ಅನಕಪಲ್ಲಿ(ಆಂಧ್ರ ಪ್ರದೇಶ): ಇಲ್ಲಿನ ಅನಾಥಾಶ್ರಮದಲ್ಲಿ ಸಂಜೆ ವೇಳೆ ಸ್ನಾಕ್ಸ್ ಆಗಿ ಕೊಟ್ಟ ಕುರುಕಲು ತಿಂಡಿ ಸಮೋಸ ತಿಂದು 27 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ದುರ್ದೈವವಶಾತ್ ಮೂವರು ಮಕ್ಕಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಆಂಧ್ರ ಪ್ರದೇಶದ ಅನಕಪಲ್ಲಿ ಜಿಲ್ಲೆಯ ಕೈಲಾಸಪಟ್ಟಣಂ ಎಂಬಲ್ಲಿ ಕ್ರಿಶ್ಚಿಯನ್ ಸಂಘಟನೆ ಈ ಅನಾಥಾಶ್ರಮವನ್ನು ನಡೆಸುತ್ತಿದೆ. ವಸತಿ ಮತ್ತು ಶಿಕ್ಷಣವನ್ನೂ ನೀಡುತ್ತಿರುವ ಸಂಸ್ಥೆಯಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಶನಿವಾರ ಸಂಜೆ ಉಪಾಹಾರಕ್ಕೆ ಸಮೋಸ ತಿಂಡಿ ನೀಡಲಾಗಿದೆ. ಇದನ್ನು ತಿಂದ ಬಳಿಕ ವಿದ್ಯಾರ್ಥಿಗಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಮೊದಲು ನಾಲ್ವರು ಮಕ್ಕಳು ತೀವ್ರ ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿದ ಸಂಘಟಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದರ ಬಳಿಕ ಇನ್ನೂ 23 ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಉಂಟಾಗಿದೆ. ಎಲ್ಲರನ್ನೂ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದರಲ್ಲಿ ನಾಲ್ವರು ಮಕ್ಕಳು ಸೋಮವಾರ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಮೃತರನ್ನು ಚಿಂತಪಲ್ಲಿ ಮಂಡಲದ ನಿಮ್ಮಲಪಾಲೆಂನ ಜೋಶುವಾ, ಕೊಯ್ಯೂರು ಮಂಡಲದ ಭವಾನಿ ಮತ್ತು ಚಿಂತಪಲ್ಲಿಯ ಶ್ರದ್ಧಾ ಮತ್ತು ನಿತ್ಯಾ ಎಂದು ಗುರುತಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಲ್ಲಿ ಕೆಲವರು ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಕಲುಷಿತವಾಗಿತ್ತಾ ಸಮೋಸ ತಿಂಡಿ?: ಕುರುಕಲು ತಿಂಡಿಯಾದ ಸಮೋಸಾದಲ್ಲಿ ಕಲುಷಿತ ಸೇರಿರುವ ಶಂಕೆ ಇದೆ. ಇದರಿಂದ ಮಕ್ಕಳಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಸದ್ಯ ಮಕ್ಕಳಿಗೆ ಉತ್ತಮ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ಎಲ್ಲ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ಮುಂದುವರಿಸಲಾಗಿದೆ.
ಇನ್ನು, ಘಟನೆಯ ಬಗ್ಗೆ ಮಾಹಿತಿ ಪಡೆದ ಅನಕಾಪಲ್ಲಿ ಜಿಲ್ಲಾಧಿಕಾರಿ, ಆರ್ಡಿಒ ಆಘಾತ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವೆ ಅನಿತಾ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಜೊತೆಗೆ ಸಂಪರ್ಕ ಸಾಧಿಸಿ ಮಕ್ಕಳಿಗೆ ಉತ್ತಮ ಚಿಕಿತ್ಸೆ ಲಭ್ಯವಾಗುವಂತೆ ಕ್ರಮ ವಹಿಸಲು ಸೂಚಿಸಿದ್ದಾರೆ.
ಕ್ರೈಸ್ತ ಸಂಘಟನೆ ನಡೆಸುತ್ತಿರುವ ಈ ಅನಾಥಾಶ್ರಮದಲ್ಲಿ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಚಿಂತಪಲ್ಲಿ, ಕೊಯ್ಯೂರು, ಗುಡೆಂ ಕೋಠಾ ವೀಧಿ, ಪಾಡೇರು, ಅರಕು, ಮಂಡಲಗಳ ಬುಡಕಟ್ಟು ಜನಾಂಗದ ಮಕ್ಕಳು ಇದ್ದಾರೆ. ಇಲ್ಲಿಯೇ ಅವರಿಗೆ ವಸತಿ ಮತ್ತು ಶಿಕ್ಷಣವನ್ನು ಒದಗಿಸಲಾಗುತ್ತಿದೆ. ನೀಡಿದ ಆಹಾರ ಕಲುಷಿತವಾಗಿತ್ತಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.
ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತ; ಕಾಂಗ್ರೆಸ್ ಮುಖಂಡ ಸಾವು - Heart Attack