ಮೈಸೂರು: ಕಾಡು ಬಿಟ್ಟು ನಾಡಿಗಿಳಿದ ಆನೆಗಳ ದಂಡು; ರೈತರ ಆತಂಕ - etv bharat kannada
🎬 Watch Now: Feature Video
ಮೈಸೂರು: ಕಾಡಾನೆಗಳ ಗುಂಪೊಂದು ಇಲ್ಲಿನ ನುಗು ಜಲಾಶಯದ ಗ್ರಾಮಗಳ ಕೆರೆಗಳಲ್ಲಿ ಬಂದು ಬೀಡುಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ. ಗಜಪಡೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟಲು ಪ್ರಯತ್ನಿಸಿದ್ದು, ಐದು ಕಾಡಾನೆಗಳು ಕಬ್ಬಿನ ಗದ್ದೆಯಲ್ಲಿಯೇ ಉಳಿದಿವೆ. ಇವುಗಳನ್ನು ಓಡಿಸಲು ಇಂದು ಬೆಳಗಿನಿಂದಲೇ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಜಿಲ್ಲೆಯ ಸರಗೂರು ತಾಲೂಕಿನ ನುಗು ಹಿನ್ನೀರು ಸಮೀಪದ ಹೊಸಬಿರ್ವಾಳು ಗ್ರಾಮ ಮತ್ತು ಮುಳ್ಳೂರು ಗ್ರಾಮದ ಹೊರವಲಯದಲ್ಲಿ ಆನೆಗಳು ಕಾಣಿಸಿಕೊಂಡಿವೆ. ಬಂಡೀಪುರ ವನ್ಯಜೀವಿ ವಲಯದಿಂದ ನುಗು ಜಲಾಶಯದ ಹಿನ್ನೀರಿನ ಮಾರ್ಗವಾಗಿ ಕಾಡಿನಿಂದ ಹೊರಬಂದಿದ್ದು ಹೊಸಬಿರ್ವಾಳು ಮತ್ತು ಮುಳ್ಳೂರು ಗ್ರಾಮಗಳ ನಡುವಿನ ಬೆಟ್ಟದ ತಪ್ಪಲಿನ ಕಬ್ಬಿನ ಗದ್ದೆಯಲ್ಲಿ ಸೇರಿಕೊಂಡಿವೆ.
ಬುಧವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ 5 ಆನೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ್ದ ಸಿಬ್ಬಂದಿ ಕಾಡಿಗೆ ಓಡಿಸಲು ಶ್ರಮಿಸಿದ್ದರು. ರಾಗಿ, ಕಬ್ಬು ಸೇರಿದಂತೆ ಇತರೆ ಬೆಳೆಗಳು ನಾಶವಾಗುವ ಆತಂಕ ಇಲ್ಲಿನ ರೈತರದ್ದು. ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಲು ಪಟಾಕಿ ಸಿಡಿಸಿದ್ದಾರೆ. ಭಯಪಟ್ಟ ಆನೆಗಳು ಎರಡು ಬಾರಿ ಗದ್ದೆಯಿಂದ ಹೊರಬರಲು ಪ್ರಯತ್ನಿಸಿವೆ.
ಅರಣ್ಯಾಧಿಕಾರಿಗಳ ಪ್ರತಿಕ್ರಿಯೆ: "ಕಾಡಾನೆಗಳು ಆಹಾರ ಹುಡುಕುತ್ತಾ ಮುಳ್ಳೂರು ಬೆಟ್ಟದಿಂದ ಹೊಸಬಿರ್ವಾಳು ಕಡೆ ಬಂದಿವೆ. ಇವುಗಳನ್ನು ಕಾಡಿಗೆ ಓಡಿಸಲು ನಾವು ಸಾಕಷ್ಟು ಪಯತ್ನ ಮಾಡಿದ್ದೇವೆ. ಆದರೆ ಆನೆಗಳು ಕಾಡಿಗೆ ಹೋಗದೆ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿವೆ. ರಾತ್ರಿ ಜನಸಂಖ್ಯೆ ಕಡಿಮೆಯಾದ ಬಳಿಕ ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸಲಾಗುವುದು. ಇಂದು ಬೆಳಗ್ಗೆ ಕಾರ್ಯಾಚರಣೆ ಆರಂಭಿಸಲಾಗಿದೆ" ಎಂದು ಈಟಿವಿ ಭಾರತ್ಗೆ ನುಗು ವಲಯ ಅರಣ್ಯಾಧಿಕಾರಿ ನಿವೇದಿತಾ ತಿಳಿಸಿದರು.
ಇದನ್ನೂ ಓದಿ: ತೋಟದ ಮನೆಗೆ ನುಗ್ಗಿದ್ದ ಚಿರತೆಯನ್ನು ಕೂಡಿಹಾಕಿದ ಗ್ರಾಮಸ್ಥರು