ರಾಜ್ಯದಲ್ಲಿ ನೈಟ್ ಕರ್ಫ್ಯೂ ಇಲ್ಲ, ನಿಯಮ ಉಲ್ಲಂಘಿಸಿದ್ರೆ ದಂಡ ಫಿಕ್ಸ್: ಬಿಎಸ್ವೈ
🎬 Watch Now: Feature Video
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಕಾರಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ತಜ್ಞರ ಸಭೆ ನಡೆಸಿದರು. ಈ ವೇಳೆ ತಕ್ಷಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪ್ರಮುಖವಾಗಿ ಇದು ಕೋವಿಡ್ನ ಎರಡನೇ ಅಲೆಯಾಗಿದ್ದು, ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು ಎಂದರು. ರಾಜ್ಯದಲ್ಲಿ ಲಾಕ್ಡೌನ್ ಬೇಡ ಅಂದರೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇದೇ ವೇಳೆ, ನೈಟ್ ಕರ್ಫ್ಯೂ ಮಾಡದಂತೆ ತಜ್ಞರ ಸಮಿತಿ ಸಲಹೆ ನೀಡಿದೆ ಎಂದರು. ಜಾತ್ರೆ, ಸಭೆ-ಸಮಾರಂಭ ಹಾಗೂ ಮನೆಯಿಂದ ಹೊರಗಡೆ ಹೋಗುವಾಗ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಈ ಹಿಂದಿನಂತೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. ಮದುವೆ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ 500 ಜನರು ಮಾತ್ರ ಭಾಗಿಯಾಗಲು ಕಾನೂನು ತರಲಾಗುವುದು. ಹೆಚ್ಚಿನ ಕೊರೊನಾ ಸೋಂಕು ಕಂಡು ಬಂದಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಕೊರೊನಾ ವ್ಯಾಕ್ಸಿನ್ ರವಾನೆ ಮಾಡುವುದು ಹಾಗೂ ಪರೀಕ್ಷೆ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ಬೆಂಗಳೂರಿನ ಜನರಲ್ಲಿ ಬಿಎಸ್ವೈ ವಿಶೇಷ ಮನವಿ ಮಾಡಿಕೊಂಡಿದ್ದು, ಲಾಕ್ಡೌನ್ಗೆ ಅವಕಾಶ ಮಾಡಿಕೊಡಬೇಡಿ ಎಂದರು. ಇನ್ನು ಮಾರ್ಚ್ 17ರಂದು ಬಿಎಸ್ವೈ ಪ್ರಧಾನಿ ಮೋದಿ ಜತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿ ಚರ್ಚೆ ನಡೆಸಲಿದ್ದಾರೆ.
Last Updated : Mar 15, 2021, 7:06 PM IST