ತಿರುವನಂತಪುರಂ(ಕೇರಳ): ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮನೆಯಿಂದಲೇ ಮತದಾನ ಪ್ರಕ್ರಿಯೆ ವೇಳೆ ಎಡವಟ್ಟು ಮಾಡಿದ ಕೇರಳದ ಐವರು ಅಧಿಕಾರಿಗಳ ತಲೆದಂಡವಾಗಿದೆ. 92 ವರ್ಷದ ಮಹಿಳೆಗೆ ಮನೆಯಿಂದಲೇ ವೋಟ್ ಮಾಡಲು ಸಿಪಿಐ-ಎಂ ಪೋಲಿಂಗ್ ಏಜೆಂಟ್ ಸಹಾಯ ಮಾಡಿದ್ದನ್ನು ಕಣ್ಣೂರು ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಪತ್ತೆ ಹಚ್ಚಿದ್ದಾರೆ. ಇದರ ಬೆನ್ನಲ್ಲೇ, ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಶುಕ್ರವಾರ ಐವರು ಚುನಾವಣಾಧಿಕಾರಿಗಳನ್ನು ಡಿಇಒ ಅಮಾನತುಗೊಳಿಸಿದ್ದಾರೆ.
ದೇಶಾದ್ಯಂತ 18ನೇ ಲೋಕಸಭೆಗೆ ಏಳು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ಚುನಾವಣಾ ನಿಯಮಗಳಂತೆ, 85 ವರ್ಷ ಮೇಲ್ಪಟ್ಟ ಮತದಾರರು ತಮ್ಮ ಮನೆಯಿಂದಲೇ ಮತದಾನ ಮಾಡಬಹುದು. ಆದರೆ, ಕಣ್ಣೂರು ಜಿಲ್ಲೆಯ ಕಾಸರಗೋಡು ಲೋಕಸಭಾ ಕ್ಷೇತ್ರದ ಬೂತ್ ನಂ.164ರ ವ್ಯಾಪ್ತಿಯಲ್ಲಿ ಬರುವ 92 ವರ್ಷ ವಯಸ್ಸಿನ ದೇವಿ ಎಂಬವರ ಮನೆಗೆ ಮತ ಪಡೆಯಲು ಚುನಾವಣಾ ಅಧಿಕಾರಿಗಳು ಬಂದಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಸಿಪಿಐ-ಎಂ ಮುಖಂಡ ಗಣೇಶನ್ ವೃದ್ಧೆಗೆ ಮತ ಚಲಾಯಿಸಲು ಸಹಾಯ ಮಾಡಿರುವ ದೃಶ್ಯಗಳು ಸೆರೆಯಾಗಿವೆ.
ನಿಯಮಗಳ ಪ್ರಕಾರ, ಯಾವುದೇ ಪಕ್ಷದ ಪೋಲಿಂಗ್ ಏಜೆಂಟ್‌ಗಳು ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಸಹಾಯ ಮಾಡುವಂತಿಲ್ಲ. ಹೀಗಾಗಿ ವೃದ್ಧೆ ಮತ ಚಲಾವಣೆ ಮಾಡುವ ಸಂದರ್ಭದಲ್ಲಿ ನೆರವಾಗಲು ರಾಜಕೀಯ ಪಕ್ಷದ ಮುಖಂಡನಿಗೆ ಅವಕಾಶ ಮಾಡಿಕೊಟ್ಟು ಎಡವಟ್ಟು ಮಾಡಿದ್ದಾರೆ. ಮತ್ತೊಂದೆಡೆ, ಈ ಘಟನೆ ಬಗ್ಗೆ ಮೇಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. ಇದರಲ್ಲಿ ಐವರು ಚುನಾವಣಾಧಿಕಾರಿಗಳು ಕರ್ತವ್ಯಲೋಪ ಎಸಗಿದ್ದು ಕಂಡುಬಂದಿದೆ. ಮತದಾನದ ಸಮಯದಲ್ಲಿ ಗೌಪ್ಯತೆಯನ್ನು ಉಲ್ಲಂಘಿಸಿರುವುದು ದೃಢಪಟ್ಟಿದೆ ಎಂದು ತನಿಖಾ ವರದಿ ಸಲ್ಲಿಸಲಾಗಿದೆ.
ಇದರ ಆಧಾರದ ಮೇಲೆ ವಿಶೇಷ ಮತಗಟ್ಟೆ ಅಧಿಕಾರಿ, ಮತಗಟ್ಟೆ ಸಹಾಯಕ, ಮೈಕ್ರೋ ವೀಕ್ಷಕ, ವಿಶೇಷ ಪೊಲೀಸ್ ಅಧಿಕಾರಿ ಮತ್ತು ವಿಡಿಯೋಗ್ರಾಫರ್ನನ್ನು ಅಮಾನತುಗೊಳಿಸಲಾಗಿದೆ. ಗಣೇಶನ್ ವಿರುದ್ಧ ಸ್ಥಳೀಯ ಪೊಲೀಸರು ಕೂಡಾ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದ್ದಾರೆ.(ಐಎಎನ್ಎಸ್)