ರಾಂಚಿ (ಜಾರ್ಖಂಡ್) : ಎಕ್ಸ್‌ಟ್ರೀಮ್ ಬಾರ್‌ನಲ್ಲಿ ನಡೆದ ಕೊಲೆ ಮತ್ತು ಕೊಲೆ ಆರೋಪಿ ಅಭಿಷೇಕ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ರಾಂಚಿ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಬಾರ್ ಮರ್ಡರ್ ಕೇಸ್ನಲ್ಲಿ ಹಂತಕ ಅಭಿಷೇಕ್ ಮಾತ್ರವಲ್ಲದೇ ಬಾರ್‌ನಲ್ಲಿ ಕೊಲೆಗೂ ಮುನ್ನ ನಡೆದ ಮಾರಾಮಾರಿಯಲ್ಲಿ ಭಾಗಿಯಾಗಿದ್ದ 12 ಮಂದಿ ಜತೆಗೆ ಅಭಿಷೇಕ್ ತಂದೆಯನ್ನೂ ಬಂಧಿಸಲಾಗಿದೆ.
ಒಟ್ಟು 14 ಜನರು ಜೈಲಿಗೆ : ಕಳೆದ ಭಾನುವಾರ ಎಕ್ಸ್‌ಟ್ರೀಮ್ ಬಾರ್‌ನಲ್ಲಿ ನಡೆದ ಗಲಾಟೆಯ ನಂತರ ಡಿ ಜೆ ಸಂದೀಪ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕ್ರಮ ಕೈಗೊಂಡಿರುವ ಪೊಲೀಸರು ಒಟ್ಟು 14 ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಾರ್ ಘಟನೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ರಾಂಚಿಯ ಹಿರಿಯ ಎಸ್ಪಿ ಚಂದನ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಮೊದಲ ಪ್ರಕರಣ ಡಿಜೆ ಸಂದೀಪ್ ಹತ್ಯೆ ಪ್ರಕರಣವಾಗಿದ್ದು, ಒಟ್ಟು ಐವರನ್ನು ಬಂಧಿಸಲಾಗಿದೆ.
ಸಂದೀಪ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಭಿಷೇಕ್ ಸಿಂಗ್, ಆತನ ತಂದೆ ಸಂಜಯ್ ಸಿಂಗ್ ಮತ್ತು ಆತನ ಮೂವರು ಸ್ನೇಹಿತರಾದ ಅಲೋಕ್ ಸಿಂಗ್, ಪ್ರತೀಕ್ ಮತ್ತು ಶಂಶುದ್ದೀನ್ ಸಾಕ್ಷ್ಯಗಳನ್ನು ಬಚ್ಚಿಟ್ಟು ಅಭಿಷೇಕ್‌ಗೆ ಸಹಾಯ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ. ಎರಡನೇ ಪ್ರಕರಣದಲ್ಲಿ ಅಭಿಷೇಕ್ ಸಿಂಗ್ ಮತ್ತು ಆತನ ಸಹಚರರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಾರ್‌ಗೆ ಸಂಬಂಧಿಸಿದ ಒಟ್ಟು ಒಂಬತ್ತು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಸಿಸಿಟಿವಿ ಮೂಲಕ ಗುರುತು ಪತ್ತೆ ಹಚ್ಚಿದ ಪೊಲೀಸರು : ಅಭಿಷೇಕ್ ಸಿಂಗ್ ಮತ್ತು ಅವರ ಸಹಚರರು ಎಕ್ಸ್‌ಟ್ರೀಮ್ ಬಾರ್‌ನ ಬೌನ್ಸರ್ ಮತ್ತು ಬಾರ್ ಮಾಲಿಕರಿಗೆ ಕ್ರೂರವಾಗಿ ಥಳಿಸಿದ್ದಾರೆ. ಹೊಡೆದಾಟದ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಗಳದಿಂದ ಗಾಯಗೊಂಡ ಅಭಿಷೇಕ್ ಸಿಂಗ್ ಬಾರ್‌ಗೆ ನುಗ್ಗಿ ಗುಂಡು ಹಾರಿಸಿ ಡಿಜೆ ಸಂದೀಪ್‌ನನ್ನು ಕೊಂದಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅಭಿಷೇಕ್ ಮತ್ತು ಆತನ ಸಹಚರರ ಮೇಲೆ ಹಲ್ಲೆ ನಡೆಸಿದ ಎಲ್ಲ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಅಭಿಷೇಕ್ ಸಿಂಗ್ ಮತ್ತು ಆತನ ಸಹಚರರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾದವರಲ್ಲಿ ವಿಶಾಲ್ ಸಿಂಗ್, ತುಷಾರ್ ತಂತಿ, ಅಜಿತ್ ಕುಮಾರ್, ಶುಭಂ ಕುಮಾರ್, ಸಫೀರ್ ಅಹ್ಮದ್, ವಿಶಾಲ್ ಸಾಹು, ಉದಯ್ ಶಂಕರ್ ಸಿಂಗ್, ಪಂಕಜ್ ಅಗರ್ವಾಲ್ ಮತ್ತು ಮನೀಶ್ ಕುಮಾರ್ ಸೇರಿದ್ದಾರೆ.
ಅಭಿಷೇಕ್ ಮದ್ಯ ಕಳ್ಳಸಾಗಣೆ ಮತ್ತು ವಾಹನ ವಂಚನೆಯಲ್ಲಿಯೂ ಭಾಗಿ : ಪ್ರಮುಖ ಆರೋಪಿ ಅಭಿಷೇಕ್ ಸಿಂಗ್ ಅವರ ಮನೆಯಲ್ಲಿ ತಪಾಸಣೆ ನಡೆಸಿದಾಗ, ವಾಹನಗಳ ಖರೀದಿ ಮತ್ತು ಮಾರಾಟದಲ್ಲಿ ಜನರನ್ನು ವಂಚಿಸುತ್ತಿದ್ದ ಬಗ್ಗೆ ಹಲವು ದಾಖಲೆಗಳು ಪತ್ತೆಯಾಗಿವೆ ಎಂದು ರಾಂಚಿ ಎಸ್‌ಎಸ್‌ಪಿ ಚಂದನ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ. ಅದೇ ರೀತಿ, ಬಿಹಾರದಲ್ಲಿ ಮದ್ಯದ ವ್ಯಾಪಾರವನ್ನೂ ಮಾಡುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಬಿಹಾರ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಪಾಟ್ನಾಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ : ದೆಹಲಿಯಲ್ಲಿ ಯುಪಿಯ ಮೋಸ್ಟ್ ವಾಂಟೆಡ್ ಲೇಡಿ ಡಾನ್ ಬಂಧನ - Lady Don Arrested