ನವದೆಹಲಿ: ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ರಾಷ್ಟ್ರವ್ಯಾಪಿ ಬೇಡಿಕೆ ವ್ಯಕ್ತವಾಗುತ್ತಿದೆ. ಸರ್ಕಾರಗಳು ಕಠಿಣ ಕಾಯ್ದೆಗಳನ್ನು ರಚಿಸಬೇಕು ಎಂದು ಒತ್ತಾಯ ಕೇಳಿಬಂದಿದೆ. ಈ ನಡುವೆ ಅಚ್ಚರಿಯ ಅಂಶವೊಂದು ಹೊರಬಿದ್ದಿದೆ. ನಮ್ಮನ್ನಾಳುತ್ತಿರುವ ಹಾಲಿ 16 ಸಂಸದರು ಮತ್ತು ಶಾಸಕರ ಮೇಲೆಯೇ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಗಳಿವೆ. ಅದರಲ್ಲಿ 14 ಮಂದಿ ಸಂಸದರಿದ್ದರೆ, ಇಬ್ಬರು ಶಾಸಕರಿದ್ದಾರೆ.
16 ಜನಪ್ರತಿನಿಧಿಗಳ ಮೇಲೆ ಅತ್ಯಾಚಾರ ಕೇಸ್: ಇಂಥದ್ದೊಂದು ಸಂಚಲನಕಾರಿ ಅಂಶವು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (NEW) ನಡೆಸಿದ ವಿಶ್ಲೇಷಣೆಯಲ್ಲಿ ಗೊತ್ತಾಗಿದೆ. ದೇಶಾದ್ಯಂತ ಹಾಲಿ 151 ಸಂಸದರು ಮತ್ತು ಶಾಸಕರ ಮೇಲೆ ಮಹಿಳೆಯರನ್ನು ಪೀಡಿಸಿದ ಪ್ರಕರಣಗಳಿವೆ ಎಂದು ವರದಿ ಹೇಳಿದೆ. ಅದರಲ್ಲಿ ಪ್ರಮುಖವಾಗಿ 16 ನಾಯಕರ ಮೇಲೆ ಅತ್ಯಾಚಾರ ನಡೆಸಿದ ಗಂಭೀರ ಪ್ರಕರಣ ದಾಖಲಾಗಿವೆ. ಆರೋಪ ಸಾಬೀತಾದಲ್ಲಿ ಅವರಿಗೆ ಕನಿಷ್ಠ 10 ಅಥವಾ ಜೀವಾವಧಿ ಶಿಕ್ಷೆಯಾಗುವ ಸಂಭವ ಇದೆ ಎಂದಿದೆ.
ಚುನಾವಣೆಯ ವೇಳೆ ರಾಜಕೀಯ ನಾಯಕರು ಸಲ್ಲಿಸಿದ ಅಫಿಡವಿಟ್ ಅನ್ನು ಎಡಿಆರ್ ಮತ್ತು ನ್ಯೂ ವಿಶ್ಲೇಷಣೆ ಮಾಡಿದೆ. ಹಾಲಿ ಸಂಸದರು ಮತ್ತು ಶಾಸಕರು ಸಲ್ಲಿಸಿರುವ 4,809 ಅಫಿಡವಿಟ್‌ಗಳ ಪೈಕಿ 4,693 ದಾಖಲೆಗಳನ್ನು ವಿಶ್ಲೇಷಿಸಿದೆ. ಇದರಲ್ಲಿ 755 ಸಂಸದರದ್ದು, 3,938 ಶಾಸಕರ ಅಫಿಡವಿಟ್ ಆಗಿದೆ. ಇವುಗಳೆಲ್ಲವೂ, 2019ರಿಂದ 2024ರ ನಡುವೆ ನಡೆದ ವಿವಿಧ ಚುನಾವಣೆಗಳಲ್ಲಿ ಆಯೋಗಕ್ಕೆ ನೀಡಿದ ಮಾಹಿತಿಯಾಗಿದೆ.
ಪಕ್ಷ, ರಾಜ್ಯವಾರು ವಿಶ್ಲೇಷಣೆ: ಬಿಜೆಪಿಯ 54 ಹಾಲಿ ಸಂಸದರು ಮತ್ತು ಶಾಸಕರ ಮೇಲೆ ಪ್ರಕರಣಗಳಿವೆ. ಇದು ರಾಜಕೀಯ ಪಕ್ಷಗಳ ಪೈಕಿ ಅತಿ ಹೆಚ್ಚು. ನಂತರದಲ್ಲಿ ಕಾಂಗ್ರೆಸ್ನ 23 ಮತ್ತು ತೃಣಮೂಲ ಕಾಂಗ್ರೆಸ್ನ (ಟಿಎಂಸಿ) 17 ಹಾಲಿ ಸಂಸದರು ಮತ್ತು ಶಾಸಕರು ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ಘೋಷಿಸಿದ್ದಾರೆ.
ರಾಜ್ಯಗಳಲ್ಲಿ ಪೈಕಿ, ಪಶ್ಚಿಮ ಬಂಗಾಳ ಅತಿ ಹೆಚ್ಚು ಹಾಲಿ ಸಂಸದರು ಮತ್ತು ಶಾಸಕರನ್ನು (25) ಹೊಂದಿದೆ. ಆಂಧ್ರ ಪ್ರದೇಶದ 21, ಒಡಿಶಾದಲ್ಲಿ 17 ಹಾಲಿ ಶಾಸಕರ ಮೇಲೆ ಮಹಿಳಾ ಪೀಡಕ ಕೇಸ್‌ಗಳಿವೆ. ಇದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ನ ತಲಾ ಐದು ಮಂದಿ ಹಾಲಿ ಸಂಸದರು ಮತ್ತು ಶಾಸಕರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಗಂಭೀರ ಪ್ರಕರಣವನ್ನು ಎದುರಿಸುತ್ತಿದ್ದಾರೆ.
ತ್ವರಿತ ವಿಚಾರಣೆ ನಡೆಯಲಿ-ಎಡಿಆರ್: ದೇಶದಲ್ಲಿ 151 ಹಾಲಿ ಸಂಸದರು, ಶಾಸಕರ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯ ಕೇಸ್ಗಳಿದ್ದರೂ ಅವರ ಮೇಲೆ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಮಾಡಬೇಕು. ಜೊತೆಗೆ, ರಾಜಕೀಯ ಪಕ್ಷಗಳೂ ಕೂಡ ಇಂತಹ ಆರೋಪಿತ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಾರದು. ಜನರೂ ಕೂಡ ಅವರನ್ನು ಆಯ್ಕೆ ಮಾಡಬಾರದು ಎಂದು ಎಡಿಆರ್ ಸಲಹೆ ನೀಡಿದೆ.
ಇದನ್ನೂ ಓದಿ: ಮಂಗಳೂರು: ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ, ದೂರು ದಾಖಲು - baby exchange allegation