ಕಂಕೇರ್(ಛತ್ತೀಸ್‌ಗಢ): ನಕ್ಸಲ್‌ಪೀಡಿತ ಛತ್ತೀಸ್‌ಗಢದಲ್ಲಿ ಗುಂಡಿನ ಕಾಳಗ ಮುಂದುವರೆದಿದೆ. ಇಂದು ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 29 ನಕ್ಸಲರು ಹತರಾಗಿದ್ದಾರೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ತಿಳಿಸಿದೆ.
ಇಲ್ಲಿನ ಛೋಟೆಬೆಥಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿನಗುಂದ ಮತ್ತು ಕೊರೊನಾರ್ ಗ್ರಾಮಗಳ ನಡುವಿನ ಹಪಟೋಲಾ ಅರಣ್ಯದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯ ಪೊಲೀಸರ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಜಂಟಿ ತಂಡವು ನಕ್ಸಲ್ ನಿಗ್ರಹ ಕಾರ್ಯಾಚರಣೆ ಕೈಗೊಂಡಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆಯಿತು ಎಂದು ಬಿಎಸ್‌ಎಫ್ ಹೇಳಿಕೆ ಬಿಡುಗಡೆ ಮಾಡಿದೆ.
ಈ ಕಾಳಗದಲ್ಲಿ ಮೂವರು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಒಬ್ಬ ಬಿಎಸ್‌ಎಫ್ ಸಿಬ್ಬಂದಿಯ ಕಾಲಿಗೆ ಗುಂಡು ತಗುಲಿದೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಎನ್‌ಕೌಂಟರ್ ಸ್ಥಳದಲ್ಲಿ ಎಲ್ಲ 29 ನಕ್ಸಲರ ಮೃತದೇಹಗಳು ಪತ್ತೆಯಾಗಿವೆ. ಏಳು ಎಕೆ ಸರಣಿಯ ರೈಫಲ್‌ಗಳು ಮತ್ತು ಮೂರು ಲೈಟ್ ಮೆಷಿನ್ ಗನ್‌ಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಸ್ತಾರ್ ಐಜಿ ಸುಂದರರಾಜ್ ಪಿ, ''ಕಂಕೇರ್‌ನ ಛೋಟಾಬೆಥಿಯಾದಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆದಿದೆ. ಈ ಎನ್‌ಕೌಂಟರ್‌ನಲ್ಲಿ 29 ನಕ್ಸಲರು ಹತರಾಗಿದ್ದಾರೆ. ಮೂವರು ಸೈನಿಕರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಹತ್ಯೆಯಾದ ಮಾವೋವಾದಿಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗಿದೆ'' ಎಂದು ತಿಳಿಸಿದರು.
ನಕ್ಸಲರ ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗಬಹುದು. ಛೋಟೆಬೆಥಿಯಾದಲ್ಲಿ ನಕ್ಸಲರು ಸೋಮವಾರ ಗ್ರಾಮಸ್ಥನನ್ನು ಕೊಲೆ ಮಾಡಿದ್ದರು. ಅಂದಿನಿಂದ ಈ ಪ್ರದೇಶದಲ್ಲಿ ನಿರಂತರ ಆತಂಕದ ವಾತಾವರಣವಿದ್ದು, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಎನ್‌ಕೌಂಟರ್ ನಡೆದಿದೆ.
ಮತ್ತೊಂದು ಘಟನೆಯಲ್ಲಿ, ಇದೇ ಕಂಕೇರ್ ಪಕ್ಕದ ಮಾದ್ ಪ್ರದೇಶದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವಿನ ಎನ್‌ಕೌಂಟರ್ ಜರುಗಿದೆ. ಇದರಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ ಒಡಿಶಾದ ಧಮ್ತಾರಿ ಗಡಿಯಲ್ಲಿ ಪೊಲೀಸರು ಮತ್ತು ನಕ್ಸಲರು ನಡುವೆ ಎನ್‌ಕೌಂಟರ್ ನಡೆದಿತ್ತು.
ಇದೇ ತಿಂಗಳ ಆರಂಭದಿಂದಲೂ ಛತ್ತೀಸ್‌ಗಢದಲ್ಲಿ ಗುಂಡಿನ ಸದ್ದು ಕೇಳುತ್ತಿದೆ. ಏಪ್ರಿಲ್ 2ರಿಂದ ಮೂರು ದಿನಗಳ ಕಾಲ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ 13 ಮಂದಿ ನಕ್ಸಲರನ್ನು ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ: ಛತ್ತೀಸ್‌ಗಢ: ಮೂರು ದಿನದ ಕಾರ್ಯಾಚರಣೆಯಲ್ಲಿ 13 ಮಂದಿ ನಕ್ಸಲರು ಹತ