ತಿರುಪ್ಪೂರು (ತಮಿಳುನಾಡು): ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ. 17 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ಸೇರಿದಂತೆ 9 ಮಂದಿ ಸಾಮೂಹಿಕ ಅತ್ಯಾಚಾರ ಎಸಲಾಗಿದೆ. ಇದೀಗ ಸಂತ್ರಸ್ತೆ 4 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ವರದಿಯಾಗಿದೆ.
ಸಂತ್ರಸ್ತ ಬಾಲಕಿ ತನ್ನ ಅಜ್ಜನ ಮನೆಯಲ್ಲಿ ವಾಸಿಸುತ್ತಿದ್ದಳು. ಕಳೆದ ಕೆಲ ದಿನಗಳಿಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಇದರಿಂದ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ. ಆಗ ಬಾಲಕಿ 4 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಾಲಕಿಯನ್ನು ವಿಚಾರಣೆ ನಡೆಸಿದಾಗ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕೃತ್ಯವನ್ನು ತಿಳಿಸಿದ್ದಾರೆ.
ಇದರಿಂದ ಆಘಾತಗೊಂಡ ಬಾಲಕಿಯ ಅಜ್ಜ ಉಡುಮಲೈ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ, ಪ್ರಕಾಶ್ (24), ಭಾವ ಭಾರತಿ (22), ಪರಣಿಕುಮಾರ್ (21), ಜಯಕಾಳೇಸ್ವನ್ (19), ಮದನಕುಮಾರ್ (19), ನಂದಗೋಪಾಲ್ (19) ಹಾಗೂ 14, 15 ಮತ್ತು 16 ವರ್ಷದ ಮೂವರು ಬಾಲಕರು ಸೇರಿ ಒಟ್ಟು 9 ಮಂದಿ ಆರೋಪಿಗಳನ್ನು ಗುರುತಿಸಿದ್ದಾರೆ.
ಮತ್ತೊಬ್ಬ ಬಾಲಕಿ ಮೇಲೂ ಅತ್ಯಾಚಾರ?: ಇದೇ ಆರೋಪಿಗಳು 13 ವರ್ಷದ ಮತ್ತೊಬ್ಬ ಬಾಲಕಿ ಮೇಲೂ ಇದೇ ಆರೋಪಿಗಳ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ 17 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಸಂಬಂಧ ಪೋಕ್ಸೋ ಕಾಯ್ದೆಯಡಿ ಎಲ್ಲ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ, ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿದೆ. ಬಂಧಿತ ಪೈಕಿ ಆರು ಜನರನ್ನು ಕೊಯಮತ್ತೂರು ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ. ಉಳಿದ ಮೂವರು ಅಪ್ರಾಪ್ತರನ್ನು ಕೊಯಮತ್ತೂರಿನ ಸರ್ಕಾರದ ಬಾಲ ಗೃಹಕ್ಕೆ ರವಾನಿಸಲಾಗಿದೆ.
ಆರೋಪಿ ಆತ್ಮಹತ್ಯೆಗೆ ಯತ್ನ: ಇದರ ನಡುವೆ 17 ವರ್ಷದ ಬಾಲಕ ಸೋಮವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಚೇತರಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಬಾಲಕನ ಆತ್ಮಹತ್ಯೆ ಯತ್ನದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಮಧ್ಯಪ್ರದೇಶದಲ್ಲಿ 5ರ ಬಾಲಕಿಯ ಮೇಲೆ ರೇಪ್: ಮತ್ತೊಂದೆಡೆ, ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ 17 ವರ್ಷದ ಬಾಲಕನೊಬ್ಬ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ. ಸೋಯತ್ ಕಾಲಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ರವಿವಾರ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಾಲಕ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ಬಾಲಕಿ ತನ್ನ ಕುಟುಂಬ ಸದಸ್ಯರಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೃತ್ಯವು ದೃಢಪಟ್ಟಿದೆ. ಪೋಕ್ಸೋ ಕಾಯ್ದೆಯಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಸುಳ್ಳು ಅತ್ಯಾಚಾರ ಕೇಸ್: ಅಮಾಯಕ ಜೈಲಿನಲ್ಲಿ ಕಳೆದಷ್ಟೇ ಶಿಕ್ಷೆಯನ್ನು ತಪ್ಪಿತಸ್ಥ ಮಹಿಳೆಗೆ ವಿಧಿಸಿದ ಕೋರ್ಟ್