕಳೆದ ವರ್ಷ ಆಗಸ್ಟ್ 6 ರಂದು 5ನೇ ವಯಸ್ಸಿನಲ್ಲಿ ಕಿಲಿಮಂಜಾರೋ ಪರ್ವತ ಏರಿದ ಸರ್ಬಿಯಾದ ಒಗಾಂಜೆನ್ ಜಿವ್ಕೊವಿಕ್ ನಿರ್ಮಿಸಿದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾನೆ. ಕಿಲಿಮಂಜಾರೋ ಪರ್ವತದ ಚಾರಣಕ್ಕಾಗಿ ವಿಶ್ವದ ಪೋರ್ಟಲ್ ಲಿಂಕ್ ಪ್ರಕಾರ, ತೇಗ್‌ಬೀರ್ ಏಷ್ಯಾ ಮತ್ತು ಭಾರತದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಎಂಬುದನ್ನು ಉಲ್ಲೇಖಿಸಿದೆ.
![5 year old Tegbir Singh of Rupnagar created a record by climbing the highest peak of the African continent](https://etvbharatimages.akamaized.net/etvbharat/prod-images/26-08-2024/pb-roop-father-bite-youngestmountaineer-record-holder-at-age-fivevisbite-pb10024_26082024122531_2608f_1724655331_910_2608newsroom_1724660348_170.jpg)
ಬಾಲಕ ತೇಗ್‌ಬೀರ್ ಸಿಂಗ್ ಈ ಯಶಸ್ಸಿನ ಶ್ರೇಯವನ್ನು ತಮ್ಮ ತರಬೇತುದಾರ ಬಿಕ್ರಮ್‌ಜಿತ್ ಸಿಂಗ್ ಘುಮಾನ್ ಅವರಿಗೆ ಅರ್ಪಿಸಿದರು. ''ನಿವೃತ್ತ ಹ್ಯಾಂಡ್‌ಬಾಲ್ ತರಬೇತುದಾರರಾಗಿರುವ ಬಿಕ್ರಮ್‌ಜಿತ್ ಸಿಂಗ್ ಅವರು ತಮ್ಮ ಪುತ್ರನಿಗೆ ಸಾಧನಾ ಮನೋಭಾವ ತುಂಬಿದ್ದರಿಂದ ಈ ಪರ್ವತ ಹತ್ತಲು ಸಾಧ್ಯವಾಯಿತು. ಈ ಪಯಣದಲ್ಲಿ ಸಾಕಷ್ಟು ಶ್ರಮವಿದೆ. ಒಂದು ವರ್ಷದ ಹಿಂದೆಯೇ ತಯಾರಿ ನಡೆಸಲಾಗಿತ್ತು. ದುರ್ಗಮವಾದ ಪರ್ವತಾರೋಹಣ ಮಾಡಲೆಂದೇ ಮಗುವಿಗೆ ಹೃದಯ ಮತ್ತು ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಲು ನಿರಂತರ ತರಬೇತಿ ನೀಡಲಾಗುತ್ತಿತ್ತು. ಅಭ್ಯಾಸವಾಗಲೆಂದು ಆರಂಭದಲ್ಲಿ ಅನೇಕ ಸ್ಥಳಗಳಿಗೆ ಟ್ರೆಕ್ಕಿಂಗ್‌ಗೆ ಕರೆದೊಯ್ಯಲಾಯಿತು. ಅದರ ನಂತರ ಈ ಪರ್ವತಾರೋಹಣಕ್ಕೆ ಯೋಜನೆ ಪ್ರಾರಂಭವಾಯಿತು'' ಎಂದು ತೇಗ್‌ಬೀರ್ ಸಿಂಗ್ ಕುಟುಂಬಸ್ಥರು ತಮ್ಮ ಪುತ್ರನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![5 year old Tegbir Singh of Rupnagar created a record by climbing the highest peak of the African continent](https://etvbharatimages.akamaized.net/etvbharat/prod-images/26-08-2024/pb-roop-youngestmountaineer-record-holder-at-age-fivevisbite-pb10024_26082024115020_2608f_1724653220_281_2608newsroom_1724660348_1074.jpg)
ಹೆಮ್ಮೆಯಿಂದ ತಲೆ ಎತ್ತಿದೆ: ''ನಾನು ಎಲ್ಲಿಗೆ ತಲುಪಬೇಕೆಂದು ನನಗೆ ತಿಳಿದಿತ್ತು. ಅಂತಿಮವಾಗಿ ಅದನ್ನು ಸಾಧಿಸಿದೆ. ದಾರಿಯಲ್ಲಿ ಕಷ್ಟವಾದಾಗ ‘ವಾಹೇ ಗುರು’ ಎಂದು ಜಪಿಸುವಂತೆ ಹೇಳಿದ್ದರು. ಇದು ನನಗೆ ಶಕ್ತಿ ನೀಡಿತು. ಆ ಶಕ್ತಿಯು ನನಗೆ ಶಿಖರವನ್ನು ಏರಲು ಸಹಾಯ ಮಾಡಿತು. ಇಂತಹ ದುರ್ಗಮವಾದ ಪರ್ವತಾರೋಹಣಕ್ಕೆ ಸಿದ್ಧತೆ ಬಹಳ ಅಗತ್ಯ. ಕಡಿಮೆ ಆಮ್ಲಜನಕದ ಜೊತೆಗೆ ಮೈನಸ್ 10 ತಾಪಮಾನ ಇರುವುದರಿಂದ ಕಾಯಿಲೆಗೆ ಬೀಳುವ ಸಧ್ಯತೆ ಹೆಚ್ಚು. ಅದಕ್ಕಾಗಿ ಕಳೆದ ಒಂದು ವರ್ಷದಿಂದ ತಯಾರಿ ನಡೆಸಿದ್ದೆ. ಪರ್ವತಾರೋಹಣದ ವೇಳೆ ಏನೆಲ್ಲಾ ಸಮಸ್ಯೆಗಳು ಎದುರಾಗಬಹುದು ಎಂಬುದನ್ನು ಅರಿತಿದ್ದೆ. ಉಸಿರಾಟದ ವಿಧಾನಗಳನ್ನು ತಿಳಿದುಕೊಂಡಿದ್ದೆ. ಹಲವು ಸವಾಲುಗಳ ನಡುವೆಯೂ ಪರ್ವತವನ್ನು ಏರಿದೆ. ಹೆಮ್ಮೆ ಅನ್ನಿಸಿತು. ಗುರಿ ತಲುಪಿದ ತಕ್ಷಣ ಗರ್ವದಿಂದ ಹಲೆ ಎತ್ತಿದೆ'' ಎಂದು ಸಾಧಕ ತೇಗ್‌ಬೀರ್ ಸಿಂಗ್ ತನ್ನ ಅನುಭವ ಹೊಂಚಿಕೊಂಡಿದ್ದಾನೆ.
![5 year old Tegbir Singh of Rupnagar created a record by climbing the highest peak of the African continent](https://etvbharatimages.akamaized.net/etvbharat/prod-images/26-08-2024/pb-roop-youngestmountaineer-record-holder-at-age-fivevisbite-pb10024_26082024115020_2608f_1724653220_284_2608newsroom_1724660348_682.jpg)
ಆ. 18 ರಂದು ಪರ್ವತ ಏರಲು ಪ್ರಯಾಣ ಬೆಳೆಸಿದೆವು. ಸತತ ಆರು ದಿನಗಳ ಬಳಿಕ ಆಗಸ್ಟ್ 23 ರಂದು ಕಿಲಿಮಂಜಾರೋದ ಉಹುರು ಪರ್ವತ ತಲುಪಿದೆವು. ಆರಂಭದಲ್ಲಿ ಭೀಕರ ಹಿಮಪಾತ ಎದುರಿಸಿದೆವು. ಆದರೂ, ಸವಾಲಿನ ಹವಾಮಾನದ ಹೊರತಾಗಿಯೂ ಶಿಖರವನ್ನು ಏರಿದೆವು ಎಂದು ಪರ್ವತಾರೋಹಿಗಳ ತಂಡ ಹೇಳಿಕೊಂಡಿದೆ.
![5 year old Tegbir Singh of Rupnagar created a record by climbing the highest peak of the African continent](https://etvbharatimages.akamaized.net/etvbharat/prod-images/26-08-2024/pb-roop-youngestmountaineer-record-holder-at-age-fivevisbite-pb10024_26082024115020_2608f_1724653220_608_2608newsroom_1724660348_1078.jpg)
ಪಂಜಾಬ್ ಡಿಜಿಪಿ ಗೌರವ್ ಯಾದವ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಬಾಲ ಪರ್ವತಾರೋಹಿಗೆ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ''ಅವರ ಸಂಕಲ್ಪ ಮತ್ತು ಸ್ಥೈರ್ಯ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಅವರ ಸಾಧನೆ ಇತರರನ್ನು ಮುನ್ನಡೆಸಲು ಪ್ರೇರೇಪಿಸುತ್ತದೆ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಎಟ್ನಾದ ಜ್ವಾಲಾಮುಖಿ ಪರ್ವತ ಏರಿ ತ್ರಿವರ್ಣ ಧ್ವಜ ಹಾರಿಸಿದ ರಾಜಸ್ಥಾನದ ಧೋಲಿ ಮೀನಾ