ನವದೆಹಲಿ: ಇತ್ತೀಚೆಗೆ ಮುಕ್ತಾಯವಾದ 18 ನೇ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಯಾದ ಒಟ್ಟು 543 ಅಭ್ಯರ್ಥಿಗಳ ಪೈಕಿ ಕೇವಲ ಶೇ 14 ರಷ್ಟು ಅಂದರೆ 74 ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನು ಈ 543 ಹೊಸ ಸಂಸದರ ಪೈಕಿ 251 (ಶೇ 46) ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, 504 (ಶೇ 93) ಸಂಸದರು ಕೋಟ್ಯಧಿಪತಿಗಳಾಗಿದ್ದಾರೆ.
ಕ್ರಿಮಿನಲ್ ಪ್ರಕರಣ ಹೊಂದಿದ ಸಂಸದರ ಮಾಹಿತಿ:
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನ ಇತ್ತೀಚಿನ ವರದಿಯ ಪ್ರಕಾರ, 2024 ರ ಲೋಕಸಭಾ ಚುನಾವಣೆಯಲ್ಲಿ ವಿಜೇತ 543 ಅಭ್ಯರ್ಥಿಗಳಲ್ಲಿ, 251 (46%) ವಿಜೇತ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದ 170 (31%) ಅಭ್ಯರ್ಥಿಗಳು ತಮ್ಮ ವಿರುದ್ಧ ಅತ್ಯಾಚಾರ, ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದಾಗಿ ಘೋಷಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಯಾಗಿದ್ದ 539 ಸಂಸದರ ಪೈಕಿ 233 (ಶೇ.43) ಸಂಸದರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿಕೊಂಡಿದ್ದರು.
ಈಗಿನ ಲೋಕಸಭೆಯನ್ನು ಅವಲೋಕಿಸುವುದಾದರೆ, ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಪಕ್ಷವಾರು ಸಂಸದರ ಸಂಖ್ಯೆ ಹೀಗಿದೆ: ಬಿಜೆಪಿಯ 240 ವಿಜೇತ ಅಭ್ಯರ್ಥಿಗಳ ಪೈಕಿ ಶೇ 26 ಅಂದರೆ 63 ಅಭ್ಯರ್ಥಿಗಳ ವಿರುದ್ಧ, ಕಾಂಗ್ರೆಸ್ನ 99 ವಿಜೇತ ಅಭ್ಯರ್ಥಿಗಳ ಪೈಕಿ ಶೇ 32 ಅಂದರೆ 32 ಅಭ್ಯರ್ಥಿಗಳ ವಿರುದ್ದ, ಎಸ್ಪಿಯ 37 ವಿಜೇತ ಅಭ್ಯರ್ಥಿಗಳ ಪೈಕಿ ಶೇ 46 ಅಂದರೆ 17 ಅಭ್ಯರ್ಥಿಗಳ ವಿರುದ್ಧ ಮತ್ತು ತೃಣಮೂಲ ಕಾಂಗ್ರೆಸ್ನ 29 ವಿಜೇತ ಅಭ್ಯರ್ಥಿಗಳ ಪೈಕಿ ಶೇ 24 ಅಂದರೆ 7 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಸಂಸದರ ಹಣಕಾಸು ಹಿನ್ನೆಲೆ:
543 ವಿಜೇತ ಅಭ್ಯರ್ಥಿಗಳ ಪೈಕಿ 504 (ಶೇ 93) ಮಂದಿ ಕೋಟ್ಯಧಿಪತಿಗಳಾಗಿದ್ಧಾರೆ. 2019ರ ಲೋಕಸಭಾ ಚುನಾವಣೆಯಲ್ಲಿ 539 ಸಂಸದರ ಪೈಕಿ 475 (ಶೇ 88) ಸಂಸದರು ಕೋಟ್ಯಧಿಪತಿಗಳಾಗಿದ್ದರು.
ಆಡಳಿತಾರೂಢ ಪಕ್ಷ ಬಿಜೆಪಿಯ 240 ವಿಜೇತ ಅಭ್ಯರ್ಥಿಗಳಲ್ಲಿ 227 (95%), ಕಾಂಗ್ರೆಸ್ ನ 99 ವಿಜೇತ ಅಭ್ಯರ್ಥಿಗಳಲ್ಲಿ 92 (93%), ಡಿಎಂಕೆಯ 22 ವಿಜೇತ ಅಭ್ಯರ್ಥಿಗಳಲ್ಲಿ 21 (95%), ತೃಣಮೂಲ ಕಾಂಗ್ರೆಸ್ ಕಣಕ್ಕಿಳಿಸಿದ 29 ವಿಜೇತ ಅಭ್ಯರ್ಥಿಗಳಲ್ಲಿ 27 (93%), ಎಎಪಿಯ 3 ವಿಜೇತ ಅಭ್ಯರ್ಥಿಗಳಲ್ಲಿ 3 (100%), ಜೆಡಿಯುನ 12 ವಿಜೇತ ಅಭ್ಯರ್ಥಿಗಳಲ್ಲಿ 12 (100%) ಮತ್ತು ಟಿಡಿಪಿಯ 16 (100%) ವಿಜೇತ ಅಭ್ಯರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ.
ಈ ಪಟ್ಟಿಯಲ್ಲಿ ಮೊದಲ ಮೂರು ಶ್ರೀಮಂತ ಅಭ್ಯರ್ಥಿಗಳ ಪೈಕಿ ಟಿಡಿಪಿಯ ಡಾ. ಚಂದ್ರಶೇಖರ್ ಪೆಮ್ಮಸಾನಿ 5705 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣದ ಕೊಂಡಾ ವಿಶ್ವೇಶ್ವರ ರೆಡ್ಡಿ (ಬಿಜೆಪಿ) 4568 ಕೋಟಿ ರೂ.ಗಿಂತ ಹೆಚ್ಚು ಆಸ್ತಿಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬಿಜೆಪಿಯ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ (ಹರಿಯಾಣ) 1241 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. ಟಾಪ್ 10 ಶ್ರೀಮಂತ ಅಭ್ಯರ್ಥಿಗಳ ಪೈಕಿ ಐವರು ಬಿಜೆಪಿ, ಮೂವರು ಟಿಡಿಪಿ ಮತ್ತು ಇಬ್ಬರು ಕಾಂಗ್ರೆಸ್ನವರು.
ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಜ್ಯೋತಿರ್ಮಯ್ ಸಿಂಗ್ ಮಹತೋ 5 ಲಕ್ಷ ರೂ., ಟಿಎಂಸಿಯ ಮಿಥಾಲಿ ಬಾಗ್ 7 ಲಕ್ಷ ರೂ. ಮತ್ತು ಸಮಾಜವಾದಿ ಪಕ್ಷದ ಪ್ರಿಯಾ ಸರೋಜ್ 11 ಲಕ್ಷ ರೂ. ಸಂಪತ್ತಿನೊಂದಿಗೆ ಅತಿ ಕಡಿಮೆ ಆಸ್ತಿ ಹೊಂದಿರುವ ಸಂಸದರ ಪೈಕಿ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.
2024 ರ ಲೋಕಸಭಾ ಚುನಾವಣೆಯಲ್ಲಿ ಪ್ರತಿ ವಿಜೇತ ಅಭ್ಯರ್ಥಿಯ ಸರಾಸರಿ ಆಸ್ತಿ 46.34 ಕೋಟಿ ರೂ.ಆಗಿದೆ. ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿಯ 240 ವಿಜೇತ ಅಭ್ಯರ್ಥಿಗಳ ಸರಾಸರಿ ಆಸ್ತಿ 50.04 ಕೋಟಿ ರೂ., 99 ಕಾಂಗ್ರೆಸ್ ವಿಜೇತ ಅಭ್ಯರ್ಥಿಗಳ ಸರಾಸರಿ ಆಸ್ತಿ 22.93 ಕೋಟಿ ರೂ., ಸಮಾಜವಾದಿ ಪಕ್ಷದ 37 ವಿಜೇತ ಅಭ್ಯರ್ಥಿಗಳ ಸರಾಸರಿ ಆಸ್ತಿ 15.24 ಕೋಟಿ ರೂ., 29 ಟಿಎಂಸಿ ವಿಜೇತ ಅಭ್ಯರ್ಥಿಗಳ ಸರಾಸರಿ ಆಸ್ತಿ 17.98 ಕೋಟಿ ರೂ. ಆಗಿದೆ.
ಲಿಂಗವಾರು ಮಾಹಿತಿ:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಶೇ 14 ಅಂದರೆ 74 ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಪೈಕಿ ಬಿಜೆಪಿ 31 (13%), ಕಾಂಗ್ರೆಸ್ನ 13 (13%), ಟಿಎಂಸಿಯ 11 (38%), ಸಮಾಜವಾದಿ ಪಕ್ಷದ 5 (14%), ಎಲ್ಜೆಪಿಯ (ರಾಮ್ ವಿಲಾಸ್) 2 (40%) ಮತ್ತು ಇತರ ಅಭ್ಯರ್ಥಿಗಳು ಇದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ 539 ಸಂಸದರ ಪೈಕಿ 77 (14%) ಸಂಸದರು ಮಹಿಳೆಯರಾಗಿದ್ದರು. ಅದೇ ರೀತಿ 2014 ಮತ್ತು 2009 ರಲ್ಲಿ ಅನುಕ್ರಮವಾಗಿ ಈ ಪ್ರಮಾಣ ಶೇ 14 ಮತ್ತು ಶೇ 11ರಷ್ಟಿತ್ತು.
ಸಂಸದರ ಶೈಕ್ಷಣಿಕ ವಿವರಗಳು:
ವಿಜೇತ ಅಭ್ಯರ್ಥಿಗಳ ಪೈಕಿ 105 (19%) ಅಭ್ಯರ್ಥಿಗಳು 5 ನೇ ತರಗತಿ ತೇರ್ಗಡೆಯಿಂದ 12 ನೇ ತರಗತಿ ತೇರ್ಗಡೆಯಾಗಿರುವುದಾಗಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು ಘೋಷಿಸಿದ್ದಾರೆ. 420 (77%) ವಿಜೇತ ಅಭ್ಯರ್ಥಿಗಳು ಪದವಿ ಮತ್ತು ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ. 17 ವಿಜೇತ ಅಭ್ಯರ್ಥಿಗಳು ಡಿಪ್ಲೊಮಾ ಪದವೀಧರರು ಮತ್ತು ಓರ್ವ ವಿಜೇತ ಅಭ್ಯರ್ಥಿ ತಾನು ಕೇವಲ ಸಾಕ್ಷರನೆಂದು ಘೋಷಿಸಿಕೊಂಡಿದ್ದಾನೆ.
ವಯಸ್ಸುವಾರು ಮಾಹಿತಿ:
ವಿಜೇತ ಅಭ್ಯರ್ಥಿಗಳ ಪೈಕಿ 58 (11%) ಅಭ್ಯರ್ಥಿಗಳು 25 ರಿಂದ 40 ವರ್ಷ ವಯೋಮಾನದವರಾಗಿದ್ದರೆ, 280 (52%) ವಿಜೇತ ಅಭ್ಯರ್ಥಿಗಳು 41 ರಿಂದ 60 ವರ್ಷಗಳ ವಯೋಮಾನದವರಾಗಿದ್ದಾರೆ. ಹಾಗೆಯೇ 204 (38%) ವಿಜೇತ ಅಭ್ಯರ್ಥಿಗಳು ತಮ್ಮ ವಯಸ್ಸನ್ನು 61 ರಿಂದ 80 ವರ್ಷಗಳ ನಡುವೆ ಘೋಷಿಸಿದ್ದಾರೆ ಮತ್ತು ಓರ್ವ ವಿಜೇತ ಅಭ್ಯರ್ಥಿಯು ತನ್ನ ವಯಸ್ಸನ್ನು 82 ವರ್ಷ ಎಂದು ಘೋಷಿಸಿದ್ದಾರೆ.