ಹೈದರಾಬಾದ್ : ಸೈಬರಾಬಾದ್ ಎಸ್ಡಬ್ಲ್ಯುಒಟಿ ಪೊಲೀಸರು ಒಂದೇ ದಿನ ಐದು ಬೆಟ್ಟಿಂಗ್ ಗ್ಯಾಂಗ್ಗಳನ್ನು ಬಂಧಿಸಿದ್ದಾರೆ. ಐಪಿಎಲ್ ಹಿನ್ನೆಲೆಯಲ್ಲಿ ಆನ್ಲೈನ್ ಬೆಟ್ಟಿಂಗ್ ನೆಲೆಗಳ ಮೇಲೆ ಸೋಮವಾರ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. 15 ಜನ ಬೆಟ್ಟಿಂಗ್ ನಿರ್ವಾಹಕರು ಮತ್ತು ಬುಕ್ಕಿಗಳನ್ನು ಬಂಧಿಸಲಾಗಿದೆ. 9 ಜನ ಪರಾರಿಯಾಗಿದ್ದಾರೆ. ಆರೋಪಿಗಳಿಂದ 33.3 ಲಕ್ಷ ನಗದು, 2.07 ಕೋಟಿ ರೂ. ಗಳಿರುವ ಬ್ಯಾಂಕ್ ಖಾತೆ, 88.72 ಲಕ್ಷ ಮೌಲ್ಯದ 75 ಮೊಬೈಲ್ಗಳು, 8 ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು 3.29 ಕೋಟಿ ರೂ. ಆಗಿದೆ.
ಬೆಟ್ಟಿಂಗ್ಗಾಗಿ ಬಳಸಲಾಗುತ್ತಿರುವ ಇನ್ನಿತರ 100 ಬ್ಯಾಂಕ್ ಖಾತೆಗಳಲ್ಲಿ ಸುಮಾರು 10 ಕೋಟಿ ರೂ.ಗಳಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಗ್ಯಾಂಗ್ಗಳ ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳ ಮೂಲಕ 581 ಜನರು ಬೆಟ್ಟಿಂಗ್ ಆಡಿರುವುದು ಕಂಡು ಬಂದಿದೆ. ಸೈಬರಾಬಾದ್ ಪೊಲೀಸ್ ಆಯುಕ್ತ ಅವಿನಾಶ್ ಮಹಂತಿ, ಎಸ್ಒಟಿ ಡಿಸಿಪಿ ಡಿ.ಶ್ರೀನಿವಾಸ್ ಮತ್ತು ಹೆಚ್ಚುವರಿ ಡಿಸಿಪಿಗಳಾದ ಶೋಭನ್ ಮತ್ತು ಶ್ರೀನಿವಾಸ್ ರೆಡ್ಡಿ ಸೋಮವಾರ ಈ ದಾಳಿಯ ವಿವರಗಳನ್ನು ಬಹಿರಂಗಪಡಿಸಿದರು.
ಆನ್ಲೈನ್ ಬೆಟ್ಟಿಂಗ್ ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳನ್ನು ನಡೆಸುತ್ತಿರುವ ಕುಕಟಪಲ್ಲಿಯ ಕೊಗಂತೂರಿ ಸುರೇಶ್ (42) ಎಂಬಾತನನ್ನು ಶಂಶಾಬಾದ್ ಎಸ್ಡಬ್ಲ್ಯೂಒಟಿ ಇನ್ಸ್ಪೆಕ್ಟರ್ ಸಂಜಯ್ ಅವರ ತಂಡವು ಕುಕಟಪಲ್ಲಿಯಲ್ಲಿ ಬಂಧಿಸಿದೆ. ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ವಿಕಾರಾಬಾದ್ನ ಮೋಟ್ಕುಪಲ್ಲಿ ರಾಮಕೃಷ್ಣ ರೆಡ್ಡಿ (30) ಎಂಬಾತನನ್ನು ಬಂಧಿಸಲಾಗಿದೆ. ಮುಖ್ಯ ಸಂಘಟಕ ನರಸರಾವ್ ಪೇಟೆಯ ರಾಮಾಂಜನೇಯಲು ಪರಾರಿಯಾಗಿದ್ದಾನೆ. ಈ ದಾಳಿಯಲ್ಲಿ ನಗದು ವಶಪಡಿಸಿಕೊಳ್ಳಲಾಗಿದ್ದು, ಬ್ಯಾಂಕ್ ಖಾತೆಗಳಲ್ಲಿನ ಹಣವನ್ನು ಫ್ರೀಜ್ ಮಾಡಲಾಗಿದೆ. ಇವುಗಳ ಮೌಲ್ಯ ರೂ.79.99 ಲಕ್ಷಗಳಾಗಿದೆ.
ಆಂಧ್ರಪ್ರದೇಶದ ಗುಂಟೂರಿನ ಕಂದುಕುರಿ ವೀರಶಂಕರಾಚಾರಿ (42), ಉಪಾಸಿ ವಂಶಿಕೃಷ್ಣ (30), ಕಡಪ ಜಿಲ್ಲೆಯ ಭೂಮಿರೆಡ್ಡಿ ರಾಮಪ್ರಸಾದ್ ರೆಡ್ಡಿ (53) ಮತ್ತು ನಲ್ಗೊಂಡ ಜಿಲ್ಲೆಯ ಪಬ್ಬಾಟಿ ಮುರಳಿ (40) ಅವರನ್ನು ಎಸ್ಡಬ್ಲ್ಯುಒಟಿ ಮಾದಾಪುರ ಇನ್ಸ್ಪೆಕ್ಟರ್ ದಲಿನಾಯ್ಡು ಅವರ ತಂಡ ಬಂಧಿಸಿದೆ. ಪ್ರಮುಖ ಬೆಟ್ಟಿಂಗ್ ಸಂಘಟಕರಾದ ಬೆಂಗಳೂರಿನ ರಾಜೇಶ್ ರೆಡ್ಡಿ, ಕಡಪ ಜಿಲ್ಲೆ ಪ್ರದ್ದೂರಿನ ಸುರೇಶ್ ರೆಡ್ಡಿ, ಅನಂತಪುರ ಪ್ರದೇಶದ ನಾಗಾರ್ಜುನ ರೆಡ್ಡಿ ಮತ್ತು ನಾಗರ್ ಕರ್ನೂಲ್ ಜಿಲ್ಲೆ ಅಚ್ಚಂಪೇಟದ ಸಾದಿಕ್ (33) ಪರಾರಿಯಾಗಿದ್ದಾರೆ. ಆರೋಪಿಗಳಿಂದ 1.44 ಕೋಟಿ ನಗದು, 80 ಲಕ್ಷ ಮೌಲ್ಯದ 36 ಮೊಬೈಲ್ಗಳು, 2 ಲ್ಯಾಪ್ ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾರ್ಚ್ 22 ಮತ್ತು 14 ರ ನಡುವೆ, ಆರೋಪಿಗಳ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳಲ್ಲಿ 15.84 ಕೋಟಿ ರೂ.ಗಳ ಬೆಟ್ಟಿಂಗ್ ನಡೆದಿದೆ ಎಂದು ಪೊಲೀಸರು ಕಂಡು ಕೊಂಡಿದ್ದಾರೆ.
ಜೆಡಿಮೆಟ್ಲಾದ ಎಚ್ಎಎಲ್ ಕಾಲೋನಿಯಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಗುಂಟೂರು ಜಿಲ್ಲೆಯ ಎಡ್ಲಪಾಡು ನಿವಾಸಿ ಯರ್ರಮಚ್ಚು ಅಜಯ್ ಕುಮಾರ್ (53) ಮತ್ತು ವಿಜಯನಗರಂ ಜಿಲ್ಲೆಯ ಅನಡುಲ ಮಹೇಶ್ ಕುಮಾರ್ ಅವರನ್ನು ಬಾಲನಗರ ಎಸ್ಡಬ್ಲ್ಯೂಒಟಿ ಇನ್ಸ್ಪೆಕ್ಟರ್ ಶ್ಯಾಮಸುಂದರ್ ಅವರ ತಂಡ ಬಂಧಿಸಿದೆ. ಬಂಧಿತರಿಂದ 1.98 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ನರೇಶ್ ಅಲಿಯಾಸ್ ನಾನಿ ಪರಾರಿಯಾಗಿದ್ದಾನೆ.
ಬಚುಪಲ್ಲಿಯ ಸಾಯಿನಗರದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಕ್ಯಾಬ್ ಚಾಲಕ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆ ಮುಪ್ಪಳ್ಳದ ಮೊರ್ಟಾಲ ಶ್ರೀಕಾಂತ್ ರೆಡ್ಡಿ (30), ಐಟಿ ಉದ್ಯೋಗಿ ನಿಜಾಮಪೇಟೆಯ ಅಲಿ ಲೋಕೇಶ್ (29) ಮತ್ತು ಕಡಪ ಜಿಲ್ಲೆಯ ಚೆನ್ನೂರಿನ ವೆಂಕಟ ಸುನಿಲ್ (28) ಅವರನ್ನು ಎಸ್ಡಬ್ಲ್ಯುಒಟಿ ಮಾದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 15.13 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿಗಳಾದ ನಿಲೇಶ್ ಮತ್ತು ಬುದ್ಧ ರೆಡ್ಡಿ ಪರಾರಿಯಾಗಿದ್ದಾರೆ.
ಆ್ಯಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ ದುಂಡಿಗಲ್ ಮಲ್ಲಂಪೇಟೆಯ ಚಿನ್ನಬಾಬು, ಚೆನ್ನಮಶೆಟ್ಟಿ ಕರಿಮುಲ್ಲಾ ಶೇಖ್ ಖಾದ್ರಿ, ಪನಮತಿ ವೆಂಕಟೇಶ್ ಮತ್ತು ದೊಂಡಾ ರಮೇಶ್ ಅವರನ್ನು ಶಂಶಾಬಾದ್ ಎಸ್ಡಬ್ಲ್ಯುಒಟಿ ತಂಡ ಬಂಧಿಸಿದೆ. ಈ ಪ್ರಕರಣದ ಪ್ರಮುಖ ಮಾಸ್ಟರ್ ಮೈಂಡ್ ಆಂಧ್ರಪ್ರದೇಶದ ಭೀಮಾವರಂ ಪ್ರದೇಶದವನಾದ ಕಲ್ಯಾಣ್ ಪರಾರಿಯಾಗಿದ್ದಾನೆ. ಬಂಧಿತರಿಂದ 6.05 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಅಯೋಧ್ಯೆ ಬಾಲರಾಮನಿಗೆ ಮೊದಲ ರಾಮನವಮಿ: 19 ಗಂಟೆ ಭಕ್ತರಿಗೆ ದರ್ಶನ ಭಾಗ್ಯ, VIP ಗಳಿಗೆ ನೋ ಎಂಟ್ರಿ - RAMA NAVAMI