ಜೈಪುರ (ರಾಜಸ್ಥಾನ) : ಇಲ್ಲಿನ ಬಾಲಾಪರಾಧಿ ಗೃಹದಲ್ಲಿದ್ದ 22 ಅಪ್ರಾಪ್ತ ಅಪರಾಧಿಗಳು ಕಿಟಕಿಯ ಮೂಲಕ ಪರಾರಿಯಾದ ಘಟನೆ ಮಂಗಳವಾರ ನಸುಕಿನ ಜಾವ ನಡೆದಿದೆ. ಪರಾರಿಯಾದವರ ಪೈಕಿ 8 ಬಾಲಕರ ವಿರುದ್ಧ ಅತ್ಯಾಚಾರ ಕೇಸ್, 13 ಮಂದಿ ಮೇಲೆ ಕೊಲೆ ಯತ್ನದ ತನಿಖೆ ನಡೆಯುತ್ತಿದೆ. ಮತ್ತೋರ್ವ ಅಪ್ರಾಪ್ತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಬಾಲಾಪರಾಧಿ ಗೃಹದಲ್ಲಿದ್ದ ಮಕ್ಕಳು ನಾಪತ್ತೆಯಾದಾಗ ಆತಂಕಗೊಂಡ ಅಲ್ಲಿನ ಸಿಬ್ಬಂದಿ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಾರಿಯಾದ ಅಪ್ರಾಪ್ತರ ಹುಡುಕಾಟ ನಡೆಸಲಾಗುತ್ತಿದೆ. ಅಪ್ರಾಪ್ತರ ಮನೆ, ಕುಟುಂಬಗಳಿಗೆ ಮಾಹಿತಿ ರವಾನಿಸಲಾಗಿದೆ.
ಜೈಪುರದ ಸೇಥಿ ಕಾಲೋನಿಯಲ್ಲಿರುವ ಬಾಲಾಪರಾಧಿ ಗೃಹದಲ್ಲಿ ವಿವಿಧ ಪ್ರಕರಣಗಳಲ್ಲಿ ವಿಚಾರಣೆಗೆ ಒಳಪಟ್ಟಿರುವ ಬಾಲಾಪರಾಧಿಗಳನ್ನು ಇಡಲಾಗಿತ್ತು. ಹಲವರ ಮೇಲೆ ಗಂಭೀರ ಸ್ವರೂಪದ ಆರೋಪಗಳಿವೆ. ಓರ್ವ ಕೊಲೆ ಕೇಸ್ನಲ್ಲಿ ಆರೋಪಿ ಕೂಡ ಹೌದು. 8 ಬಾಲಕರು ರೇಪ್ ಕೇಸ್ನಂತಹ ಸೂಕ್ಷ್ಮ ಕೇಸ್ನಲ್ಲಿ ಅಪರಾಧಿಗಳಾಗಿದ್ದಾರೆ. ಮಂಗಳವಾರ ನಸುಕಿನ ಜಾವ 4 ರಿಂದ 5 ಗಂಟೆಯ ನಡುವೆ ಗೃಹದ ಕಿಟಕಿಯನ್ನು ಕತ್ತರಿಸಿ, ಅದರ ಮೂಲಕ ಪರಾರಿಯಾಗಿದ್ದಾರೆ.
ಕ್ರಿಮಿನಲ್ ಯೋಚನೆ: ಬಾಲಾಪರಾಧಿಗಳು ಜೈಲಿನ ಹಿಂಭಾಗದ ಕಿಟಕಿಯನ್ನು ಕತ್ತರಿಸಿ ಅದರ ಮೂಲಕ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಇದು ಕ್ರಿಮಿನಲ್ ಚಿಂತನೆಯಾಗಿದೆ. ತಪ್ಪಿಸಿಕೊಂಡ ಅಪರಾಧಿಗಳನ್ನು ಪತ್ತೆ ಮಾಡಲು ಪೊಲೀಸ್ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ 4 ರಿಂದ 5 ಗಂಟೆಯ ನಡುವೆ ಬಾಲಾಪರಾಧಿಗಳು ಪರಾರಿಯಾಗಿದ್ದಾರೆ. ಮಾಹಿತಿ ಪಡೆಯಲಾಗಿದ್ದು, ಬಾಲಾಪರಾಧಿ ಗೃಹದಿಂದ ಅಪ್ರಾಪ್ತರ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಏಕಕಾಲಕ್ಕೆ ಇಷ್ಟೊಂದು ಅಪರಾಧಿಗಳು ಬಾಲಾಪರಾಧಿಗೃಹದಿಂದ ಪರಾರಿಯಾಗಿರುವುದು ಇದೇ ಮೊದಲಾಗಿದೆ. ಹೊರಗಿನಿಂದ ಕೆಲವರು ಅಪ್ರಾಪ್ತರನ್ನು ಬಿಡುಗಡೆ ಮಾಡಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಾಪರಾಧಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ತಪ್ಪಿಸಿಕೊಂಡವರ ಮನೆಗಳಿಗೆ ಮತ್ತು ಅಡಗುತಾಣಗಳಲ್ಲಿ ಹುಡುಕಾಟ ನಡೆಸಲಾಗಿದೆ. ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ತಪ್ಪಿಸಿಕೊಂಡವರ ವಿರುದ್ಧ ದೂರು ದಾಖಲಿಸಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗುವುದು. ಈ ಮಧ್ಯೆ ಬಾಲಾಪರಾಧಿ ಗೃಹದ ಸಿಬ್ಬಂದಿಯನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಡಿಸಿಪಿ ಜ್ಞಾನಚಂದ್ ಯಾದವ್ ಹೇಳಿದರು.
ಇದನ್ನೂ ಓದಿ; ಭಾರತೀಯ ನೌಕಾಪಡೆ ಮಾಜಿ ಸಿಬ್ಬಂದಿ ಬಿಡುಗಡೆ ಬೆನ್ನಲ್ಲೇ ಫೆ.14ರಂದು ಮೋದಿ ಕತಾರ್ ಭೇಟಿ